ಕನ್ನಡದ ಈ ನಟಿ ಇದೀಗ ತೆಲುಗು ಕಿರುತೆರೆಯಲ್ಲಿ ಬ್ಯುಸಿ; ಯಾರಿವರು?
ಪಲ್ಲವಿ ಗೌಡ, ಕನ್ನಡ ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡು, ಇದೀಗ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ. ಪಲ್ಲವಿ ಗೌಡ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಬೆಡಗಿ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಿಂದು ನೂರೆಳ್ಳ ಸಾವಸಂ' ಧಾರಾವಾಹಿಯಲ್ಲಿ ಅರುಂಧತಿಯಾಗಿ ಅಭಿನಯಿಸುತ್ತಿರುವ ಪಲ್ಲವಿ ಗೌಡ ಮುದ್ದಾದ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.
ಅಂದಹಾಗೇ, ಇತ್ತೀಚೆಗೆ ನಡೆದ ಜೀ ಕುಟುಂಬಂ ಅವಾರ್ಡ್ಸ್‌ನಲ್ಲಿ 'ಉತ್ತಮ ತಲ್ಲಿ' ಪ್ರಶಸ್ತಿ ಪಡೆದುಕೊಂಡಿದ್ದಾರೆ ಪಲ್ಲವಿ ಗೌಡ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ನಟಿಸಿದ್ದ, ಈಕೆ ಕನ್ನಡ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ನಂತರ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ, ಸೇವಂತಿ ಪಾತ್ರದಿಂದ ಹೊರಬಂದಿದ್ದರು.

ಬಹುಶಃ ಪಲ್ಲವಿ ಗೌಡ ಅವರು ಕೊನೆಗೆ ನಟಿಸಿದ ಕನ್ನಡ ಧಾರಾವಾಹಿ 'ಸೇವಂತಿ' ಎಂದು ಹೇಳಿದರೆ ತಪ್ಪಾಗಲಾರದು. 'ಸೇವಂತಿ' ಧಾರಾವಾಹಿಯ ಸೇವಂತಿ ಪಾತ್ರದಿಂದ ಹೊರಬಂದ ನಂತರ ಪರಭಾಷೆಯ ಕಿರುತೆರೆಯತ್ತ ಮುಖ ಮಾಡಿದ ಪಲ್ಲವಿ ಗೌಡ ಮುಂದೆ ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದೇ ಹೆಚ್ಚು.
ಹೌದು, ತೆಲುಗಿನ 'ಚದುರಂಗಂ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪಲ್ಲವಿ ಗೌಡ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂರ್ಯವಂಶ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. 'ಸೂರ್ಯವಂಶ' ಧಾರಾವಾಹಿಯಲ್ಲಿ ಪಲ್ಲವಿ ಗೌಡ ಅವರು ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವಿಷಯವೂ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿತ್ತು. ಆದರೆ, ಧಾರಾವಾಹಿ ಶುರುವಾಗುವ ಸಮಯದಲ್ಲಿ ನಾಯಕಿಯ ಪಾತ್ರದಲ್ಲಿ ಬದಲಾವಣೆಯಾಗಿತ್ತು. ಪಲ್ಲವಿ ಗೌಡ ಅವರ ಬದಲಿಗೆ ಅಶ್ವಿನಿ ಅವರು ನಾಯಕಿಯಾಗಿ ಕಾಣಿಸಿಕೊಂಡರು.
ಸದ್ಯ 'ನಿಂದು ನೂರೆಳ್ಳ ಸಾವಸಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಪಲ್ಲವಿ ಗೌಡ ಅವರ ಕಿರುತೆರೆ ಪಯಣ ಶುರುವಾಗಿದ್ದು 'ಗಾಳಿಪಟ' ಧಾರಾವಾಹಿಯ ಮೂಲಕ. ಆಗಿನ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಗಾಳಿಪಟ' ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ಈಕೆ ಮುಂದೆ 'ಮನೆಯೊಂದು ಮೂರು ಬಾಗಿಲು', 'ಪರಿಣಯ', 'ಸೇವಂತಿ', 'ಚಂದ್ರ ಚಕೋರಿ' ಧಾರಾವಾಹಿಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದರು.
ಮುದ್ದು ಮುಖದ ಬೆಡಗಿ ಪಲ್ಲವಿ ಗೌಡ ಬಣ್ಣದ ಲೋಕದಲ್ಲಿ ಕೇವಲ ನಟಿಯಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೇ ಖಳನಾಯಕನಾಗಿಯೂ ಮೋಡಿ ಮಾಡಿದ ಬೆಡಗಿ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿ ಹಕ್ಕಿ' ಧಾರಾವಾಹಿಯಲ್ಲಿ ನಾಯಕನ ಅತ್ತಿಗೆಯಾಗಿ ಬಣ್ಣ ಹಚ್ಚಿದ ಈಕೆ ಮೊದಲ ಬಾರಿಗೆ ವಿಲನ್ ಆಗಿ ತೆರೆಯ ಮೇಲೆ ಅಬ್ಬರಿಸಿದರು. ಇದೀಗ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಪಲ್ಲವಿ ಗೌಡ ಮುಂದೆ ಕನ್ನಡ ಕಿರುತೆರೆಗೆ ಬರುತ್ತಾರಾ ಎಂದು ನೋಡಬೇಕಾಗಿದೆ.


Click it and Unblock the Notifications











