'ಸ್ನೇಹದ ಕಡಲಲ್ಲಿ' ಎನ್ನುತ ಕಿರುತೆರೆಗೆ ಎಂಟ್ರಿ ಕೊಟ್ಟ ಗುಂಡ್ಯ; ನಟ ಸಮೀಪ್ ಆಚಾರ್ಯ ಪಾತ್ರವೇನು?
ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ ಸ್ಟಾರ್ ಸುವರ್ಣ. 'ಆಸೆ', 'ನಿನ್ನ ಜೊತೆ ನನ್ನ ಕಥೆ', 'ನೀನಾದೆ ನಾ', 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ', 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ', 'ಶ್ರೀದೇವಿ ಮಹಾತ್ಮೆ', 'ಗೌರಿಶಂಕರ', 'ಅವನು ಮತ್ತು ಶ್ರಾವಣಿ' ಧಾರಾವಾಹಿಗಳು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ಪ್ರಸಾರವಾಗುತ್ತಿದೆ.
ಇನ್ನು 'ಪ್ರೀತಿಗಾಗಿ', 'ಅನುಪಮ' ಎಂಬ ಡಬ್ಬಿಂಗ್ ಧಾರಾವಾಹಿಗಳು ಪ್ರತಿ ಮಧ್ಯಾಹ್ನ ಪ್ರಸಾರವಾಗುತ್ತಿದೆ. ಸೀರಿಯಲ್‌ಗಳ ಹೊರತಾಗಿ 'ಸುವರ್ಣ ಸಂಕಲ್ಪ', 'ಸುವರ್ಣ ಗೃಹಮಂತ್ರಿ', 'ಬೊಂಬಾಟ್ ಭೋಜನ' ಎಂಬ ಶೋಗಳು ಕೂಡಾ ವೀಕ್ಷಕರನ್ನು ರಂಜಿಸುತ್ತಿದೆ. ಇದರ ಜೊತೆಗೆ 'ಶಾರದೆ' ಎನ್ನುವ ಹೊಸ ಧಾರಾವಾಹಿಯು ಇತ್ತೀಚೆಗಷ್ಟೇ ಶುರುವಾಗಿದ್ದು ವೀಕ್ಷಕರ ಮನ ಸೆಳೆಯುತ್ತಿದೆ.

'ಶಾರದೆ' ಧಾರಾವಾಹಿಯ ಬೆನ್ನಲ್ಲೇ ಮಗದೊಂದು ಧಾರಾವಾಹಿಯು ಶುರುವಾಗುವ ಶುಭ ಸೂಚನೆಯನ್ನು ಸ್ಟಾರ್ ಸುವರ್ಣ ವಾಹಿನಿಯು ನೀಡಿದೆ. 'ಸ್ನೇಹದ ಕಡಲಲ್ಲಿ' ಎನ್ನುವ ಧಾರಾವಾಹಿಯು ಅತೀ ಶೀಘ್ರದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿದ್ದು ಈಗಾಗಲೇ ಅದರ ಪ್ರೋಮೋ ಬಿಡುಗಡೆಯಾಗಿದೆ.
ಇನ್ನು ಈ ಧಾರಾವಾಹಿಯಲ್ಲಿ ನಾಯಕನಾಗಿ ಚಂದು ಗೌಡ, ನಾಯಕಿಯಾಗಿ ಕಾವ್ಯಾ ಮಹಾದೇವ್ ಅಭಿನಯಿಸಲಿದ್ದಾರೆ. ಇದರ ಜೊತೆಗೆ ಸಮೀಪ್ ಆಚಾರ್ಯ ಅವರು ಕೂಡಾ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಬಿಡುಗಡೆಯಾಗಿರುವ ಧಾರಾವಾಹಿ ಪ್ರೋಮೋದಲ್ಲಿ ಸಮೀಪ್ ಆಚಾರ್ಯ ಅವರು ಕೂಡಾ ಇದ್ದು, ಪ್ರಸ್ತುತ ಧಾರಾವಾಹಿಯಲ್ಲಿ ಅವರದ್ದು ನೆಗೆಟಿವ್ ಪಾತ್ರ ಇದ್ದಂತೆ ಕಾಣುತ್ತದೆ.
ಅಂದ ಹಾಗೇ ಸಮೀಪ್ ಆಚಾರ್ಯ ಅವರು ಈ ಹಿಂದೆ 'ಜಾನಕಿ ರಾಘವ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಾನಕಿ ರಾಘವ' ಧಾರಾವಾಹಿಯಲ್ಲಿ ನಾಯಕ ರಾಘವನ ತಮ್ಮ ರಮಣನಾಗಿ ನಟಿಸಿದ್ದರು ಸಮೀಪ್ ಆಚಾರ್ಯ. ಈ ಧಾರಾವಾಹಿಯು ಐದು ತಿಂಗಳ ಹಿಂದೆಯಷ್ಟೇ ಮುಕ್ತಾಯಗೊಂಡಿತ್ತು.

ಇದೀಗ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಲಿರುವ ಸಮೀಪ್ ಆಚಾರ್ಯ ಹೊಸ ಧಾರಾವಾಹಿ, ಹೊಸ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ. ಅಂದ ಹಾಗೇ ಸಮೀಪ್ ಆಚಾರ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು ಕೂಡಾ ಸ್ಟಾರ್ ಸುವರ್ಣ ವಾಹಿನಿಯಿಂದ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರ ಕನ್ನಡ ಭಾಷೆಯ 'ಗುಂಡ್ಯಾನ ಹೆಂಡ್ತಿ' ಧಾರಾವಾಹಿಯ ಗುಂಡ್ಯಾನಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟರು ಸಮೀಪ್ ಆಚಾರ್ಯ.
ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿ ವೀಕ್ಷಕರ ಮನ ಸೆಳೆದ ಇವರು ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಂಗಾ' ಧಾರಾವಾಹಿಯಲ್ಲಿ ನಾಯಕ ಸಾಗರ್ ಆಗಿ ಅಭಿನಯಿಸಿದರು. 'ಗಂಗಾ' ಧಾರಾವಾಹಿಯಲ್ಲಿಯೂ ಕೂಡಾ ಉತ್ತರ ಕನ್ನಡ ಮಾತನಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ವಿಶೇಷ.
ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದರು ಸಮೀಪ್ ಆಚಾರ್ಯ. ಆದರೆ ಮುಂದೆ ಆ ಧಾರಾವಾಹಿಯು ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು. ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿ ನಾಯಕ ಕರಣ್ ಆಗಿ ನಟಿಸಿದ್ದರು ಸಮೀಪ್ ಆಚಾರ್ಯ.
ಇದೀಗ 'ಸ್ನೇಹದ ಕಡಲಲ್ಲಿ' ಧಾರಾವಾಹಿಯಲ್ಲಿ ಇವರು ಬಣ್ಣ ಹಚ್ಚುತ್ತಿದ್ದಾರೆ. ಧಾರಾವಾಹಿಯ ಪ್ರೋಮೋದಲ್ಲಿ ಸಮೀಪ್ ಅವರನ್ನು ಕಂಡಾಗ ಧಾರಾವಾಹಿಯಲ್ಲಿ ಅವರು ಖಳನಾಯಕನಾಗಿ ನಟಿಸುತ್ತಿದ್ದಾರೇನೋ ಎಂದು ಭಾಸವಾಗುತ್ತದೆ. ಆದರೆ ಸಮೀಪ್ ಅವರು ಯಾವ ರೀತಿಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂಬುದು ಧಾರಾವಾಹಿ ಶುರುವಾದ ಮೇಲೆಯೇ ತಿಳಿಯಬೇಕಷ್ಟೆ.


Click it and Unblock the Notifications











