Ankitha Jayaram: 'ಭೂಮಿಗೆ ಬಂದ ಭಗವಂತ' ಅಂತಿದ್ದ ಬಾಲನಟಿ 'ಕಾಗದ'ದಲ್ಲಿ ಪ್ರೇಮಕಥೆಗೆ ಬರೆಯಲು ರೆಡಿ!
'ಭೂಮಿಗೆ ಬಂದ ಭಗವಂತ' ಧಾರಾವಾಹಿ ಇತ್ತೀಚೆಗಷ್ಟೇ 100 ಎಪಿಸೋಡ್‌ಗಳನ್ನು ಪೂರೈಸಿದೆ. ಈ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಮಿಡಲ್ ಕ್ಲಾಸ್ ಜನರ ಜೀವನ ಹೇಗೆಲ್ಲಾ ಇರುತ್ತೆ ಎಂಬುದನ್ನು ಸರಳವಾಗಿ ತೋರಿಸಲಾಗುತ್ತಿದೆ.
ಇನ್ನು ಇದರಲ್ಲಿನ ಡೈಲಾಗ್‌ಗಳು ಕೂಡ ನಿತ್ಯ ಮನೆಯಲ್ಲಿ ಉಪಯೋಗಿಸುವ ಮಾತುಗಳೇ ಇದ್ದು, ಮಿಡಲ್ ಕ್ಲಾಸ್‌ನಲ್ಲಿ ಜೀವನ ನಡೆಸುವ ವ್ಯಕ್ತಿಯ ಕಥೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಶಿವಪ್ರಸಾದ್, ಗಿರಿಜಾ, ಭಗವಂತ, ಕಾಶಿ ಸುತ್ತಲೂ ಕಥೆ ಸುತ್ತುತ್ತಿದೆ. ಭಗವಂತ ಶಿವಪ್ರಸಾದ್ ಕುಟುಂಬದ ಮೂಲಕ ಜನಸಾಮಾನ್ಯರಿಗೆ ಪಾಠ ಕಲಿಸುತ್ತಿದ್ದಾರೆ.
ಅಂಕಿತಾ ಧಾರಾವಾಹಿಯಲ್ಲಿ ನಟನೆ
ಭಗವಂತ ಮನುಷ್ಯರಿಂದ ಏನನ್ನು ಅಪೇಕ್ಷಿಸುತ್ತಾರೆ. ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಮನುಷ್ಯರು ಏನು ಮಾಡಬೇಕು. ರಾಗ ದ್ವೇಷಗಳಿಂದ ಹೇಗೆ ದೂರ ಉಳಿಯಬೇಕು. ಮನುಷ್ಯರಲ್ಲಿ ಒಗ್ಗಟ್ಟು ಎಂಬುದು ಎಷ್ಟು ಮುಖ್ಯ, ನಯ-ವಿನಯಕ್ಕೆ ಏನು ಬೆಲೆ ಇದೆ. ಪೂಜೆ ಪುನಸ್ಕಾರಗಳ ಮಹತ್ವವೇನು ಎಂಬ ಬಗ್ಗೆ ತಿಳಿಸಿ ಕೊಡಲಾಗುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯಲ್ಲಿ ಪ್ರಣೀತಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಜಯರಾಂ ಈಗ ಸಿನಿಮಾವೊಂದಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲ ನಟಿ ನಾಯಕಿ ಪಾತ್ರದಲ್ಲಿ ಮಿಂಚಿದ್ದು, ಎಲ್ಲರೂ ವಿಶ್ ಮಾಡುತ್ತಿದ್ದಾರೆ.
ಸ್ಟಾರ್ ನಟರ ಜೊತೆ ನಟನೆ
ಬಾಲ ನಟಿ ಅಂಕಿತಾ ಜಯರಾಮ್ ಈಗಾಗಲೇ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂಕಿತಾ ಜಯರಾಮ್ ಈ ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಬಾ ಭಾರತ ಕಾರ್ಯಕ್ರಮದಲ್ಲಿ ಅಂಕಿತಾ ಭಾಗವಹಿಸಿದ್ದರು. ಇಷ್ಟೇ ಅಲ್ಲದೇ, ವಿಜಯ್ ರಾಘವೇಂದ್ರ ಅಭಿನಯದ ಹಕೂನ ಮಟಾಟ ಎಂಬ ಸೀರಿಸ್‌ನಲ್ಲೂ ಅಂಕಿತಾ ಬಣ್ಣ ಹಚ್ಚಿದ್ದರು. ಇನ್ನು ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ನಟಿಸಿದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರ ಜೊತೆಗೆ ನಟಿಸಿದ ಅಂಕಿತಾ ನಾಯಕಿಯಾಗುತ್ತಾಳೆ ಎಂದು ಆಗಲೇ ಊಹಿಸಲಾಗಿತ್ತು. ಇದೀಗ ನಿಜವೂ ಆಗಿದೆ. 'ಭರಾಟೆ', 'ಕ್ರಾಂತಿ', 'ಯುವರತ್ನ', 'ರತ್ನನ್ ಪ್ರಪಂಚ', 'ವೇದ', 'ಶೋಕಿವಾಲ', 'ಸಾರಾ ವಜ್ರ' ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಾಯಕಿ ಪಾತ್ರದಲ್ಲಿ ಬಾಲ ನಟಿ
ಇನ್ನು 'ವೇದ' ಚಿತ್ರದಲ್ಲಿ ಬುದ್ಧಿಮಾಂಧ್ಯದ ಮಗುವಿನ ಪಾತ್ರದಲ್ಲಿ ನಟಿಸಿದ್ದಕ್ಕೆ ಚಿತ್ರಸಂತೆಯಿಂದ ಅತ್ಯುತ್ತಮ ಬಾಲ ನಟಿ ಎಂಬ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯವಾಗಿರುವ ಅಂಕಿತಾ ಅಪ್ಪು ಫ್ಯಾನ್ ಕೂಡ ಹೌದು. ಸದ್ಯ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಶಿವಪ್ರಸಾದ್ ಹಿರಿ ಮಗಳು ಪ್ರಣೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ನಟಿಸುತ್ತಲೇ ಈಗ ಚಿತ್ರವೊಂದಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
'ಕಾಗದ' ಚಿತ್ರದಲ್ಲಿ ಅಂಕಿತಾ
ರಂಜಿತ್ ಕುಮಾರ್ ಗೌಡ ನಿರ್ದೇಶನದ 'ಕಾಗದ' ಎಂಬ ಸಿನಿಮಾದಲ್ಲಿ ಅಂಕಿತಾ ಜಯರಾಮ್ ನಟಿಸುತ್ತಿದ್ದಾರೆ. ಸದ್ಯ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳು ಹಾಗೂ ಕಲಾವಿದರು ಪುಟಾಣಿ ಅಂಕಿತಾಳಿಗೆ ವಿಶ್ ಮಾಡಿದ್ದಾರೆ. 'ಕಾಗದ' ಸಿನಿಮಾದಲ್ಲಿ ಅಂಕಿತಾಗೆ ಆದಿತ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲರಾಜವಾಡಿ, ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ಪಕ್ಕಾ ಪ್ರೇಮಕಥೆಯಾಗಿದ್ದು, 2005ರ ಸಮಯದಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿದೆ. ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ಕಾಗದ ಎಷ್ಟು ಮುಖ್ಯ ಪಾತ್ರ ವಹಿಸಿದೆ ಅನ್ನೋದು ಈ ಚಿತ್ರದ ಕಥೆ. ಅರುಣ್ ಕುಮಾರ್ ಎ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


Click it and Unblock the Notifications











