ಬ್ರಹ್ಮಗಂಟಿನ 'ಗುಂಡಮ್ಮ' ಸಿನಿಮಾಗಳಲ್ಲಿ ಫುಲ್ ಬ್ಯುಸಿ!
ಶ್ರುತಿ ನಾಯ್ಡು ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಬ್ರಹ್ಮಗಂಟು" ಧಾರಾವಾಹಿಯಲ್ಲಿ ನಾಯಕಿ ಗೀತಾ ಆಲಿಯಾಸ್ ಗುಂಡಮ್ಮ ಆಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿದ್ದ ನಟಿ ಗೀತಾಭಾರತಿ ಭಟ್. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡ ಗೀತಾಭಾರತಿ ಭಟ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮೋಡಿ ಮಾಡಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಕಾಲ 'ಗುಂಡಮ್ಮ' ಪಾತ್ರಕ್ಕೆ ಜೀವ ತುಂಬಿದ್ದ ಗೀತಾಭಾರತಿ ಭಟ್ ಮುದ್ದಾದ ನಟನೆಯ ಮೂಲಕ ಕಿರುಪರದೆಯ ಮೇಲೆ ಗುರುತಿಸಿಕೊಂಡಿರುವ ಬೆಡಗಿ. ಜೀ ಕುಟುಂಬ ಅವಾರ್ಡ್ಸ್ ನಲ್ಲಿ "ಮನೆ ಮೆಚ್ಚಿದ ಸೊಸೆ" ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಗೀತಾ ಕರ್ನಾಟಕದ ಮನೆ ಮಾತಾಗಿ ಕಣ್ಮನ ಸೆಳೆದಿದ್ದಾರೆ. ಬ್ರಹ್ಮಗಂಟು ಧಾರಾವಾಹಿಯ ಮೂಲಕ ಗುರುತಿಸಿಕೊಂಡಿದ್ದ ಗೀತಾ ಭಾರತಿ ಭಟ್ ಮುಂದೆ ಕಾಣಿಸಿಕೊಂಡಿದ್ದು ರಿಯಾಲಿಟಿ ಶೋನಲ್ಲಿ.

ಬಿಗ್‌ಬಾಸ್ ಮನೆಯಲ್ಲಿ ಗೀತಾ ಭಾರತಿ ಭಟ್
ಧಾರಾವಾಹಿಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ ಗೀತಾ ಭಾರತಿ ಭಟ್ ಬಿಗ್ ಬಾಸ್ ಮನೆಯೊಳಗೂ ಪ್ರವೇಶ ಮಾಡಿದ್ದರು. ಗೀತಾ ಭಾರತಿ ಭಟ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿದ್ದರು. ಈ ಶೋ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು.

ರಿಲೀಸ್ ಆಗುತ್ತಿದೆ ಸಿನಿಮಾ
ಗಗನ್ ಎಂ ನಿರ್ದೇಶನದ "ಮಂಕು ಬಾಯ್ ಫ್ಯಾಕ್ಸಿ ರಾಣಿ" ಸಿನಿಮಾದಲ್ಲಿ ನಾಯಕಿಯಾಗಿ ಗೀತಾಭಾರತಿ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಅದು ಇದೇ ಜನವರಿ 13 ರಂದು ತೆರೆ ಕಾಣಲಿದೆ. "ನಾನು ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಹಾಗಾಗಿ ಈ ಸಿನಿಮಾ ನನ್ನ ಪಾಲಿಗೆ ತುಂಬಾನೇ ಸ್ಪೆಷಲ್. ಶೂಟಿಂಗ್ ಅನುಭವವೂ ಕೂಡಾ ಸೂಪರ್ ಆಗಿತ್ತು. ಸಿನಿಮಾ ಶುರುವಾದಾಗ ನನಗೆ ಮಂಗಳೂರು ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಸಿನಿಮಾದ ಸಲುವಾಗಿ ಕಲಿತೆ. ಸಿನಿಮಾದ ಶೂಟಿಂಗ್ ಮುಗಿಯುವಾಗ ನಾನು ಮಂಗಳೂರು ಕನ್ನಡದಲ್ಲಿ ಮಾತನಾಡುವುದನ್ನು ಕಲಿತೆ" ಎಂದು ಇತ್ತೀಚೆಗೆ ಕಾರ್ಯಕ್ರಮದಲ್ಲಿ ಗೀತಾಭಾರತಿ ಭಟ್ ಮಾಡಿದ್ದರು.

ಸಿನಿಮಾಗಳಲ್ಲಿ ಫುಲ್ ಬ್ಯುಸಿ
'ಮಂಕು ಬಾಯ್ ಫ್ಯಾಕ್ಸಿ ರಾಣಿ' ಸಿನಿಮಾ ಎರಡೂವರೆ ವರ್ಷಗಳ ಬಳಿಕ ಈಗ ಬಿಡುಗಡೆಗೆ ತಯಾರಾಗಿದೆ. ನನ್ನನ್ನು ತೆರೆ ಮೇಲೆ ನೋಡಿ ಕಣ್ತುಂಬಿಸಿಕೊಳ್ಳುವ ಅವಕಾಶ ದೊರಕಿದೆ ಖುಷಿಯಾಗುತ್ತಿದೆ. ಜೊತೆಗೆ ಇದರಿಂದ ನನ್ನ ಆತ್ಮವಿಶ್ವಾಸವೂ ಕೂಡಾ ಹೆಚ್ಚಾಗಿದೆ" ಎಂದು ಹೇಳುವ ಗೀತಾ ಭಾರತಿ ಭಟ್ ಸಂತೋಷ್ ಕೊಡಂಕೇರಿ ನಿರ್ದೇಶನದ ಇನ್ನು ಹೆಸರಿಡಬೇಕಾಗಿರುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ
'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ನಾಯಕಿಯ ಸಣ್ಣ ವಯಸ್ಸಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗೀತಾಭಾರತಿ ಭಟ್ ನಂತರ 'ಲವ್ ಮಾಕ್ಟೈಲ್' ಸಿನಿಮಾದಲ್ಲಿ ನಾಯಕ ಆದಿ ಗೆಳತಿ ರೀಮಾ ಆಗಿ ಅಭಿನಯಿಸಿದ್ದರು. ಅದೃಷ್ಟ ಎಂದರೆ 'ಲವ್ ಮಾಕ್ಟೈಲ್' ಸಿನಿಮಾ ತೆಲುಗಿಗೆ ರಿಮೇಕ್ ಆಗಿದ್ದು, ಅಲ್ಲಿಯೂ ರೀಮಾ ಪಾತ್ರದಲ್ಲಿ ಸ್ವತಃ ಗೀತಾಭಾರತಿ ಭಟ್ ಅವರೇ ಕಾಣಿಸಿಕೊಂಡಿದ್ದರು.

ಗಾಯಕಿಯೂ ಹೌದು
ಕರ್ನಾಟಕ ಶಾಸ್ತ್ರೀಯ ಸಂಗೀತದ ಜೊತೆಗೆ ಹಿಂದೂಸ್ಥಾನಿ ಸಂಗೀತವನ್ನು ಕಲಿತಿರುವ ಈಕೆ ಗಾಯಕಿಯೂ ಹೌದು. ಒಂದಷ್ಟು ಸಿನಿಮಾಗಳಿಗೆ ರೀ ರೆಕಾರ್ಡಿಂಗ್, ಟ್ರ್ಯಾಕ್, ಹಿನ್ನಲೆ ಗೀತೆಗಳನ್ನು ಹಾಡಿ ಸೈ ಎನಿಸಿಕೊಂಡಿರುವ ಕಿರುತೆರೆಯ ಪ್ರೀತಿಯ ಗುಂಡಮ್ಮ ಆದಿತ್ಯ ವಿನೋದ್ ನಿರ್ದೇಶನದ 'ಸ್ವೀಟೂ' ಎನ್ನುವ ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.


Click it and Unblock the Notifications