ಸೂಪರ್ ಎಕ್ಸ್ ಕ್ಲೂಸಿವ್: ಇಂದು 'ಬಿಗ್ ಬಾಸ್'ಗೆ ಮೆಗಾ ಎಂಟ್ರಿ ನೀಡಲಿರುವ ಸುಂದರಿ ಈಕೆಯೇ.!
Recommended Video

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ 'ಬಿಗ್ ಬಾಸ್' ಸೀಸನ್ ಆರರಲ್ಲಿ ಪ್ರಥಮ ವೈಲ್ಡ್ ಕಾರ್ಡ್ ಎಂಟ್ರಿಗೆ ಕಾಲ ಕೂಡಿ ಬಂದಿದೆ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮವನ್ನು ಬಿಟ್ಟೂ ಬಿಡದೆ ನೋಡುತ್ತಿರುವವರಿಗೆ ನಿನ್ನೆಯ ಸಂಚಿಕೆಯಲ್ಲಿ 'ವೈಲ್ಡ್ ಕಾರ್ಡ್ ಎಂಟ್ರಿ' ಬಗ್ಗೆ ಚಿಕ್ಕ ಕ್ಲೂ ನೀಡಲಾಗಿತ್ತು.
'ದಿ ವಿಲನ್' ಚಿತ್ರದ 'ರಾವಣ...' ಹಾಡು ಪ್ಲೇ ಆಗುತ್ತಿದ್ದಂತೆಯೇ, 'ಬಿಗ್ ಬಾಸ್' ಮನೆಯ ಮುಖ್ಯ ದ್ವಾರ ತೆರೆಯುತ್ತದೆ. ಇನ್ನೇನು ಹೊಸ ಸ್ಪರ್ಧಿಯ ಮುಖ ನೋಡುವಷ್ಟರಲ್ಲಿ ಕಟ್ ಮಾಡಲಾಗಿತ್ತು.
ಅಸಲಿಗೆ, 'ಬಿಗ್ ಬಾಸ್' ಮನೆಗೆ 'ವೈಲ್ಡ್ ಕಾರ್ಡ್' ಮೂಲಕ ಎಂಟ್ರಿ ನೀಡಲಿರುವ ಸ್ಪರ್ಧಿ ಯಾರು ಎಂಬ ಕುತೂಹಲಕ್ಕೆ ನಾವು ಬ್ರೇಕ್ ಹಾಕ್ತೀವಿ... ನೋಡಿ...

ಸ್ಪರ್ಧಿಗಳ ಸಂಖ್ಯೆ 11
ಈ ಬಾರಿಯ ಸ್ಪರ್ಧೆಯಲ್ಲಿ ಐವತ್ತು ದಿನಗಳನ್ನು ದಾಟುವಾಗ ಸ್ಪರ್ಧಿಗಳ ಸಂಖ್ಯೆ ಹನ್ನೊಂದು ತಲುಪಿದೆ. ಈ ಸೀಸನ್ ಆರಂಭದಿಂದಲೇ ತಾರೆಯರ ಕೊರತೆಯಿಂದ ಬಳಲುತ್ತಿರುವ ಬಿಗ್ ಬಾಸ್ ನಲ್ಲಿ ಈಗಲೂ ಹೆಸರಾಂತ ಕಲಾವಿದರು ಯಾರೂ ಇಲ್ಲ. ಈ ಸಂದರ್ಭದಲ್ಲಿ ಈ ವಾರ ಹೊಸದಾಗಿ ಎಂಟ್ರಿ ನೀಡುತ್ತಿದ್ದಾರೆ ಯುವ ನಟಿ ಮೇಘಶ್ರೀ.

ಮೆಲ್ಲ ಮೆಲ್ಲನೆ ಬಂದ ಮೇಘಶ್ರೀ..!
ಮೂಲತಃ ತೀರ್ಥಹಳ್ಳಿಯ ಹುಡುಗಿಯಾದರೂ ಮೇಘಶ್ರೀ ಚಿತ್ರರಂಗ ಪ್ರವೇಶಿಸಿದ್ದು ತೆಲುಗು ಚಿತ್ರರಂಗದ ಮೂಲಕ. 'ಪಂಚಮುಖಿ', 'ಖಾಕಿ', 'ಓ ಮೈ ಗಾಡ್', 'ಅನಗನಗ ಒಕ ಚಿತ್ರಮು' ಸಿನಿಮಾಗಳಲ್ಲಿ ನಟಿಸಿದರು.

ಸ್ಯಾಂಡಲ್ ವುಡ್ ನಲ್ಲಿ ಮೇಘಶ್ರೀ
ಕನ್ನಡದಲ್ಲಿ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ 'ಪಂಡಿತ್ ಭಾಗ್ಯ ವಿಧಾತ'. ಆದರೆ ಸುದ್ದಿಯಾಗಿದ್ದು ಮಾತ್ರ ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಾರ್ಚ್ 22' ಎನ್ನುವ ಚಿತ್ರ. ಈಗಾಗಲೇ ಸಂಚಾರಿ ವಿಜಯ್ ನಾಯಕರಾದಂಥ 'ಕೃಷ್ಣ ತುಳಸಿ' ಎಂಬ ಚಿತ್ರದಲ್ಲಿ ಅಂಧೆಯ ಪಾತ್ರದಿಂದ ಮನಸೆಳೆದ ಮೇಘ ಇದೀಗ ವಿಜಯ ಸೂರ್ಯ ಜೊತೆಗೆ ನಾಯಕಿಯಾಗಿ ನಟಿಸಿರುವ 'ಕದ್ದುಮುಚ್ಚಿ' ಹಾಗೂ ಚಿರಂಜೀವಿ ಸರ್ಜ ಜೊತೆಗಿನ 'ಮಾರ್ತಾಂಡ' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಮಗಳಾಗಿ 'ದಶರಥ' ಸಿನಿಮಾದಲ್ಲಿ ನಟಿಸಿರುವ ಮೇಘಶ್ರೀ ಪ್ರಸ್ತುತ ದ್ವಿಭಾಷಾ ಚಿತ್ರವಾಗಿ ಮೂಡಿ ಬರುತ್ತಿರುವ 'ಅಮೃತವರ್ಷಿಣಿ'ಯ ಚಿತ್ರೀಕರಣದಲ್ಲಿದ್ದರು.

ಮೇಘಶ್ರೀ ಮಾತೆಯ ಮಾತು
ಮಗಳು ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾಳೆ ಎಂಬ ಅರಿವಾದೊಡನೆ ಅಮ್ಮ ಪ್ರತಿಮಾ ಪೂಜಾರಿ ರಿಯಾಲಿಟಿ ಶೋ ಎಪಿಸೋಡ್ ಗಳನ್ನೆಲ್ಲ ತಪ್ಪದೆ ನೋಡಲು ಶುರು ಮಾಡಿದ್ದಾರೆ. ಅವರ ಪ್ರಕಾರ "ಸ್ವಭಾವತಃ ಸ್ಪರ್ಧಾ ಮನೋಭಾವ ಇರುವ ಮಗಳು ಗೇಮ್ ವಿಚಾರ ಬಂದರೆ ಗೆಲುವಿಗೆ ಪ್ರಯತ್ನ ಮಾಡೋದು ಖಚಿತ. ಯಾಕೆಂದರೆ ಈ ಕಡೆ ಕರಾಟೆ, ಆ ಕಡೆ ಭರತನಾಟ್ಯ ಎಂದು ಎಲ್ಲ ವಿಭಾಗಗಳಲ್ಲಿ ಪ್ರತಿಭೆ ತೋರಿಸಿರುವವಳು. ಸ್ಪರ್ಧೆಗೆ ಇಳಿದು ಗೆಲುವಿನ ಸನಿಹ ಇದ್ದು, ತಾನೇ ಸರಿ ಎಂದಾದರೆ ವಾದ ಮಾಡೋದರಲ್ಲಿ ಕೂಡ ನಿಸ್ಸೀಮಳು. ಆದರೆ ಅದೇ ವೇಳೆ ತುಂಬ ಸೂಕ್ಷ್ಮ ಸ್ವಭಾವ ಇರುವುದರಿಂದ ಬೇಗ ಬೇಸರ ಮಾಡಿಕೊಳ್ಳುತ್ತಾಳೆ. ಅದರಲ್ಲಿ ಕೂಡ ಇದುವರೆಗೆ ಒಮ್ಮೆಯೂ ನಮ್ಮಿಂದ ಬೇರೆ ಇದ್ದುಕೊಂಡು ಎರಡು ದಿನ ಕೂಡ ಕಳೆದವಳಲ್ಲ. ಜೊತೆಗೆ ಅಡುಗೆ ಕೆಲಸ ಗೊತ್ತಿಲ್ಲ ಎನ್ನುವುದು ಆಕೆಗೆ ನೆಗೆಟಿವ್ ಆಗುವ ಸಾಧ್ಯತೆ ಇದೆ. ಮಾತ್ರವಲ್ಲ, ಅಲ್ಲಿರುವವರು ಐವತ್ತು ದಿನಗಳಿಂದ ಒಂದೇ ಕುಟುಂಬದ ಹಾಗೆ ಇರುವವರು. ಹಾಗಾಗಿ ಗೆಲ್ಲುವುದಕ್ಕಿಂತಲೂ ಅವರ ಜೊತೆಗೆ ಹೊಂದಿಕೊಳ್ಳಲು ಸಾಧ್ಯವಾದರೆ ಅದೇ ಖುಷಿ" ಎಂದು ಅವರು ಫಿಲ್ಮಿಬೀಟ್ ಜೊತೆಗೆ ಹೇಳಿದ್ದಾರೆ.

ಮೇಘಶ್ರೀಗೆ ಕಿರುತೆರೆ ಹೊಸದೇನಲ್ಲ
ಕನ್ನಡ, ತೆಲುಗು ಮಾತ್ರವಲ್ಲ ತಮಿಳಲ್ಲಿ ಕೂಡ 'ಕೋನಲ ಇರಂದಾಲುಂ ಎನ್ನೋಡದ್' ಎಂಬ ಚಿತ್ರದಲ್ಲಿ ನಟಿಸಿರುವ ಆಕೆಗೆ ಕನ್ನಡದ ಕಿರುತೆರೆ ಹೊಸದೇನಲ್ಲ. ಕಲರ್ಸ್ ಸೂಪರ್ ನಲ್ಲೇ ಪ್ರಸಾರವಾಗಿದ್ದ 'ನಾಗ ಕನ್ನಿಕೆ' ಧಾರಾವಾಹಿಯಲ್ಲಿ ಶೇಷ ಎಂಬ ನಾಗವಾಗಿ ನಟಿಸಿ ವಿಶೇಷ ಗಮನ ಸೆಳೆದಿದ್ದನ್ನು ನೆನಪಿಸಿಕೊಳ್ಳಬಹುದು.


Click it and Unblock the Notifications











