ಹಿರಿಯ ನಟಿ ಹೇಮಾ ಚೌಧರಿ ಅನ್ನು ಭೇಟಿಯಾದ 'ಅಮೃತವರ್ಷಿಣಿ'ಯ ರಜಿನಿ; ಅತ್ತೆಯ ಆರೋಗ್ಯ ವಿಚಾರಿಸಿದೆ ಸೊಸೆ
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯ ಹಿರಿಯ ನಟಿ ಹೇಮಾ ಚೌಧರಿ ಅವರು ಇತ್ತೀಚೆಗೆ ಒಂದಷ್ಟು ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆ ಸೇರಿದ್ದರು. ಕನ್ನಡದ ಬಹಳಷ್ಟು ನಟರು ಆಸ್ಪತ್ರೆಗೆ ತೆರಳಿ ನಟಿ ಹೇಮಾ ಚೌಧರಿ ಆರೋಗ್ಯ ವಿಚಾರಿಸಿದ್ದು ಉಂಟು. ಇದೀಗ ನಟಿ ಹೇಮಾ ಚೌಧರಿ ಅವರು ಆರೋಗ್ಯದಲ್ಲಿ ಸುಧಾರಿಸಿಕೊಂಡು ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ನಟಿ ರಜಿನಿ ಅವರು ಹೇಮಾ ಚೌಧರಿಯನ್ನು ಭೇಟಿಯಾಗಿ ಮಾತನಾಡಿಸಿದ ಕ್ಷಣವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ ನಟಿ ರಜಿನಿಗೂ ನಟಿ ಹೇಮಾ ಚೌಧರಿ ಅವರಿಗೂ ಬಹಳಷ್ಟು ಅವಿನಾಭಾವ ಸಂಬಂಧ ಇದೆ. ತೆರೆ ಮೇಲೆ ವರ್ಷಗಳ ಕಾಲ ಇವರಿಬ್ಬರು ಅತ್ತೆ ಸೊಸೆಯ ಪಾತ್ರಕ್ಕೆ ಜೀವ ತುಂಬಿದ್ದರು. ಹೌದು, ದಶಕದ ಹಿಂದೆ 'ಅಮೃತವರ್ಷಿಣಿ' ಧಾರಾವಾಹಿ ಪ್ರಸಾರವಾಗುತ್ತಿದ್ದ ಕಾಲ ಅದು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಗೆ ಬಹುದೊಡ್ಡ ಫ್ಯಾನ್ ಬೇಸ್ ಇತ್ತು. ಇದರಲ್ಲಿ ಘಾಟಿ ಅತ್ತೆಯ ಪಾತ್ರವನ್ನು ನಟಿ ಹೇಮಾ ಚೌಧರಿ ಅವರು ನಡೆಸಿದರೆ, ಮುಗ್ಧ ಸೊಸೆಯ ಪಾತ್ರದಲ್ಲಿ ನಟಿ ರಜಿನಿ ಅವರು ಕಾಣಿಸಿಕೊಂಡಿದ್ದರು. ಈ ಅತ್ತೆ ಸೊಸೆ ಜೋಡಿ ಅಂದು ಜನ ಮನಮೆಚ್ಚಿದ ಜೋಡಿಯಾಗಿತ್ತು. ಇದೀಗ ಇವರಿಬ್ಬರು ಮತ್ತೆ ಭೇಟಿಯಾಗಿರುವುದು ಒಟ್ಟಿಗೆ ಫೋಟೋಗಳನ್ನು ತೆಗೆಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದು ಇವರ ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ.
ನಟಿ ರಜಿನಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ಹೇಮಾ ಚೌಧರಿ ಅವರೊಂದಿಗೆ ತೆಗೆಸಿಕೊಂಡ ಒಂದೆರಡು ಫೋಟೋಗಳನ್ನು ಶೇರ್ ಮಾಡಿ ಈ ರೀತಿ ಬರೆದಿದ್ದಾರೆ. "ತುಂಬಾ ವರ್ಷಗಳ ನಂತರ ಅಮ್ಮನ ಭೇಟಿ ಮಾಡಿದ ಕ್ಷಣ ಅವರ ಆರೋಗ್ಯ ತುಂಬಾ ಚೆನ್ನಾಗಿದೆ. ಈಗಲೂ ಅವರ ಉತ್ಸಾಹ ಆ ಹುಮ್ಮಸ್ಸು ಆ ಗಟ್ಟಿತನ ನೋಡೋದೆ ಒಂದು ಚೆಂದ. ಅವರು ತುಂಬಾ ಸ್ಟ್ರಾಂಗ್ ಲೇಡಿ. ಅವರಿಂದ ನಾವು ಕಲಿತದ್ದು ತುಂಬಾ ಇದೆ. ಕಲಿಯಬೇಕಾದದ್ದು ತುಂಬಾ ಇದೆ. ಐ ಲವ್ ಯು ಅಮ್ಮ" ಎಂದು ಬರೆದುಕೊಂಡು ತಮ್ಮ ಪ್ರೀತಿ ಹಾಗೂ ವಾತ್ಸಲ್ಯವನ್ನು ತೋರಿಸಿದ್ದಾರೆ.
ಈ ಪೋಸ್ಟ್ ಹೊರಬೀಳುತ್ತಿದ್ದಂತೆಯೇ ಸಿನಿಮಾ ರಂಗ ಸೇರಿದಂತೆ ಧಾರಾವಾಹಿಯ ಹಲವು ಕಲಾವಿದರು ಕಮೆಂಟ್ಸ್ ಮೂಲಕ ತಮ್ಮ ಶುಭ ಹಾರೈಕೆ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಮೃತವರ್ಷಿಣಿ ಧಾರಾವಾಹಿ ನಟಿ ರಜಿನಿ ಅವರ ಮೊದಲ ಧಾರಾವಾಹಿಯಾಗಿತ್ತು. ಅಲ್ಲಿ ಮುಗ್ಧ ಸೊಸೆಯಾಗಿದ್ದ ಅಮೃತ ಪದೇ ಪದೇ ಬೇರೆ ಬೇರೆ ವಿಚಾರಗಳಲ್ಲಿ ಅತ್ತೆಯಿಂದ ಬೈಸಿಕೊಳ್ಳುತ್ತಿದ್ದಳು. ತನ್ನ ಮುಗ್ಧತನದಿಂದ ಒಮ್ಮೊಮ್ಮೆ ಪೆದ್ದು ತನದಿಂದ ಅತ್ತೆಗೆ ಅತ್ತೆಯ ಮನೆಯವರಿಗೆ ಸಾಕಷ್ಟು ತಾಪತ್ರಯ ನೀಡುತ್ತಿದ್ದಳು. ಅದರಂತೆ ನಟಿ ಹೇಮಾ ಚೌಧರಿ ಅವರ ಪಾತ್ರ ಕೂಡ ಬಹಳ ಘಾಟಿಯಾಗಿಯೇ ಇತ್ತು.
ಈ ರೀತಿಯ ಅತ್ತೆ ಸೊಸೆಯ ಜೋಡಿ ಮನೆ ಮಾತಾಗಿತ್ತು. ಧಾರಾವಾಹಿ ಕಥೆಯಲ್ಲಿ ಕ್ರಮೇಣ ಅಮೃತಾಳ ಬಗ್ಗೆ ಅತ್ತೆಗೂ ಕನಿಕರ ಮೂಡಿ, ಅಮೃತಾ ಹಲವಾರು ವಿಚಾರಗಳನ್ನು ತಿಳಿಯುತ್ತ ಮನೆಗೆ ಮನೆಯವರಿಗೆ ಸಹಾಯವಾಗುತ್ತಾ ಹೋಗುತ್ತಿದ್ದಂತೆ ಈ ಅತ್ತೆ ಸೊಸೆಯ ಜೋಡಿ ದಿ ಬೆಸ್ಟ್ ಜೋಡಿ ಎಂದೆನಿಸಿಕೊಂಡಿತ್ತು.
ತೆರೆ ಮೇಲೆ ಈ ರೀತಿಯ ಸಂಬಂಧವನ್ನು ಇಟ್ಟುಕೊಂಡು ಹಲವಾರು ಪ್ರೇಕ್ಷಕರು ಹಾಗೂ ಅಭಿಮಾನಿ ಬಳಗವನ್ನು ಪಡೆದ ಈ ಇಬ್ಬರು ಕಲಾವಿದರು ತೆರೆ ಹಿಂದೆಯೂ ಇಷ್ಟೇ ಕ್ಲೋಸ್ ಆಗಿದ್ದಾರೆ ಎಂಬುದು ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಇದೀಗ ನಟಿ ರಜಿನಿ ಅವರು ನಟಿ ಹೇಮಾ ಚೌಧರಿ ಅವರ ಆರೋಗ್ಯ ವಿಚಾರಿಸಿ ಮನೆಗೂ ಹೋಗಿ ಬಂದಿರುವುದು ವರ್ಷಗಳ ನಂತರವೂ ಇವರಿಬ್ಬರ ನಡುವೆ ಇರುವ ಪ್ರೀತಿ ಹಾಗು ಆಪ್ತತೆಯನ್ನು ತೋರಿಸುತ್ತದೆ.


Click it and Unblock the Notifications











