DKD: "ಪ್ರಪಂಚ ಏನು ಅಂತ ಗೊತ್ತಾಗಿದ್ದೆ ಆಗ" ಆಕ್ಸಿಡೆಂಟ್ ದಿನಗಳನ್ನು ನೆನೆದ ಶಶಿಕುಮಾರ್
ಜೀ ಕನ್ನಡದಲ್ಲಿ ಡಿಕೆಡಿ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಡ್ಯಾನ್ಸ್ ಬರದೇ ಇದ್ದವರನ್ನು ಕರೆಸಿ ಕುಣಿಸುತ್ತೀವಿ ಎಂದು ಹೊರಟಿದ್ದ ಜೀ ಕನ್ನಡ, ಪ್ರೇಕ್ಷಕರಿಗೆ ಆಶ್ಚರ್ಯ ಮೂಡಿಸಿತ್ತು. ಆದರೆ ದಿನ ಕಳೆದಂತೆ ಡಿಕೆಡಿಯ ವಾಸ್ತವತೆಯೇ ಬದಲಾಗಿದೆ. ಡ್ಯಾನ್ಸ್ ಮೂಲಕ ಪ್ರತಿಭೆಗಳು ಮಾತ್ರವಲ್ಲ ಕಥೆಗಳು, ನೋವುಗಳು ಹೊರಗೆ ಬರುತ್ತಿವೆ.
ಈ ವಾರದ ಡಿಕೆಡಿಯಲ್ಲಿ ಅದೆಷ್ಟೊ ವರ್ಷಗಳಿಂದ ಕಾಯುತ್ತಿದ್ದ ಕಥೆಗೆ ಕ್ಲಾರಿಟಿ ಸಿಗಲಿದೆ. ಅಂತೆ ಕಂತೆಗಳಿಗೆ ಸ್ಪಷ್ಟನೆ ಸಿಗಲಿದೆ. ಶಶಿಕುಮಾರ್ ಆ ದಿನಗಳ ಬಗ್ಗೆ ತಿಳಿಸಲಿದ್ದಾರೆ. ಈಗಾಗಲೇ ಯಾವ ವಿಚಾರ ಎಂಬುದು ನಿಮಗೂ ಗೊತ್ತಾಗಿರುತ್ತೆ. ಹೌದು ಆಕ್ಸಿಡೆಂಟ್ ಆದ ನಂತರದ ವಿಚಾರವನ್ನ ಶಶಿ ಕುಮಾರ್ ಹಂಚಿಕೊಂಡಿದ್ದಾರೆ. ಈಗಾಗಲೇ ಅದರ ಪ್ರೋಮೋ ಕೂಡ ಎಲ್ಲರಿಗೂ ಕುತೂಹಲವನ್ನು ಮೂಡಿಸಿದೆ.

ಡ್ಯಾನ್ಸ್ ಕಿಂಗ್ ಡಿಕೆಡಿ ವೇದಿಕೆಯಲ್ಲಿ
ಜೀ ಕನ್ನಡದಲ್ಲಿಯೇ ಆಗಲಿ ಬೇರೆ ಯಾವುದೇ ಮನರಂಜನೆಯ ಚಾನೆಲ್ ಆದರೂ ಡ್ಯಾನ್ಸ್ ಪ್ರೋಗ್ರಾಂ ಬಂದಾಗ ಪ್ರೇಕ್ಷಕರ ಒತ್ತಾಯ ಒಂದೇ ಆಗಿರುತ್ತಾ ಇತ್ತು. ಶಶಿ ಕುಮಾರ್ ಅಥವಾ ವಿನೋದ್ ರಾಜ್ ಅವರನ್ನು ಜಡ್ಜ್ ಆಗಿ ಕರೆಯಿರಿ ಎಂದು. ಆದರೆ ಅದು ಇಲ್ಲಿವರೆಗೆ ಸಾಧ್ಯವಾಗಿಲ್ಲ. ಫಸ್ಟ್ ಟೈಮ್ ಶಶಿ ಕುಮಾರ್ ಅವರು ಡಿಕೆಡಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಜಡ್ಜ್ ಆಗಿ ಅಲ್ಲ, ಗೆಸ್ಟ್ ಆಗಿ. ಆದರೆ ಈ ಕಾರ್ಯಕ್ರಮದಲ್ಲಿ ಅವರ ಮರೆಯಲಾಗದ ನೋವು ಅನಾವರಣಗೊಂಡಿದೆ.
ಡ್ಯಾನ್ಸ್ ಮೂಲಕ ಆ ಘಟನೆ ಮರುಸೃಷ್ಠಿ
ಈ ಬಾರಿಯ ಡಿಕೆಡಿಯಲ್ಲಿ ನೋವುಗಳನ್ನ ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಈ ವಾರ ಶಶಿಕುಮಾರ್ ಅವರಿಗೆ ಆಕ್ಸಿಡೆಂಟ್ ಆದ ಘಟನೆಯನ್ನು ಮರು ಸೃಷ್ಟಿ ಮಾಡಿದ್ದಾರೆ. ಶಶಿ ಹೆಗಡೆ ಈ ಡ್ಯಾನ್ಸ್ ಮಾಡಿದ್ದಾರೆ. ಅಪ್ಪು ಅವರ ಸಾಗರದ ಅಲೆಗೂ ಹಾಡಿನ ಜೊತೆಗೆ ಶಶಿಕುಮಾರ್ ಅವರ ಆಕ್ಸಿಡೆಂಟ್ ಘಟನೆಯನ್ನ ವಿವರಿಸಿದ್ದಾರೆ. ಇದನ್ನು ಕಂಡು ಸುಪ್ರೀಂ ಹೀರೋ ಶಶಿಕುಮಾರ್ ಅವರು ಕೂಡ ಹಳೆಯ ದಿನಗಳಿಗೆ ಜಾರಿದ್ದಾರೆ.

ಘಟನೆ ಬಗ್ಗೆ ವಿವರಿಸಿದ ಶಶಿಕುಮಾರ್
1990 ದಶಕ. ಶಶಿಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಸಮಯ. ಯಾಕಂದ್ರೆ ನೋಡಲು ಸುಂದರ.. ಒಳ್ಳೆ ಡ್ಯಾನ್ಸರ್. ಹೀಗಾಗಿ ಸಾಲು ಸಾಲು ಅವಕಾಶಗಳು ಬರುತ್ತಿದ್ದವು. ಆದರೆ 1998 ಜುಲೈ 31ರಂದು ಆಕ್ಸಿಡೆಂಟ್ ಆಯ್ತು. ಅಪಘಾತದಲ್ಲಿ ಶಶಿಕುಮಾರ್ ಅವರ ಮುಖಕ್ಕೆ ಗಂಭೀರ ಪೆಟ್ಟಾಗಿತ್ತು. ಮೂಗು ಕೂಡ ಡ್ಯಾಮೇಜ್ ಆಗಿ, ಸುಂದರವಾದ ಮುಖ ಗುರುತು ಸಿಗದಂತೆ ಆಗಿತ್ತು. ಅಂದು ನಡೆದದ್ದನ್ನು ಹೇಳಿದ ಶಶಿಕುಮಾರ್, ಕಾರಿನಲ್ಲಿ ಹೋಗುವಾಗ ಫ್ಲ್ಯಾಶ್ ಲೈಟ್ ಆನ್ ಆಗಿದ್ದು ಅಷ್ಟೇ ನೆನಪು ಎಂದಿದ್ದಾರೆ.
ಕಥೆ ಕೇಳಿ ಕಣ್ಣೀರಾದ ವೇದಿಕೆ
"ಆಕ್ಸಿಡೆಂಟ್ ಆದ ಮೇಲೆ ನಾನು ಯಾರಿಗೆ ಫೋನ್ ಮಾಡಿದರು ದುಡ್ಡಿಗೋಸ್ಕರ ಫೋನ್ ಮಾಡ್ತಾ ಇರಬೇಕು ಅಂತಾನೇ ತಿಳಿದುಕೊಂಡು ಬಿಟ್ಟಿದ್ದರು. ಅಂದು ಪ್ರಪಂಚ ಏನು ಅಂತ ಅರ್ಥ ಆಯ್ತು ನನಗೆ" ಎಂದು ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ. ರಕ್ಷಿತಾ ಅಪ್ಪಿಕೊಂಡು ಸಮಾಧಾನ ಹೇಳಿದ್ದಾರೆ.
ಇಂಡಸ್ಟ್ರಿ ಹೇಗೆ ನಡೆಸಿಕೊಳ್ತು
ನಿರೂಪಕಿ ಅನುಶ್ರೀ ಕೂಡ ಶಶಿ ಕುಮಾರ್ ಅವರಿಗೆ ಸಮಾಧಾನ ಮಾಡಿ, ಮತ್ತೆ ಬದುಕನ್ನು ಕಟ್ಟಿಕೊಳ್ಳುವುದು ಇದೆಯಲ್ಲ ಅದು ನಿಜವಾದ ಬದುಕು ಎಂದಿದ್ದಾರೆ. ಇನ್ನು ಅಭಿಮಾನಿಗಳೆಲ್ಲಾ ಖುಷಿಯಾಗಿದ್ದು, ಇದು ನಿಜವಾದ ಡ್ಯಾನ್ಸ್ ಶೋ. ಶಶಿಕುಮಾರ್ ಅವರನ್ನೇ ಜಡ್ಜ್ ಆಗಿ ಉಳಿಸಿ ಎಂದು ಮನವಿ ಮಾಡಿದ್ದಾರೆ.


Click it and Unblock the Notifications











