Jhansi Subbaiah: 'ಮನೆಯೊಂದು ಮೂರು ಬಾಗಿಲು' ಎಂದಿದ್ದ ಝಾನ್ಸಿ ಸುಬ್ಬಯ್ಯ.. ಸಿನಿಮಾ to ಕಿರಿತೆರೆ ಜರ್ನಿ ಹೇಗಿದೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಚಾರಿ' ಧಾರಾವಾಹಿಯಲ್ಲಿ ನಾಯಕಿ ಚಾರುಲತಾ ಅಮ್ಮ ಮಾನ್ಯತಾ ಆಗಿ ಅಭಿನಯಿಸುತ್ತಿರುವ ಝಾನ್ಸಿ ಸುಬ್ಬಯ್ಯ ಕಿರುತೆರೆ ಜಗತ್ತಿಗೆ ಹೊಸಬರಲ್ಲ. ಬೆಳ್ಳಿತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಮಂಜಿನ ನಗರಿಯ ಬೆಡಗಿ ಮನೋಜ್ಞ ನಟನೆಯ ಮೂಲಕ ಕಿರುತೆರೆಯ ವೀಕ್ಷಕರ ಮನ ಸೆಳೆದಿದ್ದಾರೆ.
'ರಾಮಚಾರಿ' ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿರುವ ಝಾನ್ಸಿ ಸುಬ್ಬಯ್ಯ ಅವರಿಗೆ ಹೆಸರು ತಂದುಕೊಟ್ಟಿದ್ದು 'ಮನೆಯೊಂದು ಮೂರು ಬಾಗಿಲು' ಧಾರಾವಾಹಿ. ಮಡಿಕೇರಿಯ ಸೋಮವಾರಪೇಟೆಯ ಮೂಲದವರಾಗಿರುವ ಝಾನ್ಸಿ ಸುಬ್ಬಯ್ಯ ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಮಹಾನಗರಿಗೆ ಕಾಲಿಟ್ಟರು.ಮಹಾನಗರಿಗೆ ಬಂದು ಮಾಡೆಲಿಂಗ್ ಜಗತ್ತಿಗೆ ಪಾದಾರ್ಪಣೆ ಮಾಡಿದ ಝಾನ್ಸಿ ಸುಬ್ಬಯ್ಯ ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮೋಡಿ ಮಾಡಿದರು.

ಮಾಡೆಲಿಂಗ್‌ನಿಂದ ಸಿನಿಮಾ ಕಡೆಗೆ
ನವೀನ್ ಮಯೂರ್ ಅಭಿನಯದ 'ಪ್ರೀತಿ ಮಾಡೋ ಹುಡುಗರಿಗೆಲ್ಲಾ' ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಂಡಿರುವ ಝಾನ್ಸಿ ಸುಬ್ಬಯ್ಯ ತದ ನಂತರ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ತದ ನಂತರ ಕಿರುತೆರೆಯತ್ತ ಮುಖ ಮಾಡಿದ ಝಾನ್ಸಿ ಸುಬ್ಬಯ್ಯ ಅಲ್ಲೂ ಕೂಡಾ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.
ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ
'ಮಾವಯ್ಯನ ಮೋಡಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಝಾನ್ಸಿ ಸುಬ್ಬಯ್ಯ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದರು. ಸಕ್ರೆಬೈಲು ಶ್ರೀನಿವಾಸ್ ಅವರ 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಯಲ್ಲಿ ಮನೆಯ ಹಿರಿಸೊಸೆ ಆಗಿ ಕಾಣಿಸಿಕೊಂಡಿದ್ದರು. ಝಾನ್ಸಿ ಸುಬ್ವಯ್ಯ ಅವರ ಹೆಸರು ಕೇಳಿದಾಗ ವೀಕ್ಷಕರ ಕಣ್ಣ ಮುಂದೆ ಬರುವುದು ಅದೇ ಧಾರಾವಾಹಿ. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ.
ಕಲ್ಯಾಣಿಯಾಗಿ ಕಿರುತೆರೆಗೆ ರೀ ಎಂಟ್ರಿ
ಮದುವೆ, ಮಕ್ಕಳು, ಸಂಸಾರ ಎಂದು ನಟನೆಯಿಂದ ದೂರವಿದ್ದ ಝಾನ್ಸಿ ಸುಬ್ಬಯ್ಯ ಸಹಜವಾಗಿ ನಟನೆಯಿಂದ ಕೊಂಚ ದೂರವಿದ್ದರು. ಹತ್ತು ವರ್ಷಗಳ ದೀರ್ಘ ಗ್ಯಾಪ್‌ನ ನಂತರ ಕಿರುತೆರೆಗೆ ಕಾಲಿಟ್ಟರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾವಲ್ಲಭ' ಧಾರಾವಾಹಿಯಲ್ಲಿ ಖಳನಾಯಕಿ ಕಲ್ಯಾಣಿ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಮರಳಿದರು.

ಕಿರುತೆರೆಗೆ ಝಾನ್ಸಿ ರೀ ಎಂಟ್ರಿ
ಸುದೀರ್ಘ ಗ್ಯಾಪ್‌ನ ನಂತರ ಮತ್ತೆ ಅಭಿನಯದತ್ತ ಮುಖ ಮಾಡಿದ್ದ ಝಾನ್ಸಿ ಅವರಿಗೆ ಮತ್ತೊಮ್ಮೆ ಕ್ಯಾಮೆರಾ ಮುಂದೆ ಬಂದಾಗ ಸಹಜವಾಗಿ ಭಯವಾಗಿತ್ತಂತೆ. ಕೊಂಚ ಮಟ್ಟಿಗೆ ನರ್ವಸ್ ಕೂಡಾ ಆಗಿದ್ದರಂತೆ. ತದ ನಂತರ ಆರಾಮವಾಗಿ ನಟಿಸುವುದು ಅಭ್ಯಾಸವಾಯಿತು ಎಂದು ಹೇಳಿರುವ ಝಾನ್ಸಿ ಸದ್ಯ ಮಾನ್ಯತಾ ಆಗಿ ಬ್ಯುಸಿಯಾಗಿದ್ದಾರೆ.


Click it and Unblock the Notifications











