'ವಧು'ವಾಗಿ ಕಿರುತೆರೆಗೆ ಕಂ ಬ್ಯಾಕ್ ಮಾಡಿದ ದುರ್ಗಾಶ್ರೀ; ಈ ನಟಿ ಹಿಂದಿನ ಧಾರಾವಾಹಿ ಯಾವುದು ಗೊತ್ತೇ?
ವಿನೂತನ ಧಾರಾವಾಹಿಗಳ ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡ ವಾಹಿನಿಯೂ ಒಂದು. ಇಂತಿಪ್ಪ ಕಲರ್ಸ್ ಕನ್ನಡ ವಾಹಿನಿಗೆ ಇದೀಗ 'ವಧು'ವಿನ ಆಗಮನವಾಗಿದೆ. ಅರ್ಥಾತ್ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ವಧು' ಎನ್ನುವ ಧಾರಾವಾಹಿಯು ಅತೀ ಶೀಘ್ರದಲ್ಲಿ ಶುರುವಾಗಲಿದೆ.
ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯು ಧಾರಾವಾಹಿಯ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂದ ಹಾಗೇ 'ವಧು' ಧಾರಾವಾಹಿಯ ಸಾರಾಂಶ ಏನೆಂದರೆ ಇದು ಡಿವೋರ್ಸ್ ಲಾಯರ್ ಮದುವೆ ಕಥೆ. ಹೌದು, ನಾಯಕಿಗೆ ಮದುವೆ ಬೇಕಾದರೆ ನಾಯಕನಿಗೆ ತನ್ನ ಮದುವೆಯಿಂದ ಡಿವೋರ್ಸ್ ಬೇಕು. ಒಟ್ಟಿನಲ್ಲಿ ತುಂಬಾ ವಿಭಿನ್ನ ಕಥಾ ಹಂದರವನ್ನೊಳಗೊಂಡಿರುವ ಧಾರಾವಾಹಿಯ ಪ್ರೋಮೋವನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಯಾವ ರೀತಿಯಲ್ಲಿ ಧಾರಾವಾಹಿಯು ಸಾಗಬಹುದು ಎಂಬ ಕುತೂಹಲವು ಕೂಡಾ ವೀಕ್ಷಕರಿಗಿದೆ.

ಅಂದ ಹಾಗೇ ನಾವಿಂದು ಮಾತನಾಡಬೇಕಾದ್ದು 'ವಧು'ವಿನ ಬಗ್ಗೆ. ಹೌದು, ವಧುವಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲು ಬರಲಿರುವ ಈಕೆಯ ಹೆಸರು ದುರ್ಗಾಶ್ರೀ. ಕನ್ನಡ ಕಿರುತೆರೆ ವೀಕ್ಷಕರಿಗೆ ಈಕೆಯದು ತೀರಾ ಪರಿಚಿತ ಹೆಸರಲ್ಲದಿದ್ದರೂ ಪರಿಚಿತ ಮುಖವಂತೂ ಹೌದು. ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೇತ್ರಾವತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ದುರ್ಗಾಶ್ರೀ. ಇದೀಗ ವಧುವಾಗಿ ಕಿರುತೆರೆಗೆ ಕಾಲಿಡಲಿರುವ ಈಕೆ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚಿರುವ ಬೆಡಗಿ.
ದುರ್ಗಾಶ್ರೀ ಅವರು ಇಂದು ನಟಿಯಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಆಕೆಯ ಅಮ್ಮ. ಹೌದು, ದುರ್ಗಾಶ್ರೀ ಅವರ ಅಮ್ಮನಿಗೆ ಮಗಳನ್ನು ನಟಿಯಾಗಿ ನೋಡಬೇಕೆಂಬ ಕನಸಿತ್ತು. ಅದನ್ನು ಸವಲಾಗಿ ಸ್ವೀಕರಿಸಿದ ದುರ್ಗಾಶ್ರೀ ಆಡಿಶನ್‌ಗಳನ್ನು ನೀಡಲಾರಂಭಿಸಿದರು. 'ನೇತ್ರಾವತಿ'ಯ ಧಾರಾವಾಹಿಯಲ್ಲಿ ತಂಗಿಯ ಪಾತ್ರದ ಆಡಿಶನ್‌ಗೆ ಎಂದು ಹೋದ ಆಕೆ ನಾಯಕಿಯಾಗಿ ಆಯ್ಕೆಯಾಗಿದ್ದು ವಿಶೇಷ.
'ನೇತ್ರಾವತಿ' ಧಾರಾವಾಹಿಯ ನಂತರ ತೆಲುಗಿನ 'ವೈಷ್ಣವಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಈಕೆ ಪಸರಿಸಿದರು. ಮುಂದೆ ತೆಲುಗಿನ 'ಮಧುರ ನಗರಿಲೋ' ಹಾಗೂ 'ಅರ್ಧಾಂಗಿ' ಧಾರಾವಾಹಿಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ದುರ್ಗಾಶ್ರೀ.

ಇದೀಗ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ದುರ್ಗಾಶ್ರೀ ಅವರಿಗೆ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಸಹಜವಾಗಿ ಭಯವಾಗಿತ್ತು. ಆದರೆ ಧಾರಾವಾಹಿ ನಿರ್ದೇಶಕ ಸಂತೋಷ್ ಗೌಡ ಅವರು ನೀಡಿದ ಮಾರ್ಗದರ್ಶನದಿಂದ ನಟನೆಯಲ್ಲಿ ಪರಿಪಕ್ವತೆಯನ್ನು ಪಡೆಯಲು ಸಾಧ್ಯವಾಯಿತು.
ನಟನೆಯ ಹೊರತಾಗಿ ದುರ್ಗಾಶ್ರೀ ಅವರು ಭರತನಾಟ್ಯ ಕಲಾವಿದೆಯೂ ಹೌದು. ಅನುರಾಧ ವೆಂಕಟರಮಣ ಅವರ ನೃತ್ಯ ಗರಡಿಯಲ್ಲಿ ಪಳಗಿದ ದುರ್ಗಾಶ್ರೀ ಅವರು ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲಿತಿದ್ದಾರೆ. ಮುಂದೆ ನೃತ್ಯದಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ಬಯಸಿದ ಈಕೆ ಬಯಸದೇ ಬಂದ ಅವಕಾಶದಿಂದ ನಟಿಯಾಗಿ ಬಡ್ತಿ ಪಡೆದಿರುವ ಈಕೆ ಕನ್ನಡ ಮತ್ತು ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಮಾತ್ರವಲ್ಲದೇ ಅವಕಾಶ ಸಿಕ್ಕರೆ ಸಿನಿಮಾ ಕ್ಷೇತ್ರಕ್ಕೂ ಕಾಲಿಡುವ ಬಯಕೆ ಆಕೆಯದು.


Click it and Unblock the Notifications











