50 ಪೈಸೆ ಕೊಟ್ಟು ಸೈಕಲ್ ತುಳಿದಿದ್ದು, ಮರ ಹತ್ತಿದ್ದುಈ ನಟಿಯ ಸವಿ ಸವಿ ನೆನಪು; ಯಾರೆಂದು ಗುರುತಿಸ ಬಲ್ಲಿರೇ?
ಇಂದು ಮಕ್ಕಳ ದಿನಾಚರಣೆ. ಚಾಚಾ ನೆಹರೂ ಹುಟ್ಟಿದ ದಿನ. ಮಕ್ಕಳಿಗೆಲ್ಲಾ ಸಂಭ್ರಮ. ಬಾಲ್ಯ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಸಣ್ಣ ಮಕ್ಕಳು ತಮ್ಮ ಬಾಲ್ಯವನ್ನು ಎಂಜಾಯ್ ಮಾಡುತ್ತಿದ್ದರೆ ದೊಡ್ಡವರು ತಮ್ಮ ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿಕೊಂಡು ಸಂತಸಪಡುತ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾ ಯುಗವಾಗಿರುವ ಕಾರಣ ತಮ್ಮ ಬಾಲ್ಯದ ಫೋಟೋಗಳನ್ನು ಅದರಲ್ಲಿ ಶೇರ್ ಮಾಡಿ, ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
ಕಿರುತೆರೆ ನಟಿ ರಜಿನಿ ಅವರು ಕೂಡಾ ಇನ್‌ಸ್ಟಾಗ್ರಾಂನಲ್ಲಿ ಒಂದಷ್ಟು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದು "ಮಕ್ಕಳ ದಿನಾಚರಣೆಯ ಶುಭಾಶಯಗಳು. ಹಾಗೆ ಒಂದು ಸವಿನೆನಪು" ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ನಟಿ ರಜಿನಿ ತಮ್ಮ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

"ಒಂದೇ ವಾಕ್ಯದಲ್ಲಿ ಬಾಲ್ಯದ ಬಗ್ಗೆ ಹೇಳಬೇಕು ಎಂದರೆ ನನ್ನ ಬಾಲ್ಯ ನಿಜವಾಗಿಯೂ ಸುಂದರವಾಗಿತ್ತು. ನಾನು ಹತ್ತು ವರ್ಷದ ಹುಡುಗಿಯಾಗಿದ್ದಾಗಲೇ ಡ್ಯಾನ್ಸ್ ಮಾಡುವುದಕ್ಕೆ ಶುರು ಮಾಡಿದ್ದೆ. ಅಂದ ಹಾಗೇ ನಾನು ಡ್ಯಾನ್ಸ್ ಅನ್ನು ಯಾವುದೇ ಗುರುಗಳಿಂದ ಕಲಿತದ್ದಲ್ಲ. ಬದಲಿಗೆ ಯಾವುದೇ ಹಾಡು ಕೇಳಿದ ಕೂಡಲೇ ನಾನು ಡ್ಯಾನ್ಸ್ ಮಾಡಿಬಿಡುತ್ತಿದ್ದೆ. ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ ಯಾವುದೇ ಕಾರ್ಯಕ್ರಮಗಳಿರಲಿ, ನನ್ನ ಅಜ್ಜಿ ಶಾಂತಮ್ಮ ಅವರು ಅಲ್ಲಿ ನನ್ನ ಹೆಸರು ಬರೆಸುತ್ತಿದ್ದರು. ನಾನು ಅಲ್ಲಿ ಹೋಗಿ ಡ್ಯಾನ್ಸ್ ಮಾಡಿ ಪ್ರಥಮ ಬಹುಮಾನ ತೆಗೊಂಡು ಬರ್ತಿದ್ದೆ" ಎಂದು ಸಂದರ್ಶನದ ವೇಳೆ ರಜಿನಿ ಹೇಳಿಕೊಂಡಿದ್ದಾರೆ.
"ಅಂದ ಹಾಗೇ ನಾನು ಮೊದಲಿನಿಂದಲೂ ಮಾತಿನ ಮಲ್ಲಿ ಎಂದರೆ ತಪ್ಪಾಗಲಾರದು. ಎಲ್ಲೇ ಹೋದ್ರೂ ನಾನು ಪಟಪಟನೆ ಮಾತಾಡ್ತಿದ್ದೆ. ನಾನು ಮಾತಾಡೋದಕ್ಕೆ ಶುರು ಮಾಡಿದರೆ, ಮತ್ತೆ ಅಷ್ಟು ಬೇಗ ನಿಲ್ಲಿಸ್ತಿರಲಿಲ್ಲ ಅಂತ ನನ್ನ ಅಮ್ಮ ಯಾವಾಗಲೂ ಹೇಳ್ತಾ ಇರ್ತಾರೆ. ಇನ್ನು ಇಷ್ಟೇ ಅಲ್ಲದೆ ನಾನು ನನ್ನ ಬಾಲ್ಯವನ್ನು ತುಂಬಾನೇ ಎಂಜಾಯ್ ಮಾಡಿದ್ದೇನೆ" ಎಂದು ನಟಿ ರಜಿನಿ ಹೇಳುತ್ತಾರೆ.
"ಸಂಡೇ ಬಂದ್ರೆ ಸಾಕು, ನಮಗೆಲ್ಲಾ ಹಬ್ಬನೇ. ಗಲ್ಲಿ ಗೆಳೆಯರ ಜೊತೆಗೆ ಸೇರಿ ನೇರಳೆ ಹಣ್ಣು ತರುವುದಕ್ಕೆ ಅಂತ ನಾನು ಮರ ಹತ್ತುತ್ತಿದ್ದೆ. ಇನ್ನು ಸೈಕಲ್ ಅಂದ್ರೆ ನಂಗೆ ಆಗ ಬಹಳ ಇಷ್ಟ. ಆಗೆಲ್ಲಾ 50 ಪೈಸೆಗೆ ಅರ್ಧಗಂಟೆಗೆ ಬಾಡಿಗೆಗೆ ಸೈಕಲ್ ತುಳಿಯುವುದಕ್ಕೆ ಕೊಡ್ತಿದ್ರು. ಅರ್ಧಗಂಟೆ ನಂತ್ರನೂ ನಾವು ಸೈಕಲ್ ಕೊಡದೇ ತುಳಿಯುತ್ತಿದ್ದರೆ, ಸೈಕಲ್ ಶಾಪ್‌ನ ಚಾಚಾ ಸೈಕಲ್ ಕ್ಲೀನ್ ಮಾಡಿಸ್ತಿದ್ರು" ಎಂದು ತಮ್ಮ ಬಾಲ್ಯದ ಸುಮಧುರ ಕ್ಷಣಗಳನ್ನು ಫಿಲ್ಮಿಬೀಟ್ ಕನ್ನಡ ಜೊತೆಗೆ ಕಿರುತೆರೆ ನಟಿ ರಜಿನಿ ಹಂಚಿಕೊಂಡಿದ್ದಾರೆ.

"ಸತ್ಯ ಹೇಳ್ಬೇಕು ಅಂತಂದ್ರೆ ನಾನು ಈಗ ಬಾಲ್ಯನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಮಗೆ ಆಗ ಏನೂ ಗೊತ್ತಿರ್ಲಿಲ್ಲ. ಹಾಗಾಗಿ ಬಾಲ್ಯ ಹೇಗೆ ಪಾಸ್ ಆಯ್ತು ಅಂತಾನೇ ಗೊತ್ತಾಗ್ತಿಲ್ಲ. ಆದರೆ, ಇವಾಗ ಒಂದೊಂದು ದಿನವೂ ಕಳೆಯುವುದಕ್ಕೆ ತುಂಬಾನೇ ಒದ್ದಾಡುತ್ತೀವಿ. ಇನ್ನು ನಾವು ಸಣ್ಣ ಇದ್ದಾಗ ನಮಗೆ ಸಾಕಷ್ಟು ಚಟುವಟಿಕೆಗಳು ಇದ್ದವು.. ಟೈಮ್ ಎಷ್ಟೇ ಸಿಕ್ಕಿದ್ರೂ ಸಾಕಾಗ್ತಿರ್ಲಿಲ್ಲ. ಈಗಿನ ಮಕ್ಕಳಿಗೆ ಬರೀ ಮೊಬೈಲ್ ಬಿಟ್ರೆ ಬೇರೇನೂ ಗೊತ್ತಿಲ್ಲ. ಈಗಿನ ಕಾಲದ ಮಕ್ಕಳನ್ನು ನೋಡುವಾಗ ನಿಜವಾಗಿಯೂ ತುಂಬಾನೇ ಬೇಜಾರಾಗುತ್ತದೆ. ಒಟ್ಟಿನಲ್ಲಿ ನಾನು ನನ್ನ ಬಾಲ್ಯವನ್ನು ಎಂಜಾಯ್ ಮಾಡಿದ್ದೇನೆ ಎನ್ನುವುದೇ ತುಂಬಾ ಖುಷಿ" ಎಂದು ಫಿಲ್ಮಿಬೀಟ್ ಕನ್ನಡದ ಜೊತೆಗೆ ಕಿರುತೆರೆ ನಟಿ ರಜಿನಿ ಹೇಳಿಕೊಂಡಿದ್ದಾರೆ.


Click it and Unblock the Notifications











