'ಶ್ರೀಗೌರಿ' ಧಾರಾವಾಹಿಯ ಕಾರ್ತಿಕ್ ಅತ್ತಾವರ್ ಕಿರುಚಿತ್ರ ನಿರ್ದೇಶಕರೂ ಹೌದು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರೀಗೌರಿ'ಯೂ ಕೂಡಾ ಒಂದು. ವಿಭಿನ್ನ ರೀತಿಯ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆದಿದೆ 'ಶ್ರೀಗೌರಿ' ಧಾರಾವಾಹಿ. ಇನ್ನು 'ಕಮಲಿ' ಧಾರಾವಾಹಿಯ ಕಮಲಿ ಖ್ಯಾತಿಯ ಅಮೂಲ್ಯ ಗೌಡ ನಾಯಕಿ ಶ್ರೀಗೌರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ಅಪ್ಪುವಾಗಿ ಕಾರ್ತಿಕ್ ಅತ್ತಾವರ್ ಬಣ್ಣ ಹಚ್ಚುತ್ತಿದ್ದಾರೆ.
ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಕಾರ್ತಿಕ್ ಅತ್ತಾವರ್ ಅವರಿಗೆ ಕಿರುತೆರೆ ಹೊಸದೇನಲ್ಲ. ಸುಮಾರು ಒಂಭತ್ತು ವರ್ಷಗಳ ಹಿಂದೆ ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಶೋಧೆ' ಧಾರಾವಾಹಿಯಲ್ಲಿ ಇವರು ನಾಯಕನಾಗಿ ನಟಿಸಿದ್ದರು. ವಿನೋದ್ ವಿ ದೊಂಢಾಳೆ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಯಶೋಧೆ' ಧಾರಾವಾಹಿಯಲ್ಲಿ ನಾಯಕ ಆದಿತ್ಯನಾಗಿ ನಟಿಸಿದ್ದ ಕಾರ್ತಿಕ್ ಅತ್ತಾವರ್ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ.

ಬರೋಬ್ಬರಿ ಒಂಭತ್ತು ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ ಕಿರುತೆರೆಗೆ ಮರಳಿರುವ ಕಾರ್ತಿಕ್ ಅತ್ತಾವರ್ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಈ ನಟನೆಗೆ ಫಿದಾ ಆಗಿರುವ ಪ್ರೇಕ್ಷಕರು ಇದ್ದರೆ ಇಂತಹ ಮಗ ಬೇಕು, ಗಂಡ ಬೇಕು ಎಂದು ಬಯಸಿದ್ದಾರೆ. ಅಂದ ಹಾಗೇ ಕಾರ್ತಿಕ್ ಅತ್ತಾವರ್ ಇಂದು ಕಿರುತೆರೆಗೆ ಪರಿಚಿತರಾಗಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಕೋಸ್ಟಲ್‌ವುಡ್.
ತುಳುವಿನ 'ರಿಕ್ಷಾ ಡ್ರೈವರ್' ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದರು ಕಾರ್ತಿಕ್ ಅತ್ತಾವರ್. ಮೊದಲ ಸಿನಿಮಾದಲ್ಲಿ ಕಾರ್ತಿಕ್ ಅತ್ತಾವರ್ ಸಿನಿ ಪ್ರಿಯರ ಮನ ಸೆಳೆದಿದ್ದು ಮಾತ್ರವಲ್ಲದೇ ಆ ಸಿನಿಮಾ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಅದೇ ಸಮಯದಲ್ಲಿ ತಮ್ಮ ನಿರ್ದೇಶನದ ಹೊಸ ಧಾರಾವಾಹಿ 'ಯಶೋಧೆ'ಗೆ ಹೊಸ ನಟನ ಹುಡುಕಾಟದಲ್ಲಿದ್ದರು ನಿರ್ದೇಶಕ ವಿನೋದ್ ವಿ ದೊಂಢಾಳೆ. ಕಾರ್ತಿಕ್ ಅತ್ತಾವರ್ ಅವರ 'ರಿಕ್ಷಾ ಡ್ರೈವರ್' ಸಿನಿಮಾ ನೋಡಿ ಮೆಚ್ಚಿಕೊಂಡ ವಿನೋದ್ ಅವರು ಕಾರ್ತಿಕ್ ಅವರನ್ನೇ ಆದಿತ್ಯ ಪಾತ್ರಕ್ಕೆ ಆಯ್ಕೆ ಮಾಡಿದ್ದರು.
ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2' ರಿಯಾಲಿಟಿ ಶೋವಿನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಇವರು ತಮ್ಮ ಡ್ಯಾನ್ಸ್ ಮೂಲಕ ಮಗದೊಮ್ಮೆ ವೀಕ್ಷಕರ ಮನ ಸೆಳೆದಿದ್ದರು.
ಕೋಸ್ಟಲ್‌ವುಡ್ ನಂತರ ಕಿರುತೆರೆಯಲ್ಲಿ ಮಿಂಚಿದ ಕಾರ್ತಿಕ್ ಅತ್ತಾವರ್ ನಂತರ ಕಾಣಿಸಿಕೊಂಡಿದ್ದು ಬೆಳ್ಳಿ ತೆರೆಯಲ್ಲಿ. ಹೌದು, 'ಅನುಕ್ತ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಕಾರ್ತಿಕ್ ಅತ್ತಾವರ್ ಅದರಲ್ಲಿ ತನಿಖಾಧಿಕಾರಿಯಾಗಿ ನಟಿಸಿದರು. ಇದರ ಜೊತೆಗೆ ಹಿಂದಿಯ 'ಅನಮೋಲ್' ಎನ್ನುವ ಕಿರುಚಿತ್ರವನ್ನು ನಿರ್ದೇಶಿಸಿರುವ ಕಾರ್ತಿಕ್ ಅತ್ತಾವರ್ ಈ ಕಿರುಚಿತ್ರದಲ್ಲಿ ವೃದ್ಧಾಶ್ರಮಕ್ಕೆ ಸಂಬಂಧಿಸಿದ ಕತೆಯನ್ನು ಹೇಳಿದ್ದಾರೆ.


Click it and Unblock the Notifications











