ಎರಡ್ಮೂರು ಕಿಸ್ಸಿಂಗ್ ಸೀನ್, ಕಾಲು, ಎದೆ ; ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಎಂದವನ ಮೈಚಳಿ ಬಿಡಿಸಿದ ನಟಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.
ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ಕನಿಕಾ ಮಹೇಶ್ವರಿ.

ಹೌದು. ಕನಿಕಾ ಮಹೇಶ್ವರಿ.. ಹಿಂದಿ ಕಿರುತೆರೆಯ ಖ್ಯಾತ ಚೆಲುವೆ. ವಿಲನ್ ಪಾತ್ರಕ್ಕೆ ಹೆಸರುವಾಸಿ ಇವರು. "ಕಭಿ ಆಯೇ ನಾ ಜುದಾಯಿ" ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಕನಿಕಾಗೆ "ದಿಯಾ ಔರ್ ಬಾತಿ ಹಮ್ " ಅಪಾರವಾದ ಜನಪ್ರಿಯತೆಯನ್ನು ತಂದು ಕೊಡ್ತು.
"ಕಹಾನಿ ಘರ್ ಘರ್ ಕೀ".. " ಗೀತ್ -ಹುಯಿ ಸಬ್ಸೆ ಪರಾಯಿ".. "ರಾಜಾ ಕೀ ಆಯೇಗಿ ಬಾರಾತ್".. " ತು ಸೂರಜ್ ಮೈ ಸಾಂಜ್ ಪಿಯಾಜಿ".. ಇವರ ಕೆಲ ಖ್ಯಾತ ಧಾರಾವಾಹಿಗಳು. ಇಂಥಾ ಕನಿಕಾ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಅವಕಾಶದ ನೆಪದಲ್ಲಿ ಹೇಗೆಲ್ಲಾ ಯಾಮಾರಿಸುತ್ತಾರೆ ಎನ್ನುವುದನ್ನು ಹೇಳಿದ್ದಾರೆ.
ಈ ಕುರಿತು ''ಹಾಟರ್‌ಫ್ಲೈ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕನಿಕಾ ಮಹೇಶ್ವರಿ, ಅದೊಂದು ದಿನ ಕಾಸ್ಟಿಂಗ್ ಏಜೆಂಟ್ ಒಬ್ಬ ನನಗೆ ಕರೆ ಮಾಡಿದ್ದ ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.
ಮೇಡಂ ನಮ್ಮ ಈ ಪ್ರಾಜೆಕ್ಟ್‌ನಲ್ಲಿ ಎರಡರಿಂದ ಮೂರು ಕಿಸ್ಸಿಂಗ್ ಸೀನ್‌ಗಳಿರುತ್ತವೆ, ಬೆಡ್ ರೂಮ್ ದೃಶ್ಯ ಕೂಡ ಇರುತ್ತೆ ಎಂದು ಕಥೆ ಹೇಳುವ ಬದಲು ನೇರವಾಗಿ ವಿಷಯಕ್ಕೆ ಆತ ಬಂದ ಎಂದಿರುವ ಕನಿಕಾ ನೀವೇನು ಗಾಬರಿಯಾಗಬೇಡಿ ಬೆಡ್ ರೂಮ್ ಸೀನ್‌ನಲ್ಲಿ ಕೇವಲ ನಿಮ್ಮ ಕಾಲು ಮತ್ತು ಎದೆಯನ್ನು ಮಾತ್ರ ಬೋಲ್ಡ್ ಆಗಿ ತೋರಿಸಲಾಗುತ್ತೆ ಎಂದು ಆತ ಹೇಳಿದ ಎಂದಿದ್ದಾರೆ.

ಕಾಸ್ಟಿಂಗ್ ಏಜೆಂಟ್‌ನ ಈ ಅಸಭ್ಯ ಆಫರ್ ದಿಂದ ಕೆರಳಿದ ಕನಿಕಾ, ನಾನೇನಾದರೂ ನೀಲಿ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದೀನಾ..? ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅಂತಹ ಸಿನಿಮಾಗಳ ಅವಕಾಶ ಇದ್ದರೆ ನನಗೆ ಹೇಳು ಎಂದು ವ್ಯಂಗ್ಯವಾದ ಮಾತುಗಳನ್ನಾಡಿ ಫೋನ್ ಕಟ್ ಮಾಡಿದ್ದಾರೆ.
ಆದರೆ, ಆ ಕಾಸ್ಟಿಂಗ್ ಏಜೆಂಟ್ ಇಷ್ಟಕ್ಕೆ ಸುಮ್ಮನಾಗಲಿಲ್ಲ. ಮತ್ತೊಮ್ಮೆ ಕನಿಕಾಗೆ ಕರೆ ಮಾಡಿದ್ದಾನೆ. ಆಗ ಕನಿಕಾ ಬಿಪಿ ಇನ್ನೂ ಹೆಚ್ಚಾಗಿದೆ. ಕೂಡಲೇ ಫೋನ್ ರಿಸೀವ್ ಮಾಡಿ ನೀನು ಹೇಳುತ್ತಿರುವ ದೃಶ್ಯದಲ್ಲಿ ಎಲ್ಲವನ್ನೂ ತೋರಿಸುತ್ತಿದ್ದೀಯಾ, ಹೀಗಿದ್ದ ಮೇಲೆ ಇದನ್ನು ''ಬ್ಲೂ ಫಿಲ್ಮ್'' ಎನ್ನದೇ ಇನ್ನೇನು ಎನ್ನಬೇಕು ಎಂದು ಕಿಡಿ ಕಾರಿದ್ದಾರೆ.
ಕನಿಕಾ ಅವರ ಈ ಮಾತುಗಳಿಗೆ ಕಂಗಾಲಾದ ಆ ವ್ಯಕ್ತಿ ಆ ನಂತರ ಇಂದಿನ ದಿನಗಳಲ್ಲಿ ಇದೆಲ್ಲವೂ ಮಾಮೂಲು, ಪ್ರತಿಯೊಬ್ಬರು ಕೂಡ ಇಂತಹ ದೃಶ್ಯ ಮತ್ತು ಸನ್ನಿವೇಶಗಳಲ್ಲಿ ಅಭಿನಯಿಸುತ್ತಾರೆ ಎಂದು ತನ್ನನ್ನೂ ತಾನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆ ನಂತರ ಮೆಲ್ಲನೆ ಜಾರಿಕೊಂಡಿದ್ದಾನೆ.
ಇನ್ನು ಇದೇ ಸಮಯದಲ್ಲಿ ಬಣ್ಣದ ಲೋಕದಲ್ಲಿ ಇಂತಹ ಅನುಚಿತ ಬೇಡಿಕೆ, ಅಸಭ್ಯ ಅಶ್ಲೀಲ ಆಫರ್ ಗಳಿಂದ ಅಂತರ ಕಾಪಾಡಿಕೊಳ್ಳುವುದು ಹೇಗೆ..? ಕಾಮಾಂಧರ ಕಣ್ಣಿಂದ ಸುರಕ್ಷಿತವಾಗಿ ತಪ್ಪಿಸಿಕೊಳ್ಳುವುದು ಹೇಗೆ..? ಎನ್ನುವ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಕನಿಕಾ, ಉದ್ಯಮದಲ್ಲಿ ಯಾರಿಗಾದರೂ ಕೆಟ್ಟ ಉದ್ದೇಶವಿದ್ದರೆ ಅವರು ಪರೋಕ್ಷವಾಗಿಯೇ ಕೆಲವು ಸುಳಿವುಗಳನ್ನು ನೀಡುತ್ತಾರೆ. ಉದಾಹರಣೆಗೆ ನೀವು ಎಲ್ಲಿ ವಾಸಿಸುತ್ತಿದ್ದೀರಿ?, ಮನೆಯಲ್ಲಿ ಯಾರಿದ್ದಾರೆ?, ಯಾವ ಸಮಯದಲ್ಲಿ ಮಲಗುತ್ತೀರಿ? ಎನ್ನುವಂತಹ ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳನ್ನು ಕೇಳಲು ಶುರುಮಾಡುತ್ತಾರೆ. ಇಂತಹ ಪ್ರಶ್ನೆಗಳಿಂದಲೇ ಅವರ ದುರುದ್ದೇಶಗಳನ್ನು ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ. ಸದ್ಯ ಕನಿಕಾ ಮಹೇಶ್ವರಿ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ.


Click it and Unblock the Notifications