ಧಾರಾವಾಹಿಗೆ ಬರುವ ಮುನ್ನ ಈ ನಟ-ನಟಿಯರು ಮಾಡುತ್ತಿದ್ದ ಕೆಲವೇನು ಗೊತ್ತಾ..?
ಈ ನಟನಾ ಲೋಕದಲ್ಲಿ ಒಂದು ರೀತಿಯ ಸೆಳೆತವಿದೆ. ಅದೆಷ್ಟೋ ಜನ ತಾವು ನಟಿಸಬೇಕು, ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ, ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಾರೆ. ಇನ್ನೂ ಕೆಲವರು ಒಳ್ಳೆಯ ಕೆಲಸವಿದ್ದರೂ ಅದನ್ನೆಲ್ಲಾ ಬದಿಗೊತ್ತಿ ಕಲಾವಿದರಾಗಲು ಹಾತೊರೆಯುತ್ತಾರೆ. ಅದೊಂದು ಕಾಲದಲ್ಲಿ ಕಲಾವಿದರ ಸಂಖ್ಯೆ ತೀರಾ ಕಡಿಮೆ ಇತ್ತು.
ಆಗ ಒಂದು ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟಿಸಿದವರೇ ಮತ್ತೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನಟನೆಯನ್ನು ವೃತ್ತಿಯನ್ನಾಗಿ ಆರಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಒಂದೇ ಒಂದು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಹಾಗಾಗಿಯೇ ಈಗ ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ನಟ ನಟಿಯರಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಹೊಸಬರಿಗೆ ಯಾವಾಗಲೂ ಅವಕಾಶಗಳು ತೆರೆದಿರುತ್ತವೆ. ಪ್ರತಿಯೊಂದು ಹೊಸ ಧಾರಾವಾಹಿ ಶುರುವಾದಾಗಳು ನಾಯಕಿ ಹಾಗೂ ನಾಯಕ ಪಾತ್ರಕ್ಕಾಗಿ ನಿರ್ದೇಶಕರು ಹೊಸ ಮುಖಗಳನ್ನೇ ಹುಡುಕುತ್ತಿರುತ್ತಾರೆ. ಇದಕ್ಕಾಗಿ ಆಡಿಷನ್ ಗಳನ್ನು ಕೂಡ ಧಾರಾವಾಹಿ ತಂಡ ನಡೆಸುತ್ತದೆ.

ನಟಿಸುವ ಮುನ್ನಾ ಏನು ಮಾಡುತ್ತಿದ್ದರು ಈ ನಟ-ನಟಿಯರು
ಕಳೆದ ಕೆಲ ವರ್ಷಗಳಿಂದ ಪ್ರತಿಯೊಂದು ಹೊಸ ಧಾರಾವಾಹಿಗೂ ಹೊಸ ಮುಖಗಳನ್ನೇ ಆರಿಸಲಾಗುತ್ತಿದೆ. ಪ್ರೇಕ್ಷಕರು ಕೂಡ ಒಂದು ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಟ-ನಟಿಯರನ್ನು ಮತ್ತೊಂದು ಪಾತ್ರದಲ್ಲಿ ನೋಡಲು ಬಯಸುವುದಿಲ್ಲ. ಹೀಗಾಗಿ ಕಿರುತೆರೆಯಲ್ಲಿ ಅತಿ ಹೆಚ್ಚು ನಟ-ನಟಿಯರು ಇದ್ದಾರೆ. ಹೊಸ ನಟ-ನಟಿಯರು ಕೂಡ ತಮ್ಮ ಮೊದಲ ನಟನೆಯ ಮೂಲಕವೇ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ತಮಗಿದ್ದ ಕೆಲಸ ಬಿಟ್ಟು ಬಂದ ನಟ-ನಟಿಯರು ಹಾಗೂ ಅಕಸ್ಮಾತ್ ಆಗಿ ಬಂದವರು ನಟನೆಗೆ ಬರುವ ಮುನ್ನ ಏನು ಮಾಡುತ್ತಿದ್ದರು ಎಂದು ತಿಳಿಯೋಣ ಬನ್ನಿ..

ಓದುತ್ತಲೇ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿರುವ ನಟಿಯರು
'ಗಟ್ಟಿಮೇಳ' ಧಾರಾವಾಹಿಯ ನಾಯಕಿ ಅಮೂಲ್ಯ ಅಲಿಯಾಸ್ ನಿಶಾ ಮಿಲನ ಬಿ.ಕಾಂ ಓದುತ್ತಿದ್ದಾರೆ. ಬಿ.ಕಾಂ ಓದಿಕೊಂಡೆ ನಿಶಾ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಸಂಜನಾ ಬುರ್ಲಿ ಕೂಡ ಓದಿಕೊಂಡಿದ್ದರು. ಈಗಲೂ ಇಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ ಓದುತ್ತಿದ್ದಾರೆ. ಇನ್ನು ಜೊತೆ ಜೊತೆಯಲಿ ಧಾರಾವಾಹಿಯ 'ಮೇಘಾ ಶೆಟ್ಟಿ' ಅವರು ನಟಿಸುವ ಮೊದಲು ಓದುತ್ತಿದ್ದರು. ಓದುವಾಗಲೇ ನಟಿಸುವ ಅವಕಾಶ ಸಿಕ್ಕಿತ್ತು. ಈಗ ತಮ್ಮ ಓದನ್ನು ಮುಗಿಸಿ ಸಂಪೂರ್ಣವಾಗಿ ನಟನೆಯನ್ನೇ ವೃತ್ತಿಯಾಗಿ ಆರಿಸಿಕೊಂಡಿದ್ದಾರೆ.

ಇದ್ದ ಕೆಲಸ ಬಿಟ್ಟು ಅಭಿನಯ ಆರಿಸಿಕೊಂಡ ನಟ-ನಟಿಯರು
ನಟಿ ಕೌಸ್ತುಭ ಮಣಿ 'ನನ್ನರಸಿ' ಧಾರಾವಾಹಿಯಲ್ಲಿ ನಟಿಸುವ ಮೊದಲು ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರು. 'ಮಂಗಳಗೌರಿ' ಮದುವೆ ಧಾರಾವಾಹಿಯ ಕಾವ್ಯಶ್ರೀ ಈ ಸೀರಿಯಲ್ ಗೆ ಬರುವ ಮುನ್ನ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ್ದರು. 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಕಂಪ್ಯೂಟರ್ ಸೈನ್ಸ್ ಓದಿದ್ದು, ಐಟಿ ಕಂಪನಿಗಳಲ್ಲಿ ಕೆಲಸ ಸಿಕ್ಕಿತ್ತು. ಆದರೆ ಆಂಕರಿಂಗ್ ಮಾಡುವ ಆಸೆ ಇದ್ದ ರಶ್ಮಿ ಕೆಲಸ ಬಿಟ್ಟು ಕಿರುತೆರೆಗೆ ಪಾದರ್ಪಣೆ ಮಾಡಿದರು. ಮೋಕ್ಷಿತಾ ಪೈ ಶೇಶಾದ್ರಿಪುರಂನಲ್ಲಿ ನೆಲೆಸಿದ್ದು, ಬಿ.ಕಾಂ ಓದಿಕೊಂಡಿದ್ದಾರೆ. ನಟನೆಗೆ ಬರುವ ಮುನ್ನ ಮೋಕ್ಷಿತಾ ಅವರು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ತಮ್ಮ ಫೇಸ್ ಬುಕ್ ಪೇಜ್ ನಲ್ಲಿನ ಫೋಟೋ ಮೂಲಕ ನಟನೆಯ ಅವಕಾಶ ದೊರಕಿತು.

ಮಾಡೆಲಿಂಗ್ ನಲ್ಲಿದ್ದ ತಾರೆಯರು
ಅಭಿನವ್ ವಿಶ್ವನಾಥನ್ ನಟನೆಗೆ ಬರುವ ಮುನ್ನ 2019ರಲ್ಲಿ ಮಿಸ್ಟರ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಜೊತೆಗೆ ಅಭಿನವ್ ರಂಗಭೂಮಿಯಲ್ಲಿದ್ದರು. 'ಮಿಥುನ ರಾಶಿ' ಧಾರಾವಾಹಿ ನಟ ಸ್ವಾಮಿನಾಥನ್ ಅನಂತರಾಮ್ ಇಂಜಿನಿಯರ್ ಆಗಿದ್ದರು. ಸತ್ಯ ಧಾರಾವಾಹಿಯ 'ಅನು ಜನಾರ್ಧನ್' ನಟನೆಗೆ ಬರುವ ಮುನ್ನ ಮಾಡೆಲಿಂಗ್ ಮಾಡಿಕೊಂಡಿದ್ದರು. ಇನ್ನು 'ಜೊತೆ ಜೊತೆಯಲಿ' ಧಾರಾವಾಹಿ ಮಾನಸ ಮನೋಹರ್ ಎಂಬಿಎ ವಿದ್ಯಾರ್ಥಿಯಾಗಿದ್ದು, ಮೊದಲು ಮಾಡೆಲಿಂಗ್ ಮಾಡುತ್ತಿದ್ದರು. ನಂತರ ರಾಜ್ ಮ್ಯೂಸಿಕ್ ನಲ್ಲಿ ನಿರೂಪಣೆ ಮಾಡಿದರು. ಇದಾದ ನಂತರ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶ ದೊರಕಿತು. ಶರಣ್ಯ ಶೆಟ್ಟಿ ಕೂಡ ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಮಾಡೆಲಿಂಗ್ ಮಾಡಿಕೊಂಡಿದ್ದರು.


Click it and Unblock the Notifications











