Anika: ಅನಿಕಾ ಪಾತ್ರದಾರಿ ರಚನಾ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಮಲಿ'ಯ ಬ್ಯೂಟಿಫುಲ್ ವಿಲನ್ ಅನಿಕಾ ಮಹಾಜನ್ ಆಗಿ ನಟಿಸಿ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಚೆಂದುಳ್ಳಿ ಚೆಲುವೆ ರಚನಾ ಸ್ಮಿತ್ ಮನೋಜ್ಞ ನಟನೆಯ ಮೂಲಕ ಸೀರಿಯಲ್ ಲೋಕದಲ್ಲಿ ಮನೆ ಮಾತಾಗಿದ್ದಾರೆ.
'ಕಮಲಿ' ಧಾರಾವಾಹಿಯಲ್ಲಿ ಅನಿಕಾ ಪಾತ್ರ ಸಾಕಷ್ಟು ಪ್ರಖ್ಯಾತಿ ಪಡೆದಿದೆ. ಸಿಟ್ಟು ಮಾಡಿಕೊಂಡು ಮೂಗು ಉಜ್ಜುತ್ತ, ಕೆಸರಿನ ಕಮಲಿ ಎಂದು ಡೈಲಾಗ್ ಹೇಳುವ ಅನಿಕಾ ಪರಿಚಯ ಧಾರಾವಾಹಿ ವೀಕ್ಷಕರಿಗೆ ಇದ್ದೇ ಇದೆ. ಈ ಧಾರಾವಾಹಿಯಲ್ಲಿ ಈ ದೃಶ್ಯ ಒಂಥರ ಸಿಗ್ನೇಚರ್ ಸೀನ್ ಆಗಿಬಿಟ್ಟಿದೆ. ಈ ಪಾತ್ರ ಮಾಡುತ್ತಿರುವವರು ನಟಿ ರಚನಾ ಸ್ಮಿತ್.
ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದ ರಚನಾಗೆ ಜನಪ್ರಿಯತೆ ದೊರಕಿದ್ದು 'ಕಮಲಿ'ಯ ಅನಿಕಾ ಆಗಿ ಬದಲಾದ ಬಳಿಕವೇ. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಮಿಂಚಿದ್ದ ರಚನಾ ಸ್ಮಿತ್ ಇಂದು ಕಿರುತೆರೆ ಲೋಕದಲ್ಲಿ ಅದೆಷ್ಟು ಫೇಮಸ್ಸು ಎಂದರೆ ಹಲವರಿಗೆ ಆಕೆಯ ನಿಜವಾದ ಹೆಸರು ರಚನಾ ಎಂದೇ ಗೊತ್ತಿಲ್ಲ!

ಬೆಳ್ಳಿ ತೆರೆ ಇಂದ ಕಿರುತೆರೆಗೆ ರಚನಾ
ರಚನಾ ಇಂದು ಎಲ್ಲೇ ಹೋದರೂ ಜನ ಆಕೆಯನ್ನು ಗುರುತಿಸುವುದು ಅನಿಕಾ ಆಗಿ. ಅಷ್ಟರ ಮಟ್ಟಿಗೆ ಆ ಪಾತ್ರ ಜನರಿಗೆ ಹಿಡಿಸಿದೆ. ಬೆಳ್ಳಿತೆರೆಯಿಂದ ಕಿರುತೆರೆಗೆ ಕಾಲಿಟ್ಟ ಮೋಹಕ ಬೆಡಗಿ ರಚನಾ ಇದೀಗ ಬೆಳ್ಳಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಮುರುಗ ಆಲಿಯಾಸ್ ಮುನಿಕೃಷ್ಣ ಅಭಿನಯದ 'ಕೊಡೆಮುರುಗ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಕೊಡೆಮುರುಗ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ
'ಕೊಡೆಮುರುಗ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಕೊಡೆಮುರುಗ ಸಿನಿಮಾದ ಪೋಸ್ಟರ್ ಅನ್ನು ದಿ. ಡಾ. ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದು ನನಗೆ ತುಂಬಾ ಸಂತಸ ನೀಡಿದೆ. ಈ ಸಿನಿಮಾದ ಹೊರತಾಗಿ ಬೇರೆ ಯಾವುದೇ ಪ್ರಾಜೆಗ್ಟ್ ಗಳನ್ನು ನಾನು ಒಪ್ಪಿಕೊಂಡಿಲ್ಲ. ಇದರ ಹೊರತಾಗಿ ನಾನು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದೇನೆ? ಎನ್ನುತ್ತಾರೆ ರಚನಾ ಸ್ಮಿತ್. 10ನೇ ತರಗತಿ ಪಾಸ್ ಆದ ಬಳಿಕ ಎರಡು ವರ್ಷ ಮಾಡೆಲಿಂಗ್ ಮಾಡಿದ ರಚನಾ, ಸಿನಿಮಾಗಳಲ್ಲಿ ನಟಿಸಬೇಕೆಂದು 'ವರದನಾಯಕ' ಸಿನಿಮಾಕ್ಕೆ ಆಡಿಶನ್ ನೀಡಿ ಆಯ್ಕೆ ಆದರು. ಅದೇ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ 'ವಿಕ್ಟರಿ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಕೊಡೆಮುರುಗ' ಸಿನಿಮಾದಲ್ಲಿ ಡಾಕ್ಟರ್ ಪಾತ್ರ
'ವರದನಾಯಕ', 'ವಿಕ್ಟರಿ', 'ಗೆಸ್ಟ್ ಹೌಸ್' ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ರಂಜಿಸಿದ ರಚನಾ ಸ್ಮಿತ್ ಇದೀಗ 'ಕೊಡೆ ಮುರುಗ' ಸಿನಿಮಾದಲ್ಲಿ ಡಾಕ್ಟರ್ ಆಗಿ ನಟಿಸಲಿದ್ದಾರೆ. ರಚನಾ ಸ್ಮಿತ್ ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 9 ವರ್ಷಗಳು ಕಳೆದಿದೆ. ರಚನಾ ನಟನಾ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಕಮಲಿ ಧಾರಾವಾಹಿಯೇ ಕಾರಣ.

ಮಾಡೆಲಿಂಗ್‌ನಲ್ಲಿ ಹೆಸರು ಗಳಿಸಿದ್ದ ರಚನಾ
ಮಾಡೆಲಿಂಗ್ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ರಚನಾ ಮೊದಲ ಬಾರಿ ರ್ಯಾಂಪ್ ವಾಕ್ ಮಾಡಿದಾಗ ಕೇವಲ ಹದಿನೇಳು ವರ್ಷ. ಹಿಂದಿಯ ಜೂಮ್ ಟಿವಿ ಆಯೋಜಿಸಿದ್ದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನಿಂದ ಇಬ್ಬರು ಆಯ್ಕೆಯಾಗಿದ್ದು ಅದರಲ್ಲಿ ಒಬ್ಬಾಕೆ ರಚನಾ ಸ್ಮಿತ್. ಒಂದಷ್ಟು ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿರುವ ರಚನಾ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋ ಮೂಲಕ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್ ಸೂಪರ್ ಗುರು ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ರಚನಾ ಅಲ್ಲೂ ಸೈ ಎನಿಸಿಕೊಂಡಾಕೆ. ಕಮಲಿಯಲ್ಲಿ ಖಳನಾಯಕಿಯಾಗಿ ನಟಿಸಿ ಸೀರಿಯಲ್ ಪ್ರಿಯರ ಮನ ಗೆದ್ದಿರುವ ರಚನಾ ಬೆಸ್ಟ್ ವಿಲನ್ ಪ್ರಶಸ್ತಿ ಪಡೆದಿದ್ದಾರೆ. ಇಷ್ಟು ದಿನ ಸೀರಿಯಲ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ರಚನಾ ಇದೀಗ ಸಿನಿಮಾ ಮೂಲಕ ಮನರಂಜನೆ ನೀಡಲು ಮರಳುತ್ತಿದ್ದಾರೆ.


Click it and Unblock the Notifications











