ಕಿರುತೆರೆಗೆ ಮರಳಿದ ಕಮಲಿಯ ರಿಷಿ ಸರ್; ಯಾವ ಧಾರಾವಾಹಿ ಗೊತ್ತಾ?
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಧಾರಾವಾಹಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. ಇದೀಗ ಈ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. ಹೌದು, 'ನಿನ್ನ ಜೊತೆ ನನ್ನ ಕಥೆ' ಎನ್ನುವ ಧಾರಾವಾಹಿಯು ಶುರುವಾಗಲಿದ್ದು ಅದರ ಪ್ರೋಮೋ ಸಾಕಷ್ಟು ಸದ್ದು ಮಾಡುತ್ತಿದೆ. ಅಂದ ಹಾಗೇ ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ನಿರಂಜನ್.
'ಕಮಲಿ' ಧಾರಾವಾಹಿಯಲ್ಲಿ ನಾಯಕ ರಿಷಿ ಆಗಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದಿದ್ದರು ನಿರಂಜನ್. 'ಕಮಲಿ' ಧಾರಾವಾಹಿಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ನಿರಂಜನ್ ಅವರ ಕಿರುತೆರೆಯ ಜರ್ನಿ ಶುರುವಾಗಿದ್ದು 'ಗಾಂಧಾರಿ' ಧಾರಾವಾಹಿಯ ಮೂಲಕ. 'ಗಾಂಧಾರಿ' ಧಾರಾವಾಹಿಯ ಮೂಲಕ ನಾಯಕನ ತಮ್ಮ ಕುಶಲ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ನಿರಂಜನ್ ಎಂಟ್ರಿ ಕೊಟ್ಟಿದ್ದರು.

ನಂತರ 'ಕಮಲಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿರುವ ಇವರು ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದ ಹ್ಯಾಂಡ್‌ಸಮ್ ಹುಡುಗ. ತೆಲುಗು ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ನಿರಂಜನ್ ಅವರ ನಟನಾ ಪಯಣ ಶುರುವಾಗಿದ್ದು ಕಿರುಚಿತ್ರದಿಂದ. ' ನಾಟ್ ಎ ಮರ್ಡರ್' ಎನ್ನುವ ಕಿರುಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು ನಿರಂಜನ್.
ಮುಂದೆ 'ಶಿವ', 'ಬಿಬಿಎಂಪಿ ಸ್ವಚ್ಛತೆಯ ಪ್ರಕರಣ', 'ಹೃದಯಾನೇ ಜೋಕಾಲಿ' ಹೀಗೆ ಹತ್ತಕ್ಕೂ ಹೆಚ್ಚಿನ ಕಿರುಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಅಷ್ಟೇ ಅಲ್ಲದೇ ಇವರ ಅಭಿನಯದ 'ಶ್ರೀರಾಮಚಂದ್ರ ವಿತ್ ಗರ್ಲ್ಸ್' ಎಂಬ ಕಿರುಚಿತ್ರ ಸಕತ್ ಸದ್ದು ಕೂಡಾ ಮಾಡಿತ್ತು. ಅಂದ ಹಾಗೇ ಆಕಸ್ಮಿಕವಾಗಿ ನಟನೆಯ ನಂಟು ಬೆಳೆಸಿಕೊಂಡಿರುವ ನಿರಂಜನ್ ಅವರಿಗೆ ಸೇನೆಗೆ ಸೇರಬೇಕು ಎಂಬ ಬಯಕೆಯಿತ್ತು. ಆದರೆ, ಇದ್ದಕ್ಕಿದ್ದಂತೆ ನಡೆದ ಅಪಘಾತದಿಂದ ಸೇನೆಗೆ ಸೇರುವ ಕನಸು ಕನಸಾಗಿಯೇ ಉಳಿಯಿತು.
ಮುಂದೆ ನಟನೆಗೆ ಕಾಲಿಟ್ಟ ನಿರಂಜನ್ ಇದೀಗ ಮನೋ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಇನ್ನು ನಟನೆಯ ಹೊರತಾಗಿ ನಿರಂಜನ್ ಉತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಹುಡುಗ. ವಾಲಿಬಾಲ್ ಪಂದ್ಯದಲ್ಲಿ ಸತತ ಏಳುಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಇದರ ಜೊತೆಗೆ ಕಬಡ್ಡಿ ಪ್ಲೇಯರ್ ಆಗಿದ್ದ ನಿರಂಜನ್ ಮೂರು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ ಹೌದು.


Click it and Unblock the Notifications











