ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಶ್ವೇತಾ ಶ್ರೀವಾತ್ಸವ್: ಸಿಂಪಲ್ ಬ್ಯೂಟಿ ಈಗ 'ಸೂಪರ್ ಮಾಮ್' ಜಡ್ಜ್
'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾದಲ್ಲಿ ನಾಯಕಿ ಖುಷಿಯಾಗಿ ಅಭಿನಯಿಸಿ ಸಿನಿಪ್ರಿಯರನ್ನು ರಂಜಿಸಿದ ಶ್ವೇತಾ ಶ್ರೀವಾತ್ಸವ್ ಕಿರುತೆರೆಗೆ ಕಾಲಿಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಶ್ವೇತಾ ಅವರು ಯಾವುದೇ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿಲ್ಲ. ಅದರ ಬದಲಿಗೆ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರ್ತಿಯಾಗಿ ಈ ಬೆಡಗಿ ಮೋಡಿ ಮಾಡಲಿದ್ದಾರೆ.
ಹೌದು, ಸಿರಿಕನ್ನಡದಲ್ಲಿ ಆರಂಭವಾಗಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಸೂಪರ್ ಮಾಮ್'ನ ತೀರ್ಪುಗಾರ್ತಿಯಾಗಿ ನಟಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದು, ವೀಕ್ಷಕರನ್ನು ಜಡ್ಜ್ ಆಗಿ ರಂಜಿಸಲಿದ್ದಾರೆ.

ಅಂದ ಹಾಗೇ ಸಿನಿಮಾ ನಟಿ ಶ್ವೇತಾ ಶ್ರೀವಾತ್ಸವ್ ಅವರಿಗೆ ಕಿರುತೆರೆಯ ನಂಟು ಇರುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ತನ್ನ ಆರನೇ ವಯಸ್ಸಿನಲ್ಲಿಯೇ ರಂಗಕಲಾವಿದ ಬಿ.ವಿ.ಕಾರಂತರ ವರ್ಕ್ ಶಾಪ್‌ನಲ್ಲಿ ಭಾಗವಹಿಸಿರುವ ಈಕೆ ಟಿ.ಎನ್. ಸೀತಾರಾಮ್ ನಿರ್ದೇಶನದ 'ಜ್ವಾಲಾಮುಖಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು.
'ಕಮಲಿ', 'ಲಕ್ಷ್ಮಿ ಕಟಾಕ್ಷ' ಟೆಲಿ ಫಿಲಂಗಳಲ್ಲಿ ಅಭಿನಯಿಸಿರುವ ಈಕೆ 'ಜ್ವಾಲಾಮುಖಿ'ಯ ನಂತರ 'ಮಳೆಬಿಲ್ಲು', 'ಮನ್ವಂತರ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಇದರ ಜೊತೆಗೆ ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ಧಾರಾವಾಹಿ 'ಸಿಲ್ಲಿ ಲಲ್ಲಿ'ಯಲ್ಲಿಯೂ ಶ್ವೇತಾ ಶ್ರೀವಾತ್ಸವ್ ನಟಿಸಿ ವೀಕ್ಷಕರ ಮನಗೆದ್ದಿದ್ದರು.
ತದ ನಂತರ 'ಮುಖಾ ಮುಖಿ' ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಶ್ವೇತಾ ಶ್ರೀವಾತ್ಸವ್ 'ಆ ದಿನಗಳು', 'ಸೈಬರ್ ಯುಗದೊಳ್ ನವಯುಗ ಮಧುರ ಪ್ರೇಮ ಕಾವ್ಯಂ', 'ಆತ್ಮಸಾಕ್ಷಿ', 'ಫೇರ್ ಆ್ಯಂಡ್ ಲವ್ಲಿ', 'ಕಿರಗೂರಿನ ಗಯ್ಯಾಳಿಗಳು' ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಮಗಳು ಹುಟ್ಟಿದ ಕಾರಣ ನಟನೆಯಿಂದ ಕೆಲವು ವರ್ಷ ಬ್ರೇಕ್ ಪಡೆದುಕೊಂಡಿದ್ದರು. 'ಹೋಪ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಶ್ವೇತಾ ಶ್ರೀವತ್ಸವ್ ಮತ್ತೆ ಕಂ ಬ್ಯಾಕ್ ಮಾಡಿದ್ದರು.

ನವರಸ ನಾಯಕ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ವೈಜಯಂತಿ ಪಾತ್ರದಲ್ಲಿ ಗಮನ ಸೆಳೆದಿದ್ದರು. ಆನಂತರ 'ಚಿಕ್ಕಿಯ ಮೂಗುತಿ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇದೇ ವೇಳೆ ಶ್ವೇತಾ ಶ್ರೀವಾತ್ಸವ್ ಇದೀಗ ಇದೇ ಮೊದಲ ಬಾರಿಗೆ ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ನಟಿಯಾಗಿ ಮಿಂಚಿದ ಆಕೆ ಇದೇ ಮೊದಲ ಬಾರಿಗೆ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದು, ಕಿರುತೆರೆ ವೀಕ್ಷಕರಿಗಂತೂ ಮತ್ತಷ್ಟು ಖುಷಿ ತಂದಿದೆ.


Click it and Unblock the Notifications











