'ಸುವರ್ಣ ಗೃಹಮಂತ್ರಿ'ಯ ಸಾರಥಿ ಹೆಂಗವ್ರೆ? ಮತ್ತೆ ಕಿರುತೆರೆಯಲ್ಲಿ ಡಾ.ವಿಠಲ್ ರಾವ್ ಅಲಿಯಾಸ್ ರವಿಶಂಕರ್
'ಸಿಲ್ಲಿ ಲಲ್ಲಿ' ಖ್ಯಾತಿಯ ನಟ ರವಿಶಂಕರ್ ಗೌಡ ಮತ್ತೆ ಕಿರುತೆರೆ ಕಡೆಗೆ ಮುಖ ಮಾಡಿದ್ದಾರೆ. ತಮ್ಮ ಮ್ಯಾನರಿಸಂನಿಂದ ಸಿನಿಮಾಗಳಲ್ಲಿ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿರುವ ಡಾ.ವಿಠಲ್ ರಾವ್ ಅಲಿಯಾಸ್ ರವಿಶಂಕರ್ ಶೋ ಒಂದರ ಮೂಲಕ ಕಿರುತೆರೆಗೆ ಗ್ರ್ಯಾಂಡ್ ಆಗಿ ರೀ ಎಂಟ್ರಿ ಕೊಡುತ್ತಿದ್ದಾರೆ. ಆ ಶೋ ಹೆಸರು ಸುವರ್ಣ ಗೃಹಮಂತ್ರಿ'.
ರವಿಶಂಕರ್ ಗೌಡ ಕಿರುತೆರೆ ಮೂಲಕವೇ ಚಿತ್ರರಂಗಕ್ಕೆ ಬಂದವರು. ಈ ಟಿವಿ ಕನ್ನಡದಲ್ಲಿ ( ಇಂದಿನ ಕಲರ್ಸ್ ಕನ್ನಡ) ಪ್ರಸಾರವಾದ ಅಪ್ಪಟ ಹಾಸ್ಯಮಯ ಧಾರಾವಾಹಿ 'ಸಿಲ್ಲಿ ಲಲ್ಲಿ'ಯ ಮೂಲಕ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. ಅಲ್ಲಿಂದ ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ರವಿಶಂಕರ್ ಹೆಸರು ಓಡಾಡುತ್ತಲೇ ಇರುತ್ತೆ.

ಈಗ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣದ ರಿಯಾಲಿಟಿ ಶೋ 'ಸುವರ್ಣ ಗೃಹಮಂತ್ರಿ' ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಮಧ್ಯಾಹ್ನ ಮನರಂಜನೆ ನೀಡುವ ಸಲುವಾಗಿ ಈ ಶೋ ಅನ್ನು ಮತ್ತೆ ಆರಂಭ ಮಾಡಲಾಗಿದೆ. ಇನ್ಮುಂದೆ 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಟ ರವಿಶಂಕರ್ ನಿಭಾಯಿಸುತ್ತಿದ್ದಾರೆ.
ಬಹಳ ದಿನಗಳ ಬಳಿಕ ನಟ ರವಿ ಶಂಕರ್ ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಿ ವೀಕ್ಷಕರು ಥ್ರಿಲ್ ಆಗಿದ್ದಾರೆ. ಗೃಹಮಂತ್ರಿ ಪ್ರೋಮೋದಲ್ಲಿ ನೋಡಿದ ವೀಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. 'ಸುವರ್ಣ ಗೃಹಮಂತ್ರಿ'ಯಲ್ಲಿ ರವಿಶಂಕರ್ ನಿರೂಪಣೆಯನ್ನು ನೋಡಲು ಕಾತುರತೆಯಿಂದ ಎದುರು ನೋಡುತ್ತಿದ್ದಾರೆ.

ಅಂದ್ಹಾಗೆ ಇದು ಕರ್ನಾಟಕದ ಮಹಿಳೆಯರಿಗಾಗಿಯೇ ಶುರುವಾಗಿರುವ ಶೋ. ಮನೆಯೊಳಗೆ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಗುರುತಿಸುವ ಚಿಕ್ಕ ಪ್ರಯತ್ನವನ್ನೂ ಮಾಡುವುದಿಲ್ಲ. ಮನೆಯನ್ನು, ಸಂಸಾರವನ್ನು ಅದೆಷ್ಟು ಅದ್ಭುತವಾಗಿ ನೋಡಿಕೊಂಡರೂ, 'ಥ್ಯಾಂಕ್ ಯೂ' ಅನ್ನುವ ಚಿಕ್ಕ ಪದವನ್ನು ಹೇಳುವುದಿಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ಜೊತೆ ಆಟ ಆಡಿಸಿ, ರೇಷ್ಮೆ ಸೀರೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದಲ್ಲಿ ನೀಡಲಾಗುತ್ತೆ.
ಈ ಕಾರ್ಯಕ್ರಮದ ಮೂಲಕ ನಟ ರವಿಶಂಕರ್ ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಕರ್ನಾಟಕದ ಗೃಹಿಣಿಯರನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ. 'ಸುವರ್ಣ ಗೃಹಮಂತ್ರಿ' ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.


Click it and Unblock the Notifications











