ಐಎಎಸ್ ಅಧಿಕಾರಿಯಾಗಿ ಮತ್ತೆ ಕಿರುತೆರೆಗೆ ಶ್ವೇತಾ ಪ್ರಸಾದ್ ಎಂಟ್ರಿ: ಇಷ್ಟು ದಿನ ಯಾಕೆ ಬಣ್ಣ ಹಚ್ಚಿಲ್ಲ ರಾಧಾ ಮಿಸ್?
ಶ್ವೇತಾ ಪ್ರಸಾದ್.. ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಹೆಸರು ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕಿ ಆರಾಧನ ಪಾತ್ರಕ್ಕೆ ಜೀವ ತುಂಬಿದ್ದ ಶ್ವೇತಾ ಪ್ರಸಾದ್ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ರಾಧಾ ಮಿಸ್.
'ರಾಧಾ ರಮಣ' ಧಾರಾವಾಹಿಯ ನಂತರ ಕಿರುತೆರೆಯಿಂದ ಶ್ವೇತಾ ಪ್ರಸಾದ್ ದೂರವೇ ಉಳಿದಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಅಭಿಮಾನಿಗಳಿಗೆ ತಮ್ಮ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದರು. ಬಹಳ ದಿನಗಳ ಬಳಿಕ ಮತ್ತೊಮ್ಮೆ ಅತಿಥಿಯಾಗಿ ಕಿರುಪರದೆ ಮೇಲೆ ಕಾಣಿಸಿಕೊಂಡು ವೀಕ್ಷಕರ ಮನ ಸೆಳೆದಿದ್ದರು.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಮೋಡಿ ಮಾಡಿದ್ದ ಶ್ವೇತಾ ಪ್ರಸಾದ್ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ಕಲರ್ಸ್ ಕನ್ನಡದಲ್ಲಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ಮಗದೊಮ್ಮೆ ಅತಿಥಿಯಾಗಿ ಶ್ವೇತಾ ಪ್ರಸಾದ್ ಮೋಡಿ ಮಾಡುತ್ತಿದ್ದಾರೆ.
'ಅಂತರಪಟ' ಧಾರಾವಾಹಿಯಲ್ಲಿ ಐಎಎಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಆಟೋ ಡ್ರೈವರ್ ಮಗಳಾಗಿ ಎಂಟ್ರಿ ಕೊಟ್ಟಿರುವ ಶ್ವೇತಾ ಪ್ರಸಾದ್ ಕೆಲವು ದಿನಗಳಷ್ಟೇ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೇ ವರ್ಷಗಳ ಬಳಿಕ ಕಿರುತೆರೆಯತ್ತ ಮುಖ ಮಾಡಿರುವುದಕ್ಕೆ ಶ್ವೇತಾ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ. "ರಾಧಾ ರಮಣ ಧಾರಾವಾಹಿಯ ನಂತರ ನಾನು ಕಿರುತೆರೆಯಿಂದ ದೂರವಿದ್ದೆ. ಇದೀಗ ಅತಿಥಿ ಪಾತ್ರದ ಮೂಲಕ ಮತ್ತೆ ನಿಮ್ಮನ್ನು ರಂಜಿಸಲು ಬರುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

"ರಾಧಾ ರಮಣ ಧಾರಾವಾಹಿಯ ನಂತರ ನನಗೆ ಸಾಕಷ್ಟು ಆಫರ್‌ಗಳು ಬಂದಿದ್ದವು. ಈಗಲೂ ಬರುತ್ತಿವೆ. ಆದರೆ, ಒಳ್ಳೆಯ ಪಾತ್ರಗಳು ಯಾವುದು ಬಂದಿರಲಿಲ್ಲ. ಬಂದಂತಹ ಪಾತ್ರಗಳು ಯಾವುದು ಕೂಡಾ ನನಗೆ ಒಪ್ಪಿಗೆ ಆಗದ ಕಾರಣ ನಾನು ನಟಿಸಲಿಲ್ಲ. ಅಂತರಪಟದಲ್ಲಿ ಈಗ ನಾನು ರಾಧಾ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದ್ದೇನೆ. ಆರಂಭದಲ್ಲಿ ಅದು ಒಂದು ದಿನದ ಸಂಚಿಕೆ ಎಂದಿತ್ತು. ಆಮೇಲೆ ಅವರು ಅದನ್ನು ಎರಡು ಮೂರು ದಿನಕ್ಕೆ ವಿಸ್ತರಿಸಿದರು. ಇದು ತುಂಬಾ ಚೆಂದದ ಪಾತ್ರ" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಶ್ವೇತಾ ಪ್ರಸಾದ್.
"ಈಗಲೂ ಕೂಡಾ ನನಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯೇನೋ ಇದೆ. ಅದೇ ರೀತಿ ಉತ್ತಮ ಪಾತ್ರ ದೊರೆತರೆ ನಾನು ಖಂಡಿತಾ ಮತ್ತೊಮ್ಮೆ ಕಿರುತೆರೆಯಲ್ಲಿ ನಟಿಸುತ್ತೇನೆ" ಎಂದು ಸಂತೋಷದಿಂದ ಹೇಳುವ ಶ್ವೇತಾ ಪ್ರಸಾದ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀ ರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಾಯಕಿ ಜಾಹ್ನವಿಯಾಗಿ ನಟಿಸುವ ಮೂಲಕ ನಟನೆಗೆ ಕಾಲಿಟ್ಟರು.
ನಟಿಯಾಗಬೇಕು ಎಂಬ ಕನಸಿರದ, ನಟನೆಯಲ್ಲಿ ಗುರುತಿಸಿಕೊಳ್ಳಬೇಕು ಎಂಬ ಹಂಬಲವಿರದ ಶ್ವೇತಾ ಪ್ರಸಾದ್ ಅವರು ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟದ್ದು ಮಾತ್ರವಲ್ಲದೇ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಗುರುತಿಸಿಕೊಂಡ ಬೆಡಗಿ. ಮುಂದೆ 'ರಾಧಾ ರಮಣ' ಧಾರಾವಾಹಿಯ ಆರಾಧನಾ ಆಗಿ ಮಿಂಚಿದ ಈಕೆ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಗಮನ ಸೆಳೆದರು. ಸಹಜ ನಟನೆಯ ಮೂಲಕ ಕಿರುತೆರೆ ಅಂಗಳದಲ್ಲಿ ಗುರುತಿಸಿಕೊಂಡಿರುವ ಆಕೆ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿ ಅಭಿನಯಿಸಿದ್ದರು.


Click it and Unblock the Notifications











