ಮಹಾಲಕ್ಷ್ಮೀ ಲೇಔಟ್ To ಜ್ಞಾನಭಾರತಿ ; ಲಕ್ಷಾಂತರ ರೂ. ಪಂಗನಾಮ ಹಾಕಿದ ಕನ್ನಡ ಕಿರುತೆರೆ ನಟಿ ವನಿತಾ ಅರೆಸ್ಟ್
ನಿಜ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ.
ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯ ಹೆಸರು ಹೇಳಿಕೊಂಡು ಹಣ ಪೀಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು.

ಹೌದು, ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹದ ಹಸ್ತ ಚಾಚಿ ನಂಬಿಸಿ ಆ ನಂತರ ಕತ್ತು ಕುಯ್ಯುವರ ಸಂತತಿ ಹೆಚ್ಚಾಗುತ್ತಿದೆ. ಇದೇ ಸಾಲಿನಲ್ಲಿ ವನಿತಾ ಎಂಬುವರು ಕೂಡ ಇದ್ದು ತಮ್ಮನ್ನು ತಾವು ಕಿರುತೆರೆ ನಟಿ ಎಂದು ಪರಿಚಯ ಮಾಡಿಕೊಂಡು ಹಲವರ ಹಣೆಗೆ ತುಪ್ಪ ಸವರಿದ್ದಾರೆ.
ವನಿತಾ ಅವರ ವಿರುದ್ಧ ದಾಖಲಾದ ದೂರಿನ ಪ್ರಕಾರ ಸೋಷಿಯಲ್ ಮೀಡಿಯಾ ಮೂಲಕ ವನಿತಾ ಶ್ರೀಮಂತರಿಗೆ ಗಾಳ ಹಾಕುತ್ತಿದ್ದರು. ತಮ್ಮನ್ನು ತಾವು ಕಿರುತೆರೆಯ ನಟಿ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ ವನಿತಾ ಅವರಿಗೆ ಆಕರ್ಷಿಸುವ ಕಲೆ ತುಂಬಾ ಚೆನ್ನಾಗಿಯೇ ಕರಗತವಾಗಿದೆ.
ಶ್ರೀಮಂತ ಕುಳಗಳ ಜೊತೆ ಸಲುಗೆ ಬೆಳೆಸಿಕೊಳ್ಳುತ್ತಿದ್ದ ವನಿತಾ, ಆರಂಭದಲ್ಲಿ ಬಿಟ್ಟು ಬಿಡದಂತೆ ಮಾತನಾಡುತ್ತಿದ್ದರು. ಒಮ್ಮೆ ನಂಬಿಕೆ ಗಳಿಸಿದ ನಂತರ ತಮ್ಮ ಅಸಲಿ ಆಟ ಶುರು ಮಾಡುತ್ತಿದ್ದ ವನಿತಾ ಕಣ್ಣೀರ ಕೋಡಿ ಹರಿಸಲು ಶುರು ಮಾಡುತ್ತಿದ್ದರು. ಬೆಲೆ ಬಾಳುವ ಚಿನ್ನದಾಭರಣ ಗಿರವಿ ಇಡಲಾಗಿದ್ದು, ಅದನ್ನು ಬಿಡಿಸಿಕೊಳ್ಳಲು ತುರ್ತು ಹಣದ ಅಗತ್ಯ ಇದೆ ಎಂದು ಭಾವನಾತ್ಮಕವಾದ ಸುಳ್ಳು ಕಥೆ ಹೆಣೆಯುತ್ತಿದ್ದರು.ಎರಡು ಮೂರು ದಿನದಲ್ಲಿ ಮರಳಿ ಕೊಡುವುದಾಗಿ ಭರವಸೆ ನೀಡುತ್ತಿದ್ದರು.
ಇನ್ನು ವನಿತಾ ಹೇಳಿ ಕೇಳಿ ನಟಿ. ಈ ಹಿನ್ನೆಲೆ ಇವರಾಡಿದ ಮಾತನ್ನು ಸುಲಭವಾಗಿ ನಂಬಿ ದುಡ್ಡು ಕೂಡ ಕೆಲವರು ನೀಡಿದ್ದಾರೆ. ಆ ಪೈಕಿ ಟೊಯೊಟಾ ಕಂಪನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಕೂಡ ಒಬ್ಬರಾಗಿದ್ದು, ವಂಚನೆಗೊಳಗಾದ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವಂಚನೆ ಪ್ರಕರಣ ಬಯಲಾಗಿದ್ದು ಆಗಲೇ.
ವಿಶೇಷ ಅಂದರೆ ಹಣವನ್ನು ವನಿತಾ ಬ್ಯಾಂಕ್ ಖಾತೆ ಮೂಲಕ ಪಡೆಯುತ್ತಿರಲಿಲ್ಲ. ಅದಕ್ಕೆ ಕಾರಣ ಸಾಕ್ಷಿ ಸಿಗುತ್ತೆ ಎನ್ನುವ ಭಯ. ಕೇವಲ ನಗದು ರೂಪದಲ್ಲಿ ಮಾತ್ರ ಹಣ ಪಡೆಯುತ್ತಿದ್ದ ವನಿತಾ ಬೆಂಗಳೂರಿನಲ್ಲಿ ಸಿಸಿಟಿವಿ ಇಲ್ಲದ ಜಾಗ ಹುಡುಕಿ ಅಲ್ಲಿಗೆ ಹಣ ನೀಡುವವರನ್ನು ಕರೆಸಿಕೊಂಡು ಹಣ ಪಡೆಯುತ್ತಿದ್ದರು. ಸಾರ್ವಜನಿಕರ ಓಡಾಟ ಕಡಿಮೆ ಇರುವ ರಸ್ತೆಯ ಮೂಲೆ ಅಥವಾ ಗಲ್ಲಿ ಆಯ್ಕೆ ಮಾಡಿಕೊಂಡು, ಈ ಬ್ಲೈಂಡ್ ಸ್ಪಾಟ್‌ಗಳಲ್ಲಿ ಹಣದ ವ್ಯವಹಾರ ಮಾಡಿದರೆ ಪೊಲೀಸರಿಗೆ ಯಾವುದೇ ಆಧಾರ ಸಿಗುವುದಿಲ್ಲ ಎನ್ನುವುದು ಇವರ ಪ್ಲಾನ್.
ಹೀಗೆ ಹಣ ಪಡೆಯುತ್ತಿದ್ದ ವನಿತಾ, ಒಮ್ಮೆ ಹಣ ಕೈಗೆ ಬಂದ ನಂತರ ಹಣ ನೀಡಿದವರ ಕೈಗೆ ಸಿಗುತ್ತಿರಲಿಲ್ಲ. ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಕರೆ ಸ್ವೀಕರಿಸುತ್ತಿಲ್ಲವೆಂದು ಮೆಸೇಜ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಕೂಡ ನೀಡುತ್ತಿರಲಿಲ್ಲ.
ಹೀಗಾಗಿ ತಾನು ಮೋಸ ಹೋದ ವಿಚಾರ ಅರಿತ ವ್ಯಕ್ತಿ ಆಗಲೇ ಹೇಳಿದಂತೆ ಸದ್ಯ ಬೆಂಗಳೂರಿನ ಮಹಾಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ವಿಶೇಷ ಅಂದರೆ ವನಿತಾ ಹೆಣೆದ ಈ ವಂಚನೆಯ ಜಾಲ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾದದ್ದು ಅಲ್ಲ ಎನ್ನುವ ವಿಚಾರ ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಸುತ್ತ ಮುತ್ತ ಪ್ರದೇಶದಲ್ಲಿ ಕಿಲಾಡಿತನದಿಂದ ವಂಚನೆಯ ಬಲೆಯನ್ನು ಈ ಹಿಂದೆ ವನಿತಾ ಬೀಸಿದ್ದು ಪೊಲೀಸ್ ಠಾಣೆಗಳಲ್ಲೂ ಈ ಹಿಂದೆ ದೂರುಗಳು ದಾಖಲಾಗಿದ್ದವು ಎಂಬ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಸದ್ಯ ಪೊಲೀಸರು ವನಿತಾ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಂಬಿ ಹಿಂದೆ ವನಿತಾನ ಕಳಿಸಿದ್ದಾರೆ. ವನಿತಾ ಅವರಿಂದ ಮೋಸ ಹೋದವರ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.


Click it and Unblock the Notifications