ಲವರ್ ಬಾಯ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಸೂರಜ್ ಹೊಳಲು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಪ್ರಸಾರವಾಗುತ್ತಿದ್ದ 'ಗೃಹಪ್ರವೇಶ' ಧಾರಾವಾಹಿಯು ಇದ್ದಕ್ಕಿದ್ದಂತೆ ಮುಕ್ತಾಯಗೊಂಡಿದೆ. ವಿಭಿನ್ನ ಕಥಾ ಹಂದರದ ಮೂಲಕ ಮಟ ಮಟ ಮಧ್ಯಾಹ್ನ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ 'ಗೃಹಪ್ರವೇಶ' ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ತನ್ನ ಪ್ರಸಾರವನ್ನು ನಿಲ್ಲಿಸಿದೆ.
'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕ ಮಿಥುನ್ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಸೂರಜ್ ಹೊಳಲು "ಇದೊಂದು ಅದ್ಭುತ ಪಯಣ" ಎಂದು ಹೇಳಿದ್ದಾರೆ. ಫಿಲ್ಮಿಬೀಟ್ ಜೊತೆಗೆ ಮಾತನಾಡಿರುವ ಸೂರಜ್ ಹೊಳಲು "ಗೃಹಪ್ರವೇಶ ಧಾರಾವಾಹಿಯು ನನ್ನ ಪಾಲಿಗೆ ತುಂಬಾ ಅದ್ಭುತವಾದುದು. ನಾನು ಇಲ್ಲಿಯ ತನಕ ನಿರ್ವಹಿಸಿದ ಎಲ್ಲಾ ಪಾತ್ರಗಳಿಗಿಂತಲೂ ಇದು ತುಂಬಾ ಭಿನ್ನ" ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ "ನಮ್ಮ ಧಾರಾವಾಹಿಯು ಮಧ್ಯಾಹ್ನದ ಸಮಯದಲ್ಲಿ ಪ್ರಸಾರ ಆಗುತ್ತಿದ್ದ ಕಾರಣ ಅದು ಇಷ್ಟು ಬೇಗ ಕೊನೆಗೊಂಡಿತು ಎಂಬುದು ನನ್ನ ಅಭಿಪ್ರಾಯ. ಬಹುಶಃ ಅದರ ಬದಲು ಇದು ಫ್ರೈಮ್ ಟೈಮ್‌ನಲ್ಲಿ ಪ್ರಸಾರ ಕಂಡಿದ್ದರೆ ಇಷ್ಟು ಬೇಗ ಮುಕ್ತಾಯಗೊಳ್ಳುತ್ತಿರಲಿಲ್ಲ. ಧಾರಾವಾಹಿಯ ಕತೆಯ ಜೊತೆಗೆ ಪಾತ್ರವೂ ಕೂಡಾ ತುಂಬಾ ಸೊಗಸಾಗಿತ್ತು" ಎಂದು ಹೇಳಿಕೊಂಡದ್ದಾರೆ ಸೂರಜ್ ಹೊಳಲು.
"ಮಿಥುನ್ ಪಾತ್ರ ಒಂದು ರೀತಿಯ ಲವ್ಲಿಯದ್ದು ಹೌದು. ನನ್ನ ಹತ್ತು ವರ್ಷದ ಕಿರುತೆರೆ ಜರ್ನಿಯಲ್ಲಿ ನಾನು ಇದೇ ಮೊದಲ ಬಾರಿಗೆ ಇಂತಹ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇನೆ. ಲವರ್ ಬಾಯ್ ಆಗಿ ಮೋಡಿ ಮಾಡಿದ್ದೇನೆ. ಮಾತ್ರವಲ್ಲ ಕಿರುತೆರೆ ವೀಕ್ಷಕರು ಕೂಡಾ ಮಿಥುನ್ ಪಾತ್ರವನ್ನು ಮೆಚ್ಚಿಕೊಂಡಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ" ಎಂದಿದ್ದಾರೆ ಸೂರಜ್ ಹೊಳಲು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ "ಯಾರೇ ನೀ ಮೋಹಿನಿ"ಯಲ್ಲಿ ಬೆಳ್ಳಿಯ ಪ್ರೀತಿಯ ಮುತ್ತು ಮಾವನಾಗಿ ಅಭಿನಯಿಸಿದ್ದ ಸೂರಜ್ ಹೊಳಲು ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು.
'ಯಾರೇ ನೀ ಮೋಹಿನಿ' ಧಾರಾವಾಹಿಯ ನಂತರ ಪರಭಾಷೆಯ ಕಿರುತೆರೆಯತ್ತ ಮುಖ ಮಾಡಿದ ಸೂರಜ್ ಹೊಳಲು ತೆಲುಗಿನ 'ಚಿಟ್ಟಿ ತಲ್ಲಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದರು. ಮಾತ್ರವಲ್ಲದೇ ಸಹಜ ನಟನೆಯ ಮೂಲಕ ಪರಭಾಷೆಯ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಭುವನ್ ಎನ್ನುವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಸೂರಜ್ 'ಗೃಹಪ್ರವೇಶ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದರು. ಇದೀಗ ಆ ಧಾರಾವಾಹಿಯು ಕೂಡಾ ಮುಕ್ತಾಯಗೊಂಡಿದ್ದು ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications











