Disha Madan: 10 ವರ್ಷಗಳ ಬಳಿಕ ಕಿರುತೆರೆಗೆ ಮರಳಿದ ನಟಿ.. 'ಲಕ್ಷ್ಮಿ ನಿವಾಸ'ಕ್ಕೆ ದಿಶಾ ಮದನ್ ಎಂಟ್ರಿ!
ದಿಶಾ ಮದನ್.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿರುವ 'ಕುಲವಧು'ವಿನಲ್ಲಿ ವಚನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಒಂದಿಷ್ಟು ದಿನ ನಟಿಸಿದ ಬಳಿಕ ದಿಶಾ ಮದನ್ ಧಾರಾವಾಹಿಯಿಂದ ಹಿಂದೆ ಸರಿದಿದ್ದರು.
ಇದೀಗ ದಿಶಾ ಮದನ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ವಾಹಿನಿಯು ಈ ಹೊಸ ಧಾರಾವಾಹಿಯ ಪ್ರೋಮೋವೊಂದನ್ನು ಕೂಡಾ ರಿಲೀಸ್ ಮಾಡಿದ್ದು, ದಿಶಾ ಮದನ್ ಅವರನ್ನು ಅದರಲ್ಲಿ ಕಾಣಬಹುದು.

ಇದರ ಜೊತೆಗೆ ಈ ಸಂತಸದ ವಿಚಾರವನ್ನು ಸ್ವತಃ ದಿಶಾ ಮದನ್ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಹತ್ತು ವರ್ಷದ ಹಿಂದೆ ನಾನು ಮೊದಲ ಬಾರಿಗೆ ನಟಿಯಾಗಿ ಕಾಣಿಸಿಕೊಂಡಿದ್ದೆ. ಸಾಕಷ್ಟು ಪ್ರೀತಿಯನ್ನು, ಪ್ರೋತ್ಸಾಹವನ್ನು ನಾನು ವಚನಾ ಪಾತ್ರಕ್ಕಾಗಿ ಗಿಟ್ಟಿಸಿಕೊಂಡಿದ್ದೆ. ಇದೀಗ ಹತ್ತು ವರ್ಷಗಳ ಬಳಿಕ ನಾನು ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಅದು ಭಾವನಾಳಾಗಿ. ಮತ್ತೆ ಕಂ ಬ್ಯಾಕ್ ಆಗುತ್ತಿರುವುದಕ್ಕೆ ಒಂದು ಕಡೆ ಖುಷಿಯಾಗುತ್ತಿದ್ದರೆ, ಇನ್ನೊಂದೆಡೆ ನರ್ವಸ್ ಕೂಡಾ ಆಗುತ್ತಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗಿರಲಿ" ಎಂದು ದಿಶಾ ಮದನ್ ಬರೆದುಕೊಂಡಿದ್ದಾರೆ .
'ಕುಲವಧು' ಧಾರಾವಾಹಿಯಿಂದ ಕಾರಣಾಂತರಗಳಿಂದ ಹೊರಬಂದ ದಿಶಾ ಮದನ್ ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಆಗಿ ಗುರುತಿಸಿಕೊಂಡರು. ಡಬ್ ಸ್ಮ್ಯಾಶ್, ರೀಲ್ಸ್, ಮ್ಯೂಸಿಕಲಿ ಆ್ಯಪ್‌ಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ದಿಶಾ ಮದನ್ ಮ್ಯೂಸಿಕಲ್ ಆ್ಯಪ್‌ನಲ್ಲಿ ಮಿಲಿಯನ್ ಫಾಲೋವರ್ಸ್ ಪಡೆದು ಸಾಕಷ್ಟು ಸದ್ದು ಮಾಡಿದ್ದರು.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಗಳು ನಿವೇದಿತಾ ಅವರ ಶ್ರೀಮುತ್ತು ಸಿನಿ ಸರ್ವೀಸಸ್ ಹಾಗೂ ಸಕ್ಕತ್ ಸ್ಟುಡಿಯೋ ನಿರ್ಮಾಣದಲ್ಲಿ ಮೂಡಿ ಬಂದ ವೆಬ್ ಸಿರೀಸ್ 'ಹೇಟ್ ಯೂ ರೋಮಿಯೋ'ದಲ್ಲಿ ಚಾರ್ವಿ ಪಾತ್ರಕ್ಕೆ ಜೀವ ತುಂಬಿದ ದಿಶಾ ಮದನ್ ನಂತರ 'ಹಂಬಲ್ ಪೋಲಿಟಿಶಿಯನ್ ನೊಗರಾಜ್' ವೆಬ್ ಸಿರೀಸ್‌ನಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಇನ್ನು ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ಪತ್ರಕರ್ತೆ ಮಾಲಿನಿ ಪಾತ್ರದ ಮೂಲಕ ಮೋಡಿ ಮಾಡಿದ್ದ ದಿಶಾ ಮದನ್ ಅತಿಥಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಗಂಧರ್ವ ಲೋಕದ ಮಹಾರಾಣಿ ಉತ್ಕಲಾ ಆಗಿ ಮಿಂಚಿದ್ದರು. ಇದೀಗ ಬಹುದೊಡ್ಡ ಬ್ರೇಕ್‌ನ ನಂತರ ಪೂರ್ಣ ಪ್ರಮಾಣದ ನಟಿಯಾಗಿ ದಿಶಾ ಮದನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸೀರಿಯಲ್ ಪ್ರಿಯರಿಗೆ ಸಂತಸ ತಂದಿದೆ.


Click it and Unblock the Notifications











