ತೆಲುಗು ಕಿರುತೆರೆಗೆ ಕಾಲಿಟ್ಟ ತನ್ವಿ ಬಾಲರಾಜ್
ಹೊಸ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಕಾಲಿಡುತ್ತಿರುವ ನಟಿ ತನ್ವಿ ಬಾಲರಾಜ್. ಹೌದು ನಟಿ ತನ್ವಿ ಬಾಲರಾಜ್ 'ಅಂತರಪಟ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ನಟಿ, ನಿರ್ದೇಶಕಿ ಸ್ವಪ್ನ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದ 'ಅಂತರಪಟ' ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಇದರಲ್ಲಿ ನಾಯಕ ನಟಿಯಾಗಿ ಪ್ರಪ್ರಥಮ ಬಾರಿಗೆ ನಟಿ ತನ್ವಿ ಬಾಲರಾಜ್ ಕಾಣಿಸಿಕೊಂಡಿದ್ದರು. ನಾಯಕ ನಟನಾಗಿ ಚಂದನ್ ಗೌಡ ಅವರು ನಟಿಸಿದ್ದರು.
'ಅಂತರಪಟ' ಧಾರವಾಹಿಯಲ್ಲಿ ಆರಾಧನಾ ಎಂಬ ಸ್ವಾಭಿಮಾನಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ತಂಗಿ ಬಾಲರಾಜ್ ಬಹಳಷ್ಟು ಹೆಣ್ಣು ಮಕ್ಕಳ ಪಾಲಿಗೆ ಸ್ಪೂರ್ತಿಯಾಗಿದ್ದರು. ಮನೆಯಲ್ಲಿ ಸಿಗದ ಪ್ರೀತಿಯನ್ನು ಹುಡುಕುತ್ತಾ ಹೊರಟ ಆರಾಧನಾ ತನ್ನದೇ ಹೊಸ ಕಂಪೆನಿಯನ್ನು ಆರಂಭಿಸುವುದಲ್ಲದೆ ಸ್ವಾಭಿಮಾನಿಯಾಗಿ ಬದುಕುವ ಕಥೆ ಇದು.

ಈ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಬಹಳಷ್ಟು ಜನಮನ ಗೆದ್ದಿರುವ ನಟಿ ತನ್ವಿ ಬಾಲರಾಜ್ ಇದೀಗ ಹೊಸದೊಂದು ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೂ ಪರಿಚಯವಾಗುತ್ತಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಿರ್ದೇಶಕಿ ಸ್ವಪ್ನ ಕೃಷ್ಣ ತಮ್ಮ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡು ಜನ ಮೆಚ್ಚಿದ ಹೊಸ ಪರಿಚಯ ಎಂಬ ಅವಾರ್ಡ್ ಗೂ ಪಾತ್ರರಾಗಿದ್ದ ತನ್ವಿ ಬಾಲರಾಜ್ ಇದೀಗ ಹೊಸ ಧಾರಾವಾಹಿ ಮೂಲಕ ವೃತ್ತಿಜೀವನದ ಮತ್ತೊಂದು ಮೆಟ್ಟಿಲೇರುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ನಟಿ ತನ್ವಿ ಬಾಲರಾಜ್ ಮೊದಲು ಬ್ಯಾಕ್ ಸ್ಟೇಜ್ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಹಲವಾರು ರಿಯಾಲಿಟಿ ಶೋ ಗಳಲ್ಲಿ, ಅವಾರ್ಡ್ ಫಂಕ್ಷನ್ ಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ತಮ್ಮ ಜರ್ನಿ ಆರಂಭ ಮಾಡಿದ ತನ್ವಿ ಬಾಲರಾಜ್, ಇದೀಗ ಒಂದು ಧಾರಾವಾಹಿಯ ನಾಯಕ ನಟಿಯಾಗಿ ಯಶಸ್ವಿಯಾಗಿದ್ದಲ್ಲದೆ ಬೇರೆ ಭಾಷೆಯ ಹೊಸದೊಂದು ಧಾರಾವಾಹಿಯಲ್ಲಿಯೂ ನಾಯಕ ನಟಿಯಾಗಿ ಆಯ್ಕೆಯಾಗಿರುವುದು ವಿಶೇಷ. ಕನ್ನಡ ಭಾಷೆಯಲ್ಲಿದೇ ತೆಲುಗು ಭಾಷೆಯಲ್ಲಿ ನಟಿಸುವ ಮೂಲಕ ಬಹು ಭಾಷೆ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ ನಟಿ ತನ್ವಿ ಬಾಲರಾಜ್.
'ಎನ್ನಾಲೋ ವೆಚ್ಚಿನ ಹೃದಯಂ' ಎಂಬ ತೆಲುಗು ಧಾರಾವಾಹಿಯಲ್ಲಿ ನಟಿಸುವ ತನ್ವಿ ಬಾಲರಾಜ್ ಬಡವರ ಮನೆಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನವರಿ 27ರಂದು ಆರಂಭವಾಗಲಿರುವ ಈ ಧಾರಾವಾಹಿ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಚಿಟ್ಟೆ ಎಂದರೆ ಹೆದರುವ ಚಿಕ್ಕ ಮಗುವಂತೆ ಮಾಡುವ ಗಂಡನನ್ನು ಮದುವೆಯಾಗಿ ಅವನೊಂದಿಗೆ ಸಂಸಾರ ಮಾಡುವುದಲ್ಲದೆ ಬರುವ ಕಷ್ಟಗಳನ್ನೆಲ್ಲ ಎದುರಿಸುವ ಗಟ್ಟಿ ಹೆಣ್ಣು ಮಗಳ ಪಾತ್ರ ಇದಾಗಿದ್ದು ಈಗಾಗಲೇ ತೆಲುಗು ಹಾಗು ಕನ್ನಡ ಕಿರುತೆರೆ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.
'ಅಂತರಪಟ' ಧಾರಾವಾಹಿಯಲ್ಲಿ ಆರಾಧನಾ ಎಂಬ ಪಾತ್ರದ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಸರಿಯಾದ ಪಾತ್ರದ ಮೂಲಕ ವಿಭಿನ್ನ ನಟನೆಯ ಮೂಲಕ ನಟನಾ ಕ್ಷೇತ್ರದಲ್ಲಿಮುಂದುವರಿದ ಎಲ್ಲಾ ಲಕ್ಷಣವನ್ನು ತೋರಿಸಿರುವ ನಟಿ ತನ್ವಿ ಬಾಲರಾಜ್ ಗೆ ಇದೀಗ ಅವಕಾಶಗಳು ಒದಗಿ ಬರುತ್ತಿರುವುದು ಖುಷಿಯ ವಿಚಾರ.
ಸೌಮ್ಯ ಸ್ವಭಾವದ, ಸದಾ ತಾಳ್ಮೆ ಇರುವ ಕಷ್ಟ ಸಹಿಷ್ಣು ಹೆಣ್ಣು ಮಗಳಾಗಿ ತನ್ವಿ ಬಾಲರಾಜ್ ಹೊಸ ಪಾತ್ರದಲ್ಲಿ ಮಿಂಚಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳ ಆಕ್ಟಿವ್ ಇರುವ ನಟಿ ತನ್ವಿ ಬಾಲರಾಜ್ ಅವರಿಗೆ 20,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.


Click it and Unblock the Notifications











