ತೆಲುಗು ಕಿರುತೆರೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದ ಈ 'ಕನ್ನಡತಿ' ಯಾರು? ಹಿನ್ನೆಲೆಯೇನು?
ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಜಗದ್ಧಾತ್ರಿ'ಯೂ ಒಂದು. ಈ ಧಾರಾವಾಹಿಯಲ್ಲಿ ನಾಯಕಿ ಜಗದ್ಧಾತ್ರಿಯಾಗಿ ನಟಿಸಿ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಬೆಡಗಿಯ ಹೆಸರು ದೀಪ್ತಿ ಮನ್ನೆ. ತಮ್ಮ ಸಹಜ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ದೀಪ್ತಿ ಮನ್ನೆ ಕನ್ನಡತಿ ಎಂಬುದು ಹೆಮ್ಮೆಯ ವಿಚಾರ.
ಅಂದ ಹಾಗೇ ಈಗ್ಯಾಕೆ 'ಜಗದ್ಧಾತ್ರಿ' ಧಾರಾವಾಹಿಯ ವಿಷಯ, ದೀಪ್ತಿ ಮನ್ನೆಯವರ ವಿಚಾರ ಬಂದಿದೆ ಎಂದು ನಿಮಗೆ ಅನ್ನಿಸುತ್ತಿರಬಹುದು. ಆದರೆ, ಅದಕ್ಕೆ ಅಸಲಿ ಕಾರಣವೂ ಇದೆ. ಅದೇನೆಂದರೆ ಜೀ ಕುಟುಂಬಂ ಅವಾರ್ಡ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆದಿದೆ. ಅದರಲ್ಲಿ 'ಉತ್ತಮ ಕಥಾನಾಯಕಿ' ಪ್ರಶಸ್ತಿಯನ್ನು ಜಗದ್ಧಾತ್ರಿ ಆಲಿಯಾಸ್ ದೀಪ್ತಿ ಮನ್ನೆ ಪಡೆದುಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪದ್ಮಾವತಿ' ಧಾರಾವಾಹಿಯ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡ ಬೆಡಗಿ ಈಕೆ. ಹೌದು, 'ಪದ್ಮವತಿ' ಧಾರಾವಾಹಿಯಲ್ಲಿ ನಾಯಕಿ ಪದ್ಮಾವತಿಯಾಗಿ ನಟಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ ದೀಪ್ತಿ ಮನ್ನೆ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದುದು ತಮಿಳು ಸಿನಿಮಾ!
ತಮಿಳಿನ "ಎವನ್" ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ದೀಪ್ತಿ ಮನ್ನೆ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಕನ್ನಡದ "ನಮ್ಮೂರ ಹೈಕ್ಳು", ತಮಿಳಿನ " ದೇವದಾಸ್ ಬ್ರದರ್ಸ್", ತೆಲುಗಿನ "ಇಕ್ ಸೇ ಲವ್" ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 'ಪದ್ಮಾವತಿ'ಯ ತುಳಸಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟ ದೀಪ್ತಿ ಮನ್ನೆಗೆ ಇದು ಮೊದಲ ಕನ್ನಡ ಧಾರಾವಾಹಿ. ಮಾತ್ರವಲ್ಲ ಅದು ಅವರ ಕೊನೆಯ ಕನ್ನಡ ಧಾರಾವಾಹಿಯೂ ಹೌದು.

ಇಂದಿಗೂ ತುಳಸಿಯಾಗಿ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಿತವಿರುವ ದೀಪ್ತಿ ಮನ್ನೆ ಮುಂದೆ ಕಾಣಿಸಿಕೊಂಡಿದ್ದು ತೆಲುಗು ಕಿರುತೆರೆಯಲ್ಲಿ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಮ್ಮ ಕುತುರು' ಧಾರಾವಾಹಿಯಲ್ಲಿ ನಾಯಕಿ ಅಕ್ಷರಾ ಆಗಿ ಈಕೆ ಕಾಣಿಸಿಕೊಂಡಿದ್ದರು. ಇದೀಗ 'ಜಗದ್ಧಾತ್ರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ದೀಪ್ತಿ ಮನ್ನೆ ಫ್ಯಾಷನ್ ಡಿಸೈನಿಂಗ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ.
ಬೆಂಗಳೂರಿನ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗೆ ಸೇರಿದ್ದರು ದೀಪ್ತಿ ಮನ್ನೆ. ವಿದ್ಯಾರ್ಥಿನಿಯಾಗಿದ್ದಾಗ ಆಕೆಯ ಸ್ನೇಹಿತರು ನೀನ್ಯಾಕೆ ನಟಿಯಾಗಬಾರದು? ನಟನೆಗೆ ಯಾಕೆ ಕಾಲಿಡಬಾರದು ಎಂದು ಪ್ರಶ್ನಿಸುತ್ತಿದ್ದರು. ಸ್ನೇಹಿತರ ಪ್ರಶ್ನೆಗಳನ್ನೆಲ್ಲಾ ಗಂಭೀರವಾಗಿ ತೆಗೆದುಕೊಂಡ ದೀಪ್ತಿ ಮನ್ನೆ ಪದವಿಯ ನಂತರ ನಟನೆಗೆ ಕಾಲಿಡುವ ನಿರ್ಧಾರ ಮಾಡಿದರು.
ಒಟ್ಟಿನಲ್ಲಿ ಇದೀಗ ಬಣ್ಣದ ಬದುಕಿನಲ್ಲಿ ಬದುಕು ರೂಪಿಸಿಕೊಂಡಿರುವ ದೀಪ್ತಿ ಮನ್ನೆ ಪರಭಾಷೆಯ ಕಿರುತೆರೆಯಲ್ಲಿ ಉತ್ತಮ ಕಥಾನಾಯಕಿ ಪ್ರಶಸ್ತಿ ಪಡೆದಿರುವುದು ನಿಜವಾಗಿಯೂ ಹೆಮ್ಮೆಯ ಸಂಗತಿ ಹೌದು. 'ಜಗದ್ಧಾತ್ರಿ'ಯಾಗಿ ತೆಲುಗು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ದೀಪ್ತಿ ಮನ್ನೆ ಮತ್ಯಾವಾಗಲಾದರೂ ಕನ್ನಡ ಕಿರುತೆರೆಗೆ ಮರಳುತ್ತಾರಾ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











