"ತಾಯ್ತನದ ಅನುಭವದ ಖುಷಿಯನ್ನು ವಿವರಿಸುವುದಕ್ಕೆ ಅಸಾಧ್ಯ"; 'ರಾಧಾ ಕಲ್ಯಾಣ' ನಟಿ ರಾಧಿಕಾ ರಾವ್
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ'. ಆ ಧಾರಾವಾಹಿಯಲ್ಲಿ ಮಂಗ್ಳೂರು ಹುಡುಗಿಯಾಗಿ ನಟಿಸಿ ಜನ ಮನ ಗೆದ್ದ ನಟಿ ರಾಧಿಕಾ ರಾವ್. ಮೂಲತಃ ಕರಾವಳಿ ಕುವರಿ ಆಗಿದ್ದ ರಾಧಿಕಾ ರಾವ್ ಅವರು ಕೊನೆಯದಾಗಿ ನಟಿಸಿದ್ದು ರಾಧಾಳಾಗಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ಈ ನಟಿ ನಟಿಸಿದ್ದರು.
ತದ ನಂತರ ಮದುವೆ, ಆನಂತರ ಮಗ ಎಂದು ಕಿರುತೆರೆಯಿಂದ ರಾಧಿಕಾ ರಾವ್ ಸದ್ಯ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಮೊದಲ ಬಾರಿಗೆ ಮಗನ ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ರಾವ್ ಮಗನ ಹೆಸರನ್ನು ಕೂಡಾ ಅನೌನ್ಸ್ ಮಾಡಿದ್ದಾರೆ. ಜೊತೆಗೆ "ಚಿಕ್ಕ ವಿಷಯಗಳು ನಿಮ್ಮ ಹೃದಯದಲ್ಲಿ ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳುತ್ತವೆ. ನನ್ನ ಮಗು ನನ್ನ ಪಾಲಿಗೆ ಅತ್ಯಮೂಲ್ಯ. ಅವನೇ ನನ್ನ ಸಂಪತ್ತು, ನನ್ನ ಸಂತೋಷ, ನನ್ನ ಪ್ರಪಂಚ" ಎಂದು ಬರೆದುಕೊಂಡಿದ್ದಾರೆ.

ರಾಧಿಕಾ ರಾವ್ ಅವರ ಮಗ ಅಗಸ್ತ್ಯನ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಮುದ್ದು ಮಗನನ್ನು ಅಷ್ಟೇ ಮುದ್ದಾಗಿ ಸೆರೆ ಹಿಡಿದ ಸ್ನೇಹಾ ಜೈ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದರ ಜೊತೆಗೆ ತಾಯ್ತನದ ಸುಂದರ ಅನುಭವಗಳನ್ನು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ.
"ತಾಯ್ತನ ಎನ್ನುವುದು ಅಗಾಧವಾದುದು. ಈ ಖುಷಿಯನ್ನು ವಿವರಿಸುವುದಕ್ಕೂ ಅಸಾಧ್ಯ. ಒಂದು ಮುಗ್ಧ ಮಗುವನ್ನು ನಾವು ಯಾವುದೇ ನಿರೀಕ್ಷೆ ಇಲ್ಲದೇ ಪ್ರೀತಿ ಮಾಡುತ್ತೇವೆ. ಅದು ಸೆಲ್ಫ್ ಲೆಸ್ ಲವ್, ಅನ್ ಕಂಡಿಶನಲ್ ಲವ್. ನಾನು ತಾಯಿಯಾಗಿದ್ದೇನೆ ಎನ್ನುವುದೇ ನನಗೆ ಖುಷಿ. ನನ್ನ ಲೈಫ್ ಈಗ ಕಂಪ್ಲೀಟ್ ಆಯಿತು ಎಂದೆನಿಸುತ್ತದೆ" ಎಂದು ತಾಯ್ತನದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ರಾಧಿಕಾ ರಾವ್.

"ತಾಯಿ ಅನ್ನುವ ಶಬ್ಧವೇ ದೊಡ್ಡ ಜವಾಬ್ದಾರಿ. ಒಂದು ಸಲ ಈ ಜವಾಬ್ದಾರಿ ತೆಗೆದುಕೊಂಡ ಮೇಲೆ ಅದರಿಂದ ಹೊರಬರುವುದು ಸಾಧ್ಯವಿಲ್ಲ. ಆರಂಭದ ದಿನಗಳಲ್ಲಿ ಎಲ್ಲವೂ ಕಷ್ಟ ಅನ್ನಿಸ್ತಿತ್ತು. ಆದರೆ ಮಗನ ಮುಖ ನೋಡಿದ ಕೂಡಲೇ ಎಲ್ಲ ಕಷ್ಟಗಳು ಮಾಯವಾಗುತ್ತಿತ್ತು. ನಾನು ತಾಯಿ ಆದ ಮೇಲೆ ನನ್ನ ತಾಯಿ ತುಂಬಾನೇ ಸಹಾಯ ಮಾಡಿದ್ರು. ಅವರಿದ್ದ ಕಾರಣ ಕಷ್ಟ ಎಂದೆನಿಸಲಿಲ್ಲ. ಸದ್ಯಕ್ಕೆ ತಾಯ್ತನವನ್ನು ಇಷ್ಟಪಟ್ಟು ಹಾಗೂ ಖುಷಿಯಿಂದ ಅನುಭವಿಸುತ್ತಿದ್ದೇನೆ" ಎಂದು ರಾಧಿಕಾ ರಾವ್ ಅವರು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ.
"ಇನ್ನು ಮುಖ್ಯವಾಗಿ ನನ್ನ ತಾಯ್ತನದಲ್ಲಿ ನನ್ನ ಅಮ್ಮನ ಪಾತ್ರವೇ ಮುಖ್ಯ ಎಂದು ಹೇಳಬಹುದು. ನನ್ನ ಅಮ್ಮ ಇದ್ದ ಕಾರಣದಿಂದಲೇ ಈ ಜರ್ನಿ ತುಂಬಾ ಸುಲಭವಾಗಿ ಸಾಗುತ್ತಿದೆ. ಜೊತೆಗೆ ಖುಷಿಯೂ ಇದೆ. ನನ್ನ ಅಮ್ಮ ಇಲ್ಲದೇ ಇದ್ದಿದ್ರೆ ಈ ಒಂದು ಜರ್ನಿ ಕಂಪ್ಲೀಟ್ ಆಗ್ತಿರ್ಲಿಲ್ಲ. ಅಮ್ಮನಿಗೆ ನಾನು ಅದೆಷ್ಟು ಥ್ಯಾಂಕ್ಸ್ ಹೇಳಿದರು ಕಡಿಮೆಯೇ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಅಮ್ಮನನ್ನು ನೆನಪಿಸಿಕೊಂಡರು ರಾಧಿಕಾ ರಾವ್.
"ಅಗಸ್ತ್ಯ ನಮ್ಮ ಜೀವನದಲ್ಲಿ ಬಂದ ಮೇಲೆ ನನಗೆ ಮತ್ತು ಗಂಡ ಆಕರ್ಷ್ ಅವರಿಗೆ ತುಂಬಾನೇ ಒಳ್ಳೆಯದಾಗಿದೆ. ಅವನ ಆಗಮನದಿಂದ ನಾವು ಇಬ್ರೂ ತುಂಬಾ ಖುಷಿ ಖುಷಿಯಾಗಿದ್ದೇವೆ. ಇನ್ನು ನನ್ನ ಗಂಡ ಆಕರ್ಷ್ ಕೂಡಾ ನನಗೆ ತುಂಬಾ ಸಪೋರ್ಟ್ ಮಾಡ್ತಾರೆ. ಜೊತೆಗೆ ನನ್ನ ಭಾವನೆಗಳನ್ನು ಕೂಡಾ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅವರಿಗೂ ಕೂಡಾ ನಾನು ಎಷ್ಟು ಥ್ಯಾಂಕ್ಸ್ ಹೇಳಿದರು ಕಡಿಮೆಯೇ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ರಾಧಿಕಾ ರಾವ್ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
"ಇನ್ನು ಈಗಾಗಲೇ ನನಗೆ ಬಣ್ಣದ ಲೋಕದಿಂದ ಅವಕಾಶಗಳು ಬರುತ್ತಿದೆ. ಮಗನಿಗೆ ಒಂದೂವರೆ ವರ್ಷ ಆಗುವ ತನಕ ಯಾವುದೇ ಪ್ರಾಜೆಕ್ಟ್ ಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ನಿಶ್ವಯಿಸಿದ್ದೇನೆ. ಆಮೇಲೆ ಖಂಡಿತವಾಗಿಯೂ ನಟನೆಗೆ ಮರಳುತ್ತೇನೆ. ಕಂ ಬ್ಯಾಕ್‌ಗೆ ಬೇಕಾಗಿರುವಂತಹ ಎಲ್ಲಾ ರೀತಿಯ ತಯಾರಿಗಳನ್ನು ಹೊಸ ವರ್ಷದಿಂದ ಮಾಡುತ್ತೇನೆ" ಎಂದು ಹೇಳಿಕೊಂಡಿದ್ದಾರೆ ರಾಧಿಕಾ ರಾವ್.


Click it and Unblock the Notifications











