'ಸಿಲ್ಲಿ ಲಲ್ಲಿ' ಫೇಮಸ್ ಜೋಡಿ ಕಿರುತೆರೆಗೆ ಎಂಟ್ರಿ; ಯಾವ ಸೀರಿಯಲ್‌ನಲ್ಲಿ ಬರ್ತಾರೆ ನಮಿತಾ-ವಿಕ್ರಂ?
'ಸಿಲ್ಲಿ ಲಲ್ಲಿ' ಧಾರಾವಾಹಿ ಯಾರಿಗೆ ನೆನಪಿಲ್ಲ ಹೇಳಿ?! ಅದರಲ್ಲಿ ಡಾಕ್ಟ್ರೇ ಎಂದು ರಾಗ ಎಳೆಯುತ್ತಾ ಬರುತ್ತಿದ್ದ ಎನ್ಎಂಎಲ್ ನರ್ಸ್ ಪಾತ್ರಕ್ಕೆ ಜೀವ ತುಂಬಿದ್ದ ನಟಿ ನಮಿತಾ ಅವರು ಬಹಳ ದಿನಗಳಿಂದ ಹೆಚ್ಚೇನು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
'ಪಾಪ ಪಾಂಡು', 'ಸಿಲ್ಲಿ ಲಲ್ಲಿ' ಧಾರಾವಾಹಿ ಖ್ಯಾತಿಯ ನಟ ವಿಕ್ರಂ ಸೂರಿ ಕೂಡ ಹಲವು ಧಾರಾವಾಹಿಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿದ್ದರು. ಅಲ್ಲದೆ ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ನಟನರ ಮೆಂಟರ್ ಆಗಿ ಕಾಣಿಸಿಕೊಂಡರು.

ನಿಜ ಜೀವನದಲ್ಲಿ ನಟಿ ನಮಿತಾ ಹಾಗೂ ನಟ ವಿಕ್ರಂ ಸೂರಿ ಇಬ್ಬರೂ ಮದುವೆಯಾಗಿದ್ದು, ಇದೀಗ ಈ ದಂಪತಿಗಳು ಮತ್ತೊಮ್ಮೆ ಒಟ್ಟಿಗೆ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ, ಈ ಜೋಡಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮಿ ದಾಂಪತ್ಯದ ನಡುವೆ ಒಂದಷ್ಟು ಬಿರುಕು ಬಿಟ್ಟಿರುವುದು ವೀಕ್ಷಕರಿಗೆ ಗೊತ್ತಿರುವ ವಿಚಾರ. ಇದೀಗ ಸದ್ಯಕ್ಕೆ ಹಳ್ಳಿಯಲ್ಲಿರುವ ಈ ಜೋಡಿ ತಮ್ಮ ದಾಂಪತ್ಯ ಜೀವನವನ್ನು ಸರಿ ಮಾಡಿಕೊಳ್ಳುವ ಅಗ್ನಿ ಪರೀಕ್ಷೆಯಲ್ಲಿದ್ದಾರೆ.
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಖಳನಾಯಕಿ ಕೀರ್ತಿ ಇವರಿಬ್ಬರ ದಾಂಪತ್ಯವನ್ನು ಹಾಳು ಮಾಡಲು ಮೇಲಿಂದ ಮೇಲೆ ಹೊಸ ಹೊಸ ಪ್ಲಾನ್‌ಗಳನ್ನು ಮಾಡುತ್ತಲೇ ಇದ್ದಾಳೆ. ಅದೃಷ್ಟವಶಾತ್ ಅವಳ ಎಲ್ಲಾ ಪ್ಲಾನ್‌ಗಳು ಸದ್ಯಕ್ಕೆ ಫ್ಲಾಪ್ ಆಗುತ್ತಿವೆ.

ಇದೀಗ ವೈಷ್ಣವ್ ಹಾಗೂ ಲಕ್ಷ್ಮೀ ಜೀವನದಲ್ಲಿ ಎದುರಾಗಿರುವ ಸವಾಲುಗಳನ್ನು ದೂರಾಗಿಸಿ, ಅವರ ನಡುವಿನ ಸ್ಪರ್ಧೆಗೆ ಸರಿಯಾದ ತೀರ್ಮಾನ ನೀಡಿ, ಅವರಿಬ್ಬರ ದಾಂಪತ್ಯವನ್ನು ಸರಿ ಮಾಡಲು ಇಬ್ಬರು ವಿಶೇಷ ತೀರ್ಪುಗಾರರು ಎಂಟ್ರಿ ಕೊಡುತ್ತಿದ್ದಾರೆ. ಅವರೇ ನಮಿತಾ ಹಾಗೂ ವಿಕ್ರಂ ಸೂರಿ ಜೋಡಿ.
ರೀಲ್ ದಂಪತಿಗೆ ರಿಯಲ್ ದಂಪತಿಯ ತೀರ್ಪು ಜನರಲ್ಲಿ ಬಹಳ ಕುತೂಹಲ ಹುಟ್ಟಿಸಿದೆ. ತಮ್ಮ ಆಗಮನವನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿರುವ ನಟರಾದ ನಮಿತಾ ಹಾಗೂ ವಿಕ್ರಂ ಸೂರಿ ಅವರು ಈ ಬಗ್ಗೆ ಬಹಳ ಖುಷಿಪಟ್ಟಿದ್ದಾರೆ. ನಾವು ಮತ್ತೆ ಕಿರುತೆರೆಗೆ ಕಾಲಿಡುತ್ತಿದ್ದೇವೆ ಎಂದು ಬರೆದು ಕೊಂಡಿರುವ ಅವರು ಒಂದು ಸಣ್ಣ ವಿಡಿಯೋ ಮೂಲಕ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಶೂಟಿಂಗ್ ಝಲಕ್ ಅನ್ನು ಹೊರಹಾಕಿದ್ದಾರೆ.
ಇದೀಗ ಈ ಹೊಸ ಎಂಟ್ರಿ ಕಥೆಗೆ ಯಾವ ರೀತಿಯ ಟ್ವಿಸ್ಟ್ ಕೊಡುತ್ತದೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್ನೊಂದು ಕಡೆ ಮತ್ತೆ ಈ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಕಾತುರರಾಗಿದ್ದಾರೆ.


Click it and Unblock the Notifications











