ಇನ್ಮುಂದೆ ಚಾಕಲೇಟ್ ಬಾಯ್ ಲುಕ್ ಕೊಡುವುದಿಲ್ವಾ 'ದಿಯಾ' ಹೀರೊ; ಪೃಥ್ವಿ ಅಂಬರ್ ಮುಂದಿನ ನಡೆಯೇನು?
'ದಿಯಾ' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರೇಕ್ಷಕರ ಮನೆಗೆದ್ದ ನಟ ಪೃಥ್ವಿ ಅಂಬರ್, ಇದೀಗ ಹೊಸ ಪಾತ್ರಗಳಿಗೆ ಕಾಯುತ್ತಿದ್ದಾರಂತೆ. ನಟ ಪೃಥ್ವಿ ಅಂಬರ್ ಅವರು ಬಹಳಷ್ಟು ವಿಶೇಷ ಪಾತ್ರಗಳಲ್ಲಿ ಇದುವರೆಗೂ ಕಾಣಿಸಿಕೊಂಡಿದ್ದರು ಸಹ ಅವೆಲ್ಲವೂ ರೋಮ್ಯಾಂಟಿಕ್ ಸಿನಿಮಾಗಳ ಚಾಕಲೇಟ್ ಬಾಯ್ ಪಾತ್ರಗಳೇ ಆಗಿದ್ದವು. ಇದೀಗ ಈ ಚಾಕ್ಲೆಟ್ ಬಾಯ್ ಪಾತ್ರಗಳಿಂದ ಹೊರಬಂದು ಹೊಸ ರೀತಿಯ ವಿಭಿನ್ನ ಪಾತ್ರಗಳಿಗೆ ನಟ ಪೃಥ್ವಿ ಅಂಬರ್ ಹುಡುಕಾಟ ನಡೆಸುತ್ತಿದ್ದಾರಂತೆ.
ಈ ಬಗ್ಗೆ ಸ್ವತಃ ನಟ ಪೃಥ್ವಿ ಅಂಬರ್ ಅವರೇ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದು "ಪ್ರತಿಯೊಬ್ಬ ನಟನಿಗೂ ತನ್ನ ಪ್ರೇಕ್ಷಕರ ಮನ ಗೆಲ್ಲಬೇಕು ಎಂಬ ಆಸೆ ಇರುತ್ತದೆ. ಇದಕ್ಕೆ ಬಹಳ ಸುಲಭವಾದ ಮಾರ್ಗ ಅಂದರೆ ಕಮರ್ಷಿಯಲ್ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಕಥೆಗಳಲ್ಲಿ ಕಾಣಿಸಿಕೊಳ್ಳುವುದು. ನಟನೆ ನನಗೆ ಚಿಕ್ಕ ವಯಸ್ಸಿನಿಂದಲೂ ಬಹುದೊಡ್ಡ ಕನಸಾಗಿತ್ತು. ಮೊದಮೊದಲು ಪಾತ್ರಗಳಿಗೆ ಕಾಯುತ್ತಿದ್ದ ನನಗೆ ಇದೀಗ ಬಹಳಷ್ಟು ಆಫರ್‌ಗಳು ಬರಲು ಆರಂಭವಾಗಿದೆ. ಆದರೆ, ಈಗಾಗಲೇ ನಾನು ಬಹಳಷ್ಟು ಕಮರ್ಷಿಯಲ್ ಸಿನಿಮಾಗಳಲ್ಲೇ ನಟಿಸಿ ಪಾಪುಲಾರಿಟಿಯನ್ನು ಪಡೆದಿದ್ದೇನೆ. ಇನ್ನೇನಿದ್ದರೂ ವಿಭಿನ್ನ ಪಾತ್ರಗಳ ಮೂಲಕ ನನ್ನ ನಟನಾ ಸಾಮರ್ಥ್ಯವನ್ನು ತೋರಿಸಬೇಕು. ಹಾಗಾಗಿ ಇಂತಹ ಚಾಕ್ಲೇಟ್ ಬಾಯ್ ಪಾತ್ರಗಳ ಆಫರ್ ಬಂದರೆ, ನಾನು ಅದನ್ನು ಒಪ್ಪಬಾರದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ" ನಟ ಪೃಥ್ವಿ ಅಂಬರ್.

"ಆಕ್ಷನ್ ಫಿಲಂಗಳೆಂದರೆ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಬಾಲ್ಯದಲ್ಲಿ ಮಾರ್ಷಲ್ ಆರ್ಟ್ಸ್ ಕಲಿತ ಮೇಲಂತೂ ನನಗೆ ಆಕ್ಷನ್ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ಹೆಚ್ಚಾಗಿದೆ. ಹಾಗಾಗಿ ಈಗ ನಾನು ಆಕ್ಷನ್ ಸಿನಿಮಾ ಗಳಲ್ಲಿನ ಪ್ರಮುಖ ಪಾತ್ರಗಳಿಗೆ ಕಾಯುತ್ತಿದ್ದೇನೆ. ಅದಕ್ಕೆ ಬೇಕಾದಂತೆ ತಯಾರಿಗಳನ್ನು ನಡೆಸುತ್ತಿದ್ದೇನೆ. ಬಾಡಿ ಫಿಟ್ನೆಸ್, ಡಾನ್ಸ್ ಈ ರೀತಿ ನಾನಾ ರೀತಿಯ ಸ್ಕಿಲ್‌ಗಳಲ್ಲಿ ನಾನು ನನ್ನನ್ನು ತೊಡಗಿಸಿಕೊಳ್ಳುತ್ತಿದ್ದೇನೆ" ಎಂದು ಪಾತ್ರಗಳ ಬಗೆಗಿನ ತಮ್ಮ ತಯಾರಿಯ ಬಗ್ಗೆಯೂ ಮಾತನಾಡಿದ್ದಾರೆ ನಟ ಪೃಥ್ವಿ ಅಂಬರ್.
ನಟ ಪೃಥ್ವಿ ಅಂಬರ್ ಅವರ ಮುಂದಿನ ಪ್ರಾಜೆಕ್ಟ್ 'ಚೌಕಿದಾರ್' ಅನ್ನು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಪೃಥ್ವಿ ಅಂಬರ್ ರವರು ಬಹಳ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

"ಸಿನಿಮಾ ನನಗೆ ಬರೇ ಮನೋರಂಜನೆ ಅಲ್ಲ, ಬದಲಾಗಿ ಸಿನಿಮಾಗಳು ಹಾಗೂ ಅದರಲ್ಲಿನ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯುವಂತದ್ದಾಗಿರಬೇಕು. ಅಂತಹ ಪಾತ್ರಗಳನ್ನೇ ಮಾಡಬೇಕು ಎಂಬುದು ನನ್ನ ಆಸೆ. ಪ್ರೇಕ್ಷಕರ ಮನದಲ್ಲಿ ಉಳಿಯುವುದು ಅಷ್ಟೇ ಅಲ್ಲದೆ ಅವರ ಭಾವನೆಗಳನ್ನು ಕಲುಕಬೇಕು. ಒಳ್ಳೆಯ ಕಥೆಗಳು ಹಾಗೂ ಅದ್ಭುತ ನಟನೆಯೇ ಈ ರೀತಿಯ ನಿರ್ವಹಣೆಗೆ ಮುಖ್ಯ ಅಂಶಗಳು ಎಂದು ನಾನು ನಂಬಿದ್ದೇನೆ" ಎಂದಿದ್ದಾರೆ ನಟ ಪೃಥ್ವಿ ಅಂಬರ್.


Click it and Unblock the Notifications











