ತೆಲುಗು ಕಿರುತೆರೆಗೆ ಜಿಗಿದ ಕನ್ನಡದ ಅಮೂಲ್ ಬೇಬಿ ಸಾಗರ್: ಯಾವುದು ಆ ಸೀರಿಯಲ್?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ನಾಯನ ನಟ ಕಾರ್ತಿಕ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗ ಸಾಗರ್ ಬಿಳೀಗೌಡ.
ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸಾಗರ್ ಸತ್ಯ ಸೀರಿಯಲ್ ವೀಕ್ಷಕರ ಪಾಲಿನ ಪ್ರೀತಿಯ ಅಮೂಲ್ ಬೇಬಿ. ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ನೆಚ್ಚಿನ ಅಳಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸಾಗರ್ ಬಿಳೀಗೌಡ ಪ್ರೇಕ್ಷಕರು ನೀಡಿದ ಪ್ರೀತಿಗೆ ಫಿದಾ ಆಗಿದ್ದಾರೆ.

"ನಾನು ನಿಮ್ಮ ಪ್ರೀತಿಯ ಅಮೂಲ್ ಬೇಬಿ. ಈ ಸಲವೂ ನಿಮ್ಮ ಪ್ರೀತಿಯಿಂದ ನನಗೆ ನೆಚ್ಚಿನ ಅವಾರ್ಡ್ ದೊರಕಿದೆ. ಇದೇ ತರ ಸಪೋರ್ಟ್ ಮಾಡುತ್ತಿರಿ. ವೋಟ್ ಪಡೆದಿರುವುದಕ್ಕೆ ನನಗೂ ಖುಷಿಯಾಗುತ್ತಿದೆ. ನನ್ನ ನಿಜ ಜೀವನದಲ್ಲಿ ಇತ್ತೀಚೆಗಷ್ಟೇ ಮದುವೆಯಾಯಿತು. ಹಾಗಾಗಿ ನಾನು ಈ ಅವಾರ್ಡ್ ಅನ್ನು ನನ್ನ ಹೆಂಡತಿ, ಅತ್ತೆ, ಮಾವ ಜೊತೆಗೆ ಅಪ್ಪ ಅಮ್ಮನಿಗೆ ಅರ್ಪಿಸುತ್ತಿದ್ದೇನೆ" ಎಂದಿದ್ದಾರೆ.
"ಇದು ನನ್ನ ಟೀಂ 'ಸತ್ಯ' ಧಾರಾವಾಹಿಗೆ ನನ್ನ ಟ್ರಿಬ್ಯೂಟ್ ಹೌದು. ತುಂಬಾ ಧನ್ಯವಾದಗಳು" ಎಂದು ಹೇಳಿರುವ ಸಾಗರ್ ಮಗದೊಂದು ಸಿಹಿ ಸುದ್ದಿಯನ್ನು ಕೂಡಾ ನೀಡಿದ್ದಾರೆ. ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಸಾಗರ್ ಬಿಳೀಗೌಡ ಇದೀಗ ಪರಭಾಷೆಯ ಕಿರುತೆರೆಯಲ್ಲಿ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡಿದ್ದಾರೆ. ಹೌದು, ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ.
'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕ ಬಾಲು ಆಗಿ ಅಭಿನಯಿಸುತ್ತಿದ್ದ ರಾಹುಲ್ ರವಿ ಕಾರಣಾಂತರಗಳಿಂದ ಧಾರಾವಾಹಿಯ ಪಾತ್ರಕ್ಕೆ ವಿದಾಯ ಹೇಳಿದ್ದು, ಇದೀಗ ಅವರ ಜಾಗಕ್ಕೆ ಸಾಗರ್ ಅವರ ಎಂಟ್ರಿ ಆಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಾಯಕ ನಕುಲ್ ಸ್ನೇಹಿತ ನಂದು ಆಗಿ ಕಾಣಿಸಿಕೊಳ್ಳುವ ಮೂಲಕ ಸಾಗರ್ ಅವರ ನಟನಾ ಪಯಣ ಶುರುವಾಯಿತು.

ಮೊದಲ ಬಾರಿಗೆ ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಸಾಗರ್ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸಾರೆ' ಧಾರಾವಾಹಿಯಲ್ಲಿ ನಾಯಕನಾಗಿ ಭಡ್ತಿ ಪಡೆದರು. ಯುವರಾಜನ ಪಾತ್ರಕ್ಕೆ ಜೀವ ತುಂಬಿದ ಸಾಗರ್ ವೀಕ್ಷಕರ ಮನ ಸೆಳೆದರು. ತದ ನಂತರ ಕಾರಣಾಂತರಗಳಿಂದ ಯುವರಾಜ ಪಾತ್ರದಿಂದ ಹೊರಬಂದರು.
ಮುಂದೆ 'ಸತ್ಯ' ಧಾರಾವಾಹಿಯ ಅಮೂಲ್ ಬೇಬಿ ಆಲಿಯಾಸ್ ಕಾರ್ತಿಕ್ ಆಗಿ ಕಾಣಿಸಿಕೊಂಡು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಸಾಗರ್ ಬಿಳೀಗೌಡ ಅವರು ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದರು. ಪದವಿಯ ಬಳಿಕ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ನಟನಾಗಿ ಮಾಡಿದ್ದೇ ನಾಟಕದ ಮೇಲಿನ ಪ್ರೀತಿ. ಟಿ.ಎಸ್ ನಾಗಾಭರಣ ನಟನಾ ತರಬೇತಿ ಕೇಂದ್ರಕ್ಕೆ ಸೇರಿದ ಸಾಗರ್ ನಟನೆಯ ಆಗು ಹೋಗುಗಳನ್ನು ಅರಿತುಕೊಂಡರು. ಇದೀಗ ನಟನಾಗಿ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ ಸಾಗರ್ ಬಿಳೀಗೌಡ.


Click it and Unblock the Notifications











