'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ' ವಿಭಿನ್ನ ಸಿನಿಮಾಗಳಲ್ಲಿ ಶೈನ್ ಆಗ್ತಿದ್ದಾರೆ ಶೈನ್ ಶೆಟ್ಟಿ
ನಟ ಶೈನ್ ಶೆಟ್ಟಿ ಕನ್ನಡ ಪ್ರೇಕ್ಷಕರಿಗೆ ಮನೆ ಮಗನಂತೆ ಅಂದರೆ ತಪ್ಪಾಗಲ್ಲ. ಕಿರುತೆರೆಯಿಂದ ಹಿರಿತೆರೆವರೆಗೂ ಚಂದನವನದಿಂದ ತುಳು ಸಿನಿಮಾಗಳ ಪ್ರೇಕ್ಷಕರಿಗೂ ಈತ ಚಿರಪರಿಚಿತ. ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲ ನಟ ಶೈನ್ ಶೆಟ್ಟಿ ಜನ ಮನ ರಂಜಿಸುತ್ತ ಬಂದಿದ್ದಾರೆ. ಮೊದಲಿಗೆ ಧಾರಾವಾಹಿಗಳ ಮೂಲಕ ಶುರುವಾದ ಇವರ ನಟನಾ ಜರ್ನಿ ನಂತರ ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳವರೆಗೂ ಬಂದು ನಿಂತಿದೆ.
ಇತ್ತೀಚೆಗಷ್ಟೇ ಇವರ 'ಮರ್ಯಾದೆ ಪ್ರಶ್ನೆ' ಸಿನಿಮಾ ಕೂಡ ರಿಲೀಸ್ ಆಗಿದ್ದು ಬಹಳ ಒಳ್ಳೆಯ ವಿಮರ್ಶೆಗಳನ್ನು ಪಡೆಯುತ್ತಿದೆ. ನಟ ಶೈನ್ ಶೆಟ್ಟಿ ಕಿರುತೆರೆ ಪಯಣ 'ಮೀರಾ ಮಾಧವ' ಧಾರಾವಾಹಿಯಿಂದ ಶುರುವಾಯಿತು. ಮುಂದೆ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಚಂದು ಆಗಿ ಅಭಿನಯಿಸಿದ ಶೈನ್ ಶೆಟ್ಟಿ ನಿರೂಪಕರಾಗಿ ಮೋಡಿ ಮಾಡಿದ್ದಾರೆ.

'ಸ್ಟಾರ್ ಸಿಂಗರ್' ನ ಸ್ಪರ್ಧಿಯಾಗಿ ಮೋಡಿ ಮಾಡಿದ ಶೈನ್ ಶೆಟ್ಟಿ 'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ', 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋ ನಿರೂಪಕರಾಗಿ ಗಮನ ಸೆಳೆದರು. ಬಿಗ್ ಬಾಸ್ ಕನ್ನಡ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಶೈನ್ ಶೆಟ್ಟಿ ಆ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದರು.
ತುಳುವಿನ 'ಕುಡ್ಲ ಕೆಫೆ' ಸಿನಿಮಾ ಮೂಲಕ ಹಿರಿತೆರೆಗೆ ಹಾರಿದ ಶೈನ್ ಶೆಟ್ಟಿ ನಂತರ 'ಅಶ್ವಿತ', 'ಒಂದು ಮೊಟ್ಟೆಯ ಕಥೆ', 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಕೊಡುಗೆ ರಾಮಣ್ಣ ರೈ', 'ಗಾನ ಯಜ್ಞ', 'ರುದ್ರಪ್ರಯಾಗ', 'ಹರಿಕಥೆ ಅಲ್ಲ ಗಿರಿಕಥೆ', 'ಪ್ರಾಯಶಃ', 'ವಿಜಯಾನಂದ', 'ಜೇಮ್ಸ್', 'ಕಾಂತಾರ', 'ಮಾಫಿಯಾ', 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಇದರ ಜೊತೆಗೆ ಈ ವರ್ಷ ತೆರೆ ಕಂಡ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ಶೈನ್ ಶೆಟ್ಟಿ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಜಸ್ಟ್ ಮ್ಯಾರೀಡ್', 'ಮರ್ಯಾದೆ ಪ್ರಶ್ನೆ', 'ನಿದ್ರಾದೇವಿ ನೆಕ್ಸ್ಟ್ ಸ್ಟೆಪ್' ಸಿನಿಮಾಗಳಲ್ಲಿ ನಟಿಸಿದ್ದು ಅದು ತೆರೆ ಕಾಣಬೇಕಿದೆ.

ಇನ್ನು ನಟನೆ ಅಷ್ಟೇ ಅಲ್ಲದೆ ಬಿಸಿನೆಸ್ ಅನ್ನು ಆರಂಭಿಸಿರುವ ನಟ ಶೈನ್ ಶೆಟ್ಟಿ ಈಗ ಕೆಲವು ವರ್ಷಗಳಿಂದ 'ಗಲ್ಲಿ ಕಿಚನ್' ಎಂಬ ರೆಸ್ಟೋರೆಂಟ್ ಅನ್ನು ಹೊಂದಿದ್ದಾರೆ. ವಿಧವಿಧ ದೋಸೆಯನ್ನು ಮಾರಬೇಕೆಂಬ ಕನಸಿನೊಂದಿಗೆ ಗಲ್ಲಿ ಕಿಚನ್ ಎಂಬ ಆಟೋ ಫುಡ್ ಸ್ಟ್ಯಾಂಡ್ ಅನ್ನು ಆರಂಭಿಸಿದ ನಟ ಶೈನ್ ಶೆಟ್ಟಿ, ನಂತರ ಇದೇ ಬಿಸಿನೆಸ್‌ನಲ್ಲಿ ಕಂಡ ಯಶಸ್ಸಿನಿಂದ ಇಂದು ಒಂದು ರೆಸ್ಟೋರೆಂಟ್ ಹೊಂದಿದ್ದಾರೆ. ತಟ್ಟೆ ಇಡ್ಲಿ, ಸಾಬಕ್ಕಿ ಇಡ್ಲಿ, ನೀರ್ ತೆಳ್ಳಾವ್ ಹೀಗೆ ಒಂದಷ್ಟು ತಿನಿಸುಗಳು ಬಹಳ ಫೇಮಸ್.
ಇತ್ತೀಚೆಗಷ್ಟೇ ರಾಪಿಡ್ ರಶ್ಮಿ ಅವರ ಯೂಟ್ಯೂಬ್ ನಲ್ಲಿ ಪ್ರಸಾರವಾಗುವ ಜಸ್ಟ್ ಕ್ಯೂರಿಯಸ್ ಪಾಡ್ ಕಾಸ್ಟಿನಲ್ಲಿ, ತಮ್ಮ ಜೀವನ ನಟನಾ ಜರ್ನಿ ಸೇರಿದಂತೆ ಬಹಳಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ನಟ ಶೈನ್ ಶೆಟ್ಟಿ. ಮೂಲತಃ ತುಳುನಾಡಿನವರಾದ ಇವರು, ತಮ್ಮ ಊರು ಅಲ್ಲಿಯ ಸಂಸ್ಕೃತಿಯ ಬಗ್ಗೆಯೂ ಬಹಳ ವಿಭಿನ್ನ ಹಾಗೂ ವಿಶೇಷ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ತುಳುನಾಡಿನ ದೈವಾರಾಧನೆಯಿಂದ ಹಿಡಿದು ಹಲವಾರು ವಿಭಿನ್ನ ಆಚರಣೆಗಳ ಬಗ್ಗೆ ಮಾತನಾಡಿದ ನಟ ಶೈನ್ ಶೆಟ್ಟಿ, ಸ್ವಾಮಿ ಕೊರಗಜ್ಜ ಅವರ ಬಗ್ಗೆಯೂ ಬಹಳ ವಿಶೇಷವಾದ ಕಥೆಗಳನ್ನು ಹೇಳಿದ್ದಾರೆ. ಸದ್ಯಕ್ಕೆ ಥಿಯೇಟರ್ ನಲ್ಲಿರುವ ನಾಗರಾಜ್ ಸೋಮಯಾಜಿ ಅವರ ನಿರ್ದೇಶನದ ಮರ್ಯಾದೆ ಪ್ರಶ್ನೆ ಸಿನಿಮಾ ಮಧ್ಯಮ ವರ್ಗದ ಜನಜೀವನವನ್ನು ಕಥೆಯಾಗಿರಿಸಿಕೊಂಡಿದ್ದು ಇದರಲ್ಲಿ ಶೈನ್ ಶೆಟ್ಟಿ ಅವರದು ಪ್ರಮುಖ ಪಾತ್ರವಾಗಿದೆ. ಇದರಲ್ಲಿನ ಶೈನ್ ಶೆಟ್ಟಿ ಅವರ ನೈಜ ಅಭಿನಯ ಜನಮನ ಗೆದ್ದಿದೆ. ಈ ಸಿನಿಮಾ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಯನ್ನು ಹೊಂದುತ್ತಿದ್ದು, ಜನರ ನಿರೀಕ್ಷೆಯನ್ನು ಮುಟ್ಟಿದೆ ಎಂದರೆ ತಪ್ಪಾಗಲ್ಲ.


Click it and Unblock the Notifications











