ಪರಭಾಷಾ ಕಿರುತೆರೆಯಲ್ಲಿ ಕನ್ನಡದ ನಟಿ ಮಿಂಚಿಂಗ್.. ಕಿರುತೆರೆಯ 'ರಾಜಕುಮಾರಿ' ಆಶಿತಾ
ಕನ್ನಡ ಕಿರುತೆರೆಯ ಮೂಲಕ ಗುರುತಿಸಿಕೊಂಡ ಅನೇಕ ನಟಿ ನಟಿಯರು ಪರಭಾಷೆಯ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ತೀರಾ ಮಾಮೂಲಿಯಾದ ಸಂಗತಿ. ಆ ಪಾಲಿಗೆ ಸೇರಿರುವ ಆಶಿಕಾ ಪಡುಕೋಣೆ ತಮ್ಮ ಮನೋಜ್ಞವಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕಿ ನಯನಿ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ ಆಶಿಕಾ ಪಡುಕೋಣೆ.
ಸಂತಸದ ಸಂಗತಿಯೆಂದರೆ 'ತ್ರಿನಯಿನಿ' ಧಾರಾವಾಹಿಯು ಕನ್ನಡ ಭಾಷೆಗೆ ಡಬ್ ಆಗಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದೆ. ಒಂದು ಹೊಸ ರೀತಿಯ ಕಥಾನಕವನ್ನು ಹೊಂದಿರುವ ತ್ರಿನಯಿನಿ ಧಾರಾವಾಹಿಯು ಕನ್ನಡ ಕಿರುತೆರೆ ವೀಕ್ಷಕರನ್ನು ಸೆಳೆದಿದೆ.

ಉತ್ತಮ ಕಥಾನಾಯಕಿ ಆಶಿಕಾ ಪಡುಕೋಣೆ
'ತ್ರಿನಯಿನಿ' ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಮೊದಲು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಆಶಿಕಾ ಪಡುಕೋಣೆ ನಟಿಸಿದ್ದರು.ಆದರೆ ಅವರ ವೃತ್ತಿ ಜೀವನಕ್ಕೆ ಬ್ರೇಕ್ ತಂದುಕೊಟ್ಟಿದ್ದು, ಜನಪ್ರಿಯತೆ ಜಾಸ್ತಿಯಾಗುವಂತೆ ಮಾಡಿದ್ದು "ತ್ರಿನಯಿನಿ" ಧಾರಾವಾಹಿ ಎಂದರೆ ತಪ್ಪಾಗಲಾರದು. ಅದಕ್ಕೆ ಜೀ ಕುಟುಂಬಂ ಅವಾರ್ಡ್ಸ್ ನಲ್ಲಿ ಅವರು ಪಡೆದ 'ಉತ್ತಮ ಕಥಾನಾಯಕಿ' ಪ್ರಶಸ್ತಿಯೇ ಪ್ರಸ್ತಕ್ತ ಉದಾಹರಣೆ.
ಕಿರುತೆರೆಯ 'ರಾಜಕುಮಾರಿ' ಆಶಿತಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಕುಮಾರಿ' ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ಆಶಿಕಾ ತದ ನಂತರ ತ್ರಿವೇಣಿ ಸಂಗಮದಲ್ಲಿ ನಾಯಕಿಯಾಗಿ ನಟಿಸಿದರು. ಮುಂದೆ ನಿಹಾರಿಕಾ ಧಾರಾವಾಹಿಯಲ್ಲಿ ಅರ್ಧದ ಬಳಿಕ ನಾಯಕಿಯಾಗಿ ಕಾಣಿಸಿಕೊಂಡ ಈಕೆ ವೀಕ್ಷಕರ ಮನ ಸೆಳೆದುಬಿಟ್ಟರು. ಮುಂದೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ಆಕೆ ಹಾರಿದ್ದು ಪರಭಾಷೆಯ ಕಿರುತೆರೆಗೆ.
ತಮಿಳು ಸೆಲ್ವಿ ಧಾರಾವಾಹಿಯಲ್ಲಿ ಮೋಡಿ
ತಮಿಳಿನ 'ತಮಿಳು ಸೆಲ್ವಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಕಾಣಿಸಿಕೊಂಡ ಆಶಿಕಾ ಪಡುಕೋಣೆ ನಂತರ ಹಾರಿದ್ದು ತೆಲುಗು ಕಿರುತೆರೆಯಲ್ಲಿ. 'ಕಥಾಲೋ ರಾಜಕುಮಾರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಆ ಧಾರಾವಾಹಿಯು ಕೂಡಾ 'ಕಥೆಯಾ ರಾಜಕುಮಾರಿ' ಹೆಸರಿನಲ್ಲಿ ಕನ್ನಡದಲ್ಲಿ ಪ್ರಸಾರ ಕಂಡಿದ್ದು ಟಿ ಆರ್ ಪಿ ಸಮಸ್ಯೆಯಿಂದಾಗಿ ಅರ್ಧದಲ್ಲಿಯೇ ಮುಕ್ತಾಯಗೊಂಡಿತ್ತು.

ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲೂ ಸಕತ್ ಆ್ಯಕ್ಟೀವ್ ಆಗಿರುವ ಆಶಿಕಾ ಪಡುಕೋಣೆ ಫೋಟೋಗಳ ಜೊತೆಗೆ ವಿಡಿಯೋಗಳನ್ನು ಕೂಡಾ ಮಾಡಿ ಆಗಾಗ ಶೇರ್ ಮಾಡುತ್ತಿರುತ್ತಾರೆ. ಟ್ರಕ್ಕಿಂಗ್ ಹೋಗಿದ್ದಾಗ ತೆಗೆದಿರುವಂತಹ ವಿಡಿಯೋ, ಗೋವಾ ಟ್ರಿಪ್ ಹೀಗೆ ಅನೇಕ ವಿಡಿಯೋ ಶೇರ್ ಮಾಡಿದ್ದಾರೆ ಆಶಿಕಾ ಪಡುಕೋಣೆ.


Click it and Unblock the Notifications











