ಕಥೆಯೊಂದು ಮುಗಿದ ಬೇಸರದಲ್ಲೇ "ಹೊಸ ಪ್ರಾಜೆಕ್ಟ್ ಮೂಲಕ ರಂಜಿಸಲು ರೆಡಿ" ಕಿರುತೆರೆ ನಟ ಚಂದು ಗೌಡ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯು ಮುಕ್ತಾಯಗೊಂಡಿದೆ. 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕ ಯುವರಾಜ್ ಬಹದ್ದೂರ್ ಪಾತ್ರದಲ್ಲಿ ನಟಿಸಿದ್ದ ಚಂದು ಗೌಡ ಒಂದು ಸುಂದರ ಪಯಣದ ಮುಕ್ತಾಯವಾಗಿದೆ ಎಂದು ಹೇಳಿದ್ದಾರೆ.
ಫಿಲ್ಮಿಬೀಟ್ ಕನ್ನಡಗೆ ಪ್ರತಿಕ್ರಿಯೆ ನೀಡಿರುವ ಚಂದು ಗೌಡ "ಈ ಧಾರಾವಾಹಿ ಇದ್ದಕ್ಕಿದ್ದಂತೆ ಮುಕ್ತಾಯ ಕಂಡಿರುವುದು ನನಗಂತೂ ಬೇಸರ ತಂದಿದೆ. ತುಂಬಾ ವರ್ಷವಾದ ನಂತರ ಇದು ನನ್ನ ಮನಸ್ಸಿಗೆ ಇಷ್ಟವಾದ ಕಥೆಯಾಗಿತ್ತು. ಕಾರಣಾಂತರಗಳಿಂದ ಧಾರಾವಾಹಿ ಮುಕ್ತಾಯಗೊಂಡಿದ್ದು, ನನಗೂ ಬೇಸರವಿದೆ. ಆದರೆ ಸಮಾಧಾನವೆಂದರೆ ಒಂದು ಒಳ್ಳೆಯ ಟೀಂ ಜೊತೆಗೆ ಕೆಲಸ ಮಾಡುವ ಅವಕಾಶ ನನಗೆ ದೊರಕಿತ್ತು. ಡೈರೆಕ್ಟರ್, ಪ್ರೊಡ್ಯೂಸರ್ ಅನಿಲ್ ಕೋರಮಂಗಲ ಅವರ ಜೊತೆಗೆ ಕೆಲಸ ಮಾಡಿದ್ದರಿಂದ ಒಂದು ಒಳ್ಳೆಯ ಅನುಭವವೂ ದೊರಕಿತು" ಎಂದು ಹೇಳಿದ್ದಾರೆ.

"ಡೈರೆಕ್ಷನ್ ಡಿಪಾರ್ಟ್‌ಮೆಂಟ್, ಟೆಕ್ನಿಕಲ್ ಡಿಪಾರ್ಟ್‌ಮೆಂಟ್ ಜೊತೆಗೆ ಇಡೀ ಕಲಾವಿದರ ತಂಡ ಎಲ್ಲವೂ ಕೂಡಾ ತುಂಬಾ ಸೊಗಸಾಗಿತ್ತು. ಇವರೆಲ್ಲರ ನಡುವೆ ನಾನು ಒಬ್ಬ ಆಗಿ ಗುರುತಿಸಿಕೊಂಡಿದ್ದು ಕೂಡಾ ನನಗೆ ತುಂಬಾನೇ ಖುಷಿಯಿದೆ. All good things must end to great things to start ಎನ್ನುವ ಮಾತೇ ಇದೆ. ಈಗಾಗಲೇ ಹೊಸ ಪ್ರಾಜೆಕ್ಟ್ ಜೊತೆಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ನಿಮ್ಮನ್ನು ರಂಜಿಸಲು ಮತ್ತೆ ಬಂದೇ ಬರುತ್ತೇನೆ" ಎಂದು ಹೇಳಿದ್ದಾರೆ ನಟ ಚಂದು ಗೌಡ.
"ಇನ್ನು ಕಥೆಯೊಂದು ಶುರುವಾಗಿದೆ ಧಾರಾವಾಹಿಯ ಯುವರಾಜ್ ಪಾತ್ರ ನನ್ನ ವೃತ್ತಿ ಬದುಕಿನಲ್ಲಿ ಮಹತ್ವದ ಪಾತ್ರ ಆಗಿತ್ತು. ಯಾಕೆಂದರೆ, ಆ ಒಂದು ಪಾತ್ರವಾದರೂ ಅದರಲ್ಲಿ ಡಿಫರೆಂಟ್ ಶೇಡ್‌ಗಳಿತ್ತು. ನಾನು ಬಣ್ಣದ ಲೋಕದ ನಂಟು ಬೆಳೆಸಿಕೊಂಡು ಒಂಭತ್ತು ವರ್ಷ ಆಯ್ತು. ಈ ಒಂಭತ್ತು ವರ್ಷದಲ್ಲಿ ಹಿಂತಿರುಗಿ ನೋಡಿದಾಗ ಇಷ್ಟು ವರ್ಷಗಳಲ್ಲಿ ಡಿಫರೆಂಟ್ ಪಾತ್ರಗಳಿಗೆ ಜೀವ ತುಂಬುವ ಅವಕಾಶ ನನಗೆ ದೊರಕಿತ್ತು. ತುಂಬಾ ಖುಷಿ ಆಗುತ್ತದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುವಾಗ ಚಂದು ಗೌಡ ಹೇಳಿಕೊಂಡಿದ್ದಾರೆ.

"ಕಥೆಯೊಂದು ಶುರುವಾಗಿದೆ ಧಾರಾವಾಹಿ ಶುರುವಾದಾಗ ಸೂರಜ್ ಹೂಗಾರ್ ಅವರು ಯುವರಾಜ ಬಹಾದ್ದೂರ್ ಆಗಿ ಕಾಣಿಸಿಕೊಂಡಿದ್ದರು. ಮುಂದೆ ಅವರು ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ನಾನು ಆಯ್ಕೆಯಾದೆ. ಅರ್ಧದಲ್ಲಿ ಧಾರಾವಾಹಿಗೆ ಬಂದ ಕಾರಣ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಅಳುಕಿತ್ತು. ಆದರೆ, ಜನರ ಪ್ರೀತಿ ಅದನ್ನು ದೂರ ಮಾಡಿತು" ಎಂದು ತಮ್ಮ ಪಯಣದ ಬಗ್ಗೆ ಚಂದು ಗೌಡ ಹೇಳುತ್ತಾರೆ.
'ಕಥೆಯೊಂದು ಶುರುವಾಗಿದೆ' ಧಾರಾವಾಹಿಯು ಇನ್ನೂರು ಸಂಚಿಕೆ ಪೂರೈಸಿದಾಗಲೂ ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದರು ಚಂದು ಗೌಡ. ಆಗ "ಕಥೆಯೊಂದು ಶುರುವಾಗಿದೆ ಧಾರಾವಾಹಿಯು ಇನ್ನೂರು ಸಂಚಿಕೆ ಪೂರೈಸಿದೆ. ಅದು ಸಾವಿರ ಸಂಚಿಕೆ ಪೂರೈಸಬೇಕು ಎಂಬುದೇ ನನ್ನ ಆಸೆ. ನಾನು ನಟಿಸಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ, ತ್ರಿನಯಿನಿ ಧಾರಾವಾಹಿಯು ಸಾವಿರ ಸಂಚಿಕೆ ಪೂರೈಸಿದೆ. ಇದು ಕೂಡಾ ಸಾವಿರ ಸಂಚಿಕೆ ಪೂರೈಸಲಿ ಎಂಬುದು ನನ್ನ ಆಸೆ" ಎಂದು ಚಂದು ಗೌಡ ಹೇಳಿಕೊಂಡಿದ್ದರು.


Click it and Unblock the Notifications











