Pallavi Gowda: ಖಳನಾಯಕಿಯೂ ಹೌದು.. ನಾಯಕಿಯೂ ಹೌದು.. ಪರಭಾಷೆಯಲ್ಲಿ ಕನ್ನಡತಿಯ ಮೋಡಿ
ಕನ್ನಡ ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನೇಕರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವುದು ತೀರಾ ಮಾಮೂಲಿ ಸಂಗತಿ. ಇದರ ಹೊರತಾಗಿ ಇನ್ನು ಕೆಲ ನಟ ನಟಿಯರು ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ನಿಂದು ನೂರೆಳ್ಳ ಸಾವಸಂ' ಧಾರಾವಾಹಿಯಲ್ಲಿ ಅರುಂಧತಿಯಾಗಿ ನಟಿಸುತ್ತಿರುವ ಪಲ್ಲವಿ ಗೌಡ ಕನ್ನಡ ಕಿರುತೆರೆಯ ಮೂಲಕ ಗುರುತಿಸಿಕೊಂಡ ಬೆಡಗಿ.
ಹೌದು, 'ಗಾಳಿಪಟ' ಧಾರಾವಾಹಿಯ ಮೂಲಕ ನಟಿಯಾಗಿ ಕಿರುತೆರೆ ಜಗತ್ತಿನಲ್ಲಿ ಕಾಣಿಸಿಕೊಂಡ ಪಲ್ಲವಿ ಗೌಡ ಮುಂದೆ 'ಮನೆಯೊಂದು ಮೂರು ಬಾಗಿಲು', 'ಪರಿಣಯ', 'ಸೇವಂತಿ', 'ಚಂದ್ರ ಚಕೋರಿ' ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನದಲ್ಲಿ ಸ್ಥಾನ ಪಡೆದುಕೊಂಡ ಈ ಚೆಲುವೆ ತದ ನಂತರ ಖಳನಾಯಕಿಯಾಗಿ ಭಡ್ತಿ ಪಡೆದಿದ್ದರು.

ಖಳನಾಯಕಿಯೂ ಹೌದು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಜೋಡಿಹಕ್ಕಿ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಖಳನಾಯಕಿಯಾಗಿ ನಟಿಸಿ ಮನೆ ಮಾತಾಗಿದ್ದ ಪಲ್ಲವಿ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೇವಂತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದರು. ಆದರೆ, ಕಾರಣಾಂತರಗಳಿಂದ ಆ ಪಾತ್ರಕ್ಕೆ ವಿದಾಯ ಹೇಳಿದರು.
ತೆಲುಗು ಕಿರುತೆರೆಯಲ್ಲಿ ಬ್ಯುಸಿ
'ಸೇವಂತಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಪಲ್ಲವಿ ಗೌಡ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ತೆಲುಗು ಕಿರುತೆರೆಯ ಮೂಲಕ. ತೆಲುಗಿನ 'ಚದುರಂಗಂ'ನಲ್ಲಿ ನಾಯಕಿಯಾಗಿ ನಟಿಸಿದ್ದ ಈಕೆ ಮುಂದೆ ಕನ್ನಡದ 'ಸೂರ್ಯವಂಶ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಧಾರಾವಾಹಿ ಶುರುವೇ ಆಗಲಿಲ್ಲ.

ಕನ್ನಡ ಕಿರುತೆರೆಗೆ ಬರುತ್ತಾರಾ ಪಲ್ಲವಿ?
ಬೆರಳೆಣಿಕೆಯಷ್ಟು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸಿ, ಪಾಸಿಟಿವ್ ಮಾತ್ರವಲ್ಲದೇ ನೆಗೆಟಿವ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಪಲ್ಲವಿ ಗೌಡ ಇದೀಗ 'ನಿಂದು ನೂರೆಳ್ಳ ಸಾವಸಂ' ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮುದ್ದಾದ ನಟನೆಯ ಮೂಲಕ ಪರಭಾಷೆಯ ವೀಕ್ಷಕರನ್ನು ರಂಜಿಸುತ್ತಿರುವ ಪಲ್ಲವಿ ಗೌಡ ಮತ್ತೆ ಕನ್ನಡ ಕಿರುತೆರೆಗೆ ಬರುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











