Vasuki Vaibhav Marriage: ವೈವಾಹಿಕ ಜೀವನಕ್ಕೆ ಕಾಲಿಟ್ಟ ವಾಸುಕಿ ವೈಭವ್: ವಧು ಯಾರು?
ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನ ಬಹುಮುಖ ಪ್ರತಿಭೆ ವಾಸುಕಿ ವೈಭವ್ ಮದುವೆ ಬಗ್ಗೆ ಸುದ್ದಿ ಹಬ್ಬಿತ್ತು. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶೀಘ್ರದಲ್ಲಿಯೇ ವಾಸುಕಿ ವೈಭವ್ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಹಬ್ಬಿದ್ದು, ಇಂದು (ನವೆಂಬರ್ 16) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
'ಟಗರು ಪಲ್ಯ' ಸಿನಿಮಾ ಪ್ರಚಾರದ ವೇಳೆ ಹಿರಿಯ ನಟಿ ತಾರಾ ವಾಸುಕಿ ವೈಭವ್ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲಿಂದ ವಾಸುಕಿ ವೈಭವ್ ಮದುವೆ ಆಗುತ್ತಿರುವ ಹುಡುಗಿ ಬಗ್ಗೆ ಚರ್ಚೆಯಾಗುತ್ತಿತ್ತು.

ವಾಸುಕಿ ವೈಭವ್ ತಮ್ಮ ಬಹುದಿನದ ಗೆಳತಿ ಬೃಂದಾ ವಿಕ್ರಮ್ ಅವರೊಂದಿಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಸಂಸ್ಕ್ರತಿ ಗೋಕುಲಂ ಕಲ್ಯಾಣ ಮಂಟಪದಲ್ಲಿ ವೈವಾಕಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗ್ಗೆ ಸುಮಾರು 11.30ಕ್ಕೆ ಬೃಂದಾ ವಿಕ್ರಮ್ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಕೇವಲ ಆತ್ಮೀಯರು ಹಾಗೂ ಆಪ್ತರಿಗೆ ಆಹ್ವಾನ ನೀಡಲಾಗಿತ್ತು.
ವಾಸುಕಿ ಮದುವೆಯಾದ ಹುಡುಗಿ ಯಾರು?
ವಾಸುಕಿ ವೈಭವ್ ಮದುವೆ ಆಗಿರುವ ಹುಡುಗಿ ಬಗ್ಗೆ ತಿಳಿದುಕೊಳ್ಳಲು ಅವರ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದರು. ಆದರೆ ಆ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ವಾಸುಕಿ ವೈಭವ್ ಅಂತೆಯೇ ಬೃಂದಾ ವಿಕ್ರಮ್ ಕೂಡ ರಂಗಭೂಮಿ ಕಲಾವಿದೆ. ಈಗಾಗಲೇ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಸ್ವತ: ವಾಸುಕಿಗೂ ಜೊತೆಯೂ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆಂದು ವರದಿಯಾಗಿದೆ.

ಹಲವು ವರ್ಷಗಳಿಂದ ಪ್ರೀತಿ
ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಈ ವಿಷಯವನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಕೆಲವೇ ತಿಂಗಳ ಹಿಂದೆ ವಾಸುಕಿ ವೈಭವ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಆ ವಿಷಯವನ್ನೂ ಬಹಿರಂಗಪಡಿಸಿರಲಿಲ್ಲ. ಇನ್ನು ತಮ್ಮ ಮದುವೆ ವಿಷಯವನ್ನು ಗುಟ್ಟಾಗಿಯೇ ಇಟ್ಟಿದ್ದರು. ಅದ್ಯಾಕೆ ಅನ್ನೋದು ತಿಳಿಯದೇ ಹೋದರೂ, ಇಂದು (ನವೆಂಬರ್ 16) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
"ಹೊಸ ಪಯಣ ಆರಂಭ ಆಗಿದೆ"
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗ ಪಡಿಸಿದ್ದಾರೆ. "ಹೊಸ ಪಯಣ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಇರಲಿ" ಎಂದು ಬರೆದುಕೊಂಡಿದ್ದಾರೆ. ಸಿಂಪಲ್ ಆಗಿ ಸಂಪ್ರದಾಯ ಬದ್ಧವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಬದುಕಿನ ಹೊಸ ಪಯಣ ಆರಂಭಿಸಿದ್ದಾರೆ.
ಚಿತ್ರರಂಗದಲ್ಲಿ ಬ್ಯುಸಿ
ವಾಸುಕಿ ವೈಭವ್ ಚಿತ್ರರಂಗದ ಬಹುಮುಖ ಪ್ರತಿಭೆ. ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವಾಸುಕಿ ವೈಭವ್ ನಟಿಸಿದ 'ಟಗರು ಪಲ್ಯ' ಸಿನಿಮಾ ರಿಲೀಸ್ ಆಗಿದೆ. 2016ರಲ್ಲಿ ರಿಲೀಸ್ ಆಗಿದ್ದ 'ಊರ್ವಿ' ಸಿನಿಮಾ ಮೂಲಕ ನಟನೆ ಆರಂಭಿಸಿದ್ದರು. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', 'ಹರಿಕಥೆ ಅಲ್ಲ ಗಿರಿಕಥೆ', 'ತತ್ಸಮ ತದ್ಭವʼ ಅಂತಹ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ.


Click it and Unblock the Notifications











