Asha Ayyanar: 'ಭರ್ಜರಿ ಬ್ಯಾಚುಲರ್ಸ್'ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆಶಾ ಅಯ್ಯನರ್.. ಯಾರಿವರು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್' ಕಿರುತೆರೆಗೆ ಹೊಸದಾಗಿದ್ದು ವೀಕ್ಷಕರು ಮೆಚ್ಚಿಕೊಂಡಿದ್ದರು. ಆದರೆ, ಈ ಶೋವಿನ ಸ್ಪರ್ಧಿಯಾಗಿದ್ದ ಚಂದನಾ ಅನಂತಕೃಷ್ಣ ಹೊಸ ಪ್ರಾಜೆಕ್ಟ್ ಸಲುವಾಗಿ ಈ ಶೋನಿಂದ ಹೊರಬಂದಿರುವುದು ವೀಕ್ಷಕರಿಗೆ ತಿಳಿದೇ ಇದೆ. ಇದರ ಜೊತೆಗೆ ಕಳೆದ ವಾರದ ಸಂಚಿಕೆಯಲ್ಲಿ ಆಕೆಯನ್ನು ಅದ್ಧೂರಿಯಾಗಿ ಬೀಳ್ಗೊಡಲಾಗಿತ್ತು.
ಕಳೆದ 18 ಸಂಚಿಕೆಗಳಲ್ಲಿ ಸ್ಪರ್ಧಿಯಾಗಿ ಮೋಡಿ ಮಾಡಿದ್ದ ಚಂದನಾ ಅನಂತಕೃಷ್ಣ ಈಗ ಹೊಸ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಕಾರಣ ಅವರು ಈ ರಿಯಾಲಿಟಿ ಶೋವಿನಿಂದ ಹೊರಬಂದಿದ್ದಾರೆ. ರುದ್ರ ಮಾಸ್ಟರ್ ಜೋಡಿಯಾಗಿ ಚಂದನಾ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಇದೀಗ ಅವರ ಜಾಗಕ್ಕೆ ಬೇರೊಬ್ಬ ನಟಿಯ ಆಗಮನವಾಗಿದೆ.

'ಭರ್ಜರಿ ಬ್ಯಾಚುಲರ್ಸ್' ತಂಡ ಸೇರಿದ ಆಶಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಭಾಗ್ಯ ತಂಗಿ ಪೂಜಾ ಆಗಿ ನಟಿಸುತ್ತಿರುವ ಆಶಾ ಅಯ್ಯನರ್ ಅವರು 'ಭರ್ಜರಿ ಬ್ಯಾಚುಲರ್ಸ್' ತಂಡ ಸೇರಿದ್ದಾರೆ. ಅಂದ ಹಾಗೇ ರುದ್ರ ಮಾಸ್ಟರ್ ಅವರಿಗೆ ಜೋಡಿಯಾಗಿ ಆಶಾ ಅವರು ಕಾಣಿಸಿಕೊಳ್ಳಲಿದ್ದು ಈಗಾಗಲೇ ವಾಹಿನಿ ಬಿಡುಗಡೆ ಮಾಡಿರುವ ಈ ವಾರದ ಸಂಚಿಕೆಯ ಪ್ರೋಮೋನಲ್ಲಿ ಆಶಾ ಅವರನ್ನು ಕಾಣಬಹುದು.
ಪಕ್ಕಾ ನೆಗೆಟಿವ್ ಪಾತ್ರ!
'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಪೂಜಾ ಪಾತ್ರದಲ್ಲಿ ಕಾಣಿಸಿಕೊಂಡರುವ ಆಶಾ ಅವರದ್ದು ನೆಗೆಟಿವ್ ಶೇಡ್ ಹೊಂದಿರುವಂತಹ ಪಾತ್ರ. ಸದಾ ಕಾಲ ಲಕ್ಷುರಿ ಜೀವನವನ್ನೇ ಸಾಗಿಸುವ ಪೂಜಾಗೆ ತನ್ನ ಚಿಂತೆ ಮಾತ್ರ. ತನಗೆ ಬೇಕಾದುದನ್ನು ಪಡೆಯುವುದಕ್ಕೆ ಅವಳು ಲಕ್ಷ್ಮಿಯನ್ನು ಅಸ್ತ್ರವನ್ನಾಗಿ ಬಳಸುತ್ತಿದ್ದಳು. ಈಗ ಲಕ್ಷ್ಮಿ ಮದುವೆ ಆಗಿ ಹೋದ ಮೇಲೆಯೂ ಅವಳನ್ನು ಗೋಳು ಹೊಯ್ದುಕೊಳ್ಳುವುದನ್ನು ಪೂಜಾ ಬಿಡುತ್ತಿಲ್ಲ.
ರೀಲ್ ಬೇರೆ, ರಿಯಲ್ ಬೇರೆ
ಇಷ್ಟರವರೆಗೆ ಆಶಾ ಅಯ್ಯನರ್ ಅವರನ್ನು ರೀಲ್‌ನಲ್ಲಿ ನೋಡಿರುವವರೇ ಹೆಚ್ಚು. ಇದೀಗ ರಿಯಲ್ ಆಗಿ ಆಶಾ ಅವರು ಏನು ಎಂಬುದು ಕಿರುತೆರೆ ವೀಕ್ಷಕರಿಗೆ ತಿಳಿಯುವ ಸಮಯ ಹತ್ತಿರ ಬಂದಿದೆ. ರೀಲ್ ಲೈಫ್‌ನಲ್ಲಿ ನಾವು ಅವರ ನಿಜವಾದ ಸ್ವಭಾವಗಳೇನು ಎಂಬುದನ್ನು ಅರಿಯಲು ಸಾಧ್ಯವಿಲ್ಲ. ಸದ್ಯ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವ ಆಶಾ ಈ ಶೋವಿನ ಮೂಲಕ ಜನರ ಮನ ಸೆಳೆದರೆ ಸಂಶಯವಿಲ್ಲ.

ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟನೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಮೂಲಕ ನಟನೆಗೆ ಕಾಲಿಟ್ಟ ಆಶಾ ಅಯ್ಯನರ್ ತದ ನಂತರ ನಟಿಸಿದ್ದು 'ಮೂರುಗಂಟು' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೂರು ಗಂಟು' ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದ ಈಕೆ ಇದೀಗ 'ಭಾಗ್ಯಲಕ್ಷ್ಮಿ'ಯ ಪೂಜಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











