Actress Lavanya: "ಅವಾರ್ಡ್ ನನಗೆ ಸೆಲೆಬ್ರೆಟಿ ಇದ್ದಂಗೆ".. ಮೊದಲ ಪ್ರಶಸ್ತಿ ಪಡೆದು ಖುಷಿ ಪಟ್ಟ ನಟಿ ಲಾವಣ್ಯ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀ ರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವನ ಹಿರಿಸೊಸೆ ಪೂರ್ಣಿ ಆಗಿ ಅಭಿನಯಿಸುತ್ತಿರುವ ಮುದ್ದು ಮುಖದ ಚೆಲುವೆಯ ಹೆಸರು ಲಾವಣ್ಯ. ಸಹಜ ನಟನೆಯ ಮೂಲಕ ಕಿರುತೆರೆ ಅಂಗಳದಲ್ಲಿ ಮನೆ ಮಾತಾಗಿರುವ ಲಾವಣ್ಯ ಇದೀಗ ನೆಚ್ಚಿನ ಪೋಷಕ ನಟಿಯೂ ಹೌದು.
ಇತ್ತೀಚೆಗೆ ಅದ್ಧೂರಿಯಾಗಿ ಜೀ ಕುಟುಂಬ ಅವಾರ್ಡ್ಸ್ ನಡೆದಿದೆ. ಕಿರುತೆರೆ ಹಾಗೂ ಚಿತ್ರರಂಗದ ಸ್ಟಾರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಪ್ರಶಸ್ತಿ ಸಮಾರಂಭದಲ್ಲಿ ನಟಿ ಲಾವಣ್ಯ ಪೋಷಕ ನಟಿ ಪ್ರಶಸ್ತಿಯನ್ನಯ ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ "ನನಗಂತೂ ತುಂಬಾ ಖುಷಿಯಾಗುತ್ತಿದೆ. ಇದು ನನ್ನ ಮೊದಲ ಅವಾರ್ಡ್. ನಾನು ಆಗಲೇ ಹೇಳುತ್ತಿದ್ದೆ ಎಲ್ಲದಕ್ಕಿಂತ ದೊಡ್ಡ ಸೆಲೆಬ್ರಿಟಿ ಅಂದರೆ ಅದು ಈ ಅವಾರ್ಡ್. ಯಾಕೆಂದರೆ ಇದು ಎಲ್ಲರ ಕೈಗೆ ಸಿಗುವುದಿಲ್ಲ. ಈ ಒಂದು ಅವಾರ್ಡ್ ಅನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು. ಮನೆಗೆ ಕರೆದುಕೊಂಡು ಹೋಗಬೇಕು ಎಂದು. ಅದಕ್ಕೆ ನಿಜವಾಗಿಯೂ ತುಂಬಾ ಕಷ್ಟಪಡಬೇಕು. ಜೊತೆಗೆ ಜನರ ಆಶೀರ್ವಾದವೂ ಬೇಕು. ಇವತ್ತು ನಾನು ಈ ಸೆಲೆಬ್ರಿಟಿನ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಇದು ನನ್ನ ಮೊದಲ ಸೆಲೆಬ್ರಿಟಿ ಎಂದು ಸಂತೋಷದಿಂದ ಹೇಳುತ್ತೇನೆ" ಎಂದು ಖುಷಿಯಿಂದ ಹೇಳುತ್ತಾರೆ.
"ನನಗಿಂದು ಈ ಅವಾರ್ಡ್ ಸಿಗಲು ನೀವು ನೀಡಿದ ಪ್ರೋತ್ಸಾಹ, ಪ್ರೀತಿಯೇ ಕಾರಣ. ಪೂರ್ಣಿ ಪಾತ್ರವನ್ನು ನೀವೆಲ್ಲರೂ ಒಪ್ಪಿಕೊಂಡಿದ್ದೀರಿ ಎಂಬುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ. ನಿಮ್ಮೆಲ್ಲರಿಗೂ ನಾನು ಎಷ್ಟು ಧನ್ಯವಾದಗಳನ್ನು ತಿಳಿಸಿದರು ಸಾಲದು" ಎಂದು ಲಾವಣ್ಯ ಅಭಿಪ್ರಾಯ ಪಟ್ಟಿದ್ದಾರೆ. ಅಂದ್ಹಾಗೆ ಇವರ ನಟನಾ ಜರ್ನಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯ ಮೂಲಕ ಶುರುವಾಗಿತ್ತು.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ನಟಿಸಿ, ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಲಾವಣ್ಯ ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಮಿಂಚಿದ್ದರು. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದಾಸ ಪುರಂದರ' ಧಾರಾವಾಹಿಯಲ್ಲಿ ನಾಯಕ ಶ್ರೀನಿವಾಸನ ಚಿಕ್ಕಮ್ಮ ಪದ್ಮ ಪಾತ್ರಕ್ಕೆ ಜೀವ ತುಂಬಿದ್ದರು. ಈ ನಟಿ ನೆಗೆಟಿವ್ ಮತ್ತು ಪಾಸಿಟಿವ್ ಇವೆರಡನ್ನೂ ಒಂದೇ ಪಾತ್ರದಲ್ಲಿ ಸರಿದೂಗಿಸಿಕೊಂಡು ಸಾಗಿದ ಬೆಡಗಿ.

ಮುದ್ದಾದ ನಟನೆಯ ಮೂಲಕ ಕಿರುತೆರೆಯಲ್ಲು ಗುರುತಿಸಿಕೊಂಡಿರುವ ಲಾವಣ್ಯ ಇತನ್ಮಧ್ಯೆ ನಟನೆಯಿಂದ ಬ್ರೇಕ್ ಪಡೆದುಕೊಂಡು ಕಾರ್ಪೋರೆಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ 'ರಾಜ ರಾಣಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಕೆಲಸಕ್ಕೆ ವಿದಾಯ ಹೇಳಿ ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ಕಾಣಿಸಿಕೊಂಡರು.
"ನಾವು ನಟನೆಯಿಂದ ಕಲಿಯುವುದು ಬೇಕಾದಷ್ಟು ವಿಷಯಗಳಿವೆ. ಪ್ರತಿದಿನವೂ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿರುತ್ತೇವೆ. ಜೊತೆಗೆ ಚಾಲೆಂಜಿಂಗ್ ಆಗಿರುವಂತಹ ಪಾತ್ರಗಳಲ್ಲಿ ನಟಿಸಲು ನನಗೆ ಇಷ್ಟ." ಎನ್ನುವ ಲಾವಣ್ಯ ಅವರು ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಬಣ್ಣ ಹಚ್ಚಲು ಕೂಡಾ ರೆಡಿಯಾಗಿದ್ದಾರೆ.


Click it and Unblock the Notifications











