Bhagya Lakshmi ; ತಾಂಡವ್ ಕಣ್ಣಿಗೆ ಬಿದ್ದ ಪೂಜಾ ಮತ್ತು ಕಿಶನ್, ಭಾಗ್ಯ ಮರ್ಯಾದೆ ಬೀದಿಯಲ್ಲಿ ಮತ್ತೆ ಹರಾಜಾಗುತ್ತಾ ?
'ಭಾಗ್ಯ ಲಕ್ಷ್ಮಿ' ಯಲ್ಲಿ ಭಾಗ್ಯ ತನ್ನ ಸಹೋದರಿ ಪೂಜಾಳ ಮದುವೆ ಮಾಡಲು ಹರಸಾಹಸ ಪಡುತ್ತಿದ್ದಾಳೆ. ಬಂದಿದ್ದ ಒಂದು ಸಂಬಂಧ ಕೂಡ ತಾಂಡವ್‌ನ ದಿಸೆಯಿಂದ ಮುರಿದು ಬಿದ್ದಿದೆ. ಇನ್ನೇನು ಮದುವೆ ನಿಶ್ಚಯ ಆಗಬೇಕೆನ್ನುವ ಸಮಯದಲ್ಲಿ ತಾಂಡವ್ ಬಂದು ಸಂಬಂಧಕ್ಕೆ ಕೊಳ್ಳಿ ಇಟ್ಟಿರುವ ಕಾರಣ ಗಂಡಿನ ಕಡೆಯವರು ಈ ಸಂಬಂಧ ನಮಗೆ ಬೇಡ ಎಂದು ಹೇಳುತ್ತಾರೆ.
ಭಾಗ್ಯಳನ್ನು ನೋಡಿ ಗಂಡನನ್ನು ಬಿಟ್ಟು ಬಂದವಳು ಎಂದು ಆಡಿಕೊಂಡಿರುತ್ತಾರೆ. ಇದರಿಂದ ಸಹಜವಾಗಿ ಪೂಜಾ ಕೋಪ ಮಾಡಿಕೊಂಡು ನನ್ನ ಅಕ್ಕನಿಗೆ ಮರ್ಯಾದೆ ಸಿಗದ ಜಾಗದಲ್ಲಿ ನಾನು ನನ್ನ ಚಪ್ಪಲಿಯನ್ನು ಕೂಡ ಬಿಡುವುದಿಲ್ಲ ಎಂದು ಕೆಂಡ ಕಾರಿದ್ದಾಳೆ. ಪೂಜಾಳಿಗೆ ಸಮಾಧಾನ ಮಾಡುವ ಭಾಗ್ಯ ಸೂಕ್ತವಾದ ಯೋಗ್ಯ ಹುಡುಗನನ್ನು ನೋಡಿ ಮದುವೆ ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾಳೆ. ಆದರೂ ಕೂಡ ಸಂಬಂಧ ಮುರಿದು ಬಿದ್ದಿದ್ದಕ್ಕೆ ಪೂಜಾಗೆ ಅಸಮಾಧಾನ ಇದೆ. ನಿರಾಸೆಯಾಗಿದೆ.

ಪೂಜಾ ಹಿಂದೆ ಬಿದ್ದ ಕಿಶನ್
ನಿರಾಸೆಯಲ್ಲಿಯೇ ಕೆಲಸಕ್ಕೆ ಹೋಗುವ ಪೂಜಾಗೆ ಆಫೀಸ್‌ನಲ್ಲಿ ಆಘಾತ ಎದುರಾಗುತ್ತೆ. ಪೂಜಾ ಕಾಲೇಜ್‌ನ ಸೀನಿಯರ್ ಮತ್ತು ಆಫೀಸ್‌ನ ಎಂಡಿ ಕೂಡ ಆದ ಕಿಶನ್ ಏಕಾಏಕಿ ಬಂದು ಪೂಜಾ ಎದುರು ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ಇದೆಲ್ಲ ಹೇಗಾಯ್ತು ಎನ್ನುವುದು ನನಗೆ ಗೊತ್ತಿಲ್ಲ. ನೀನಂದರೆ ನನಗೆ ಇಷ್ಟ ಎಂದು ಅಪ್ಪಿಕೊಳ್ಳುತ್ತಾನೆ.
ಕಿಶನ್‌ನ ಈ ನಡೆಯಿಂದ ಆಘಾತಕ್ಕೊಳಗಾಗುವ ಪೂಜಾ ಅಲ್ಲಿಂದ ಕೋಪ ಮಾಡಿಕೊಂಡು ಹೊರಡುತ್ತಾಳೆ. ಇದರಿಂದ ಕಿಶನ್ ಆತಂಕಗೊಂಡಿದ್ದಾನೆ. ಇದನ್ನು ಗಮನಿಸಿದ ಆಫೀಸ್‌ನ ಸಹಾಯಕಿ ಪೂಜಾಗೆ ಕಾಲ್ ಮಾಡಿ ಕಿಶನ್ ಡಿಸ್ಟರ್ಬ್ ಆದ ವಿಚಾರ ತಿಳಿಸುತ್ತಾಳೆ. ಇದೇ ಸಮಯಕ್ಕೆ ಕಿಶನ್ ತನ್ನ ಸಹಾಯಕಿಯ ಫೋನ್ ಕಿತ್ತುಕೊಂಡು ಪೂಜಾ ಬಳಿ ಕ್ಷಮೆಯಾಚಿಸುತ್ತಾನೆ. ಇದರಿಂದ ಇನ್ನು ಕೋಪ ಮಾಡಿಕೊಳ್ಳುವ ಪೂಜಾ ಇದೆಲ್ಲವೂ ನಿನ್ನದೇ ನಾಟಕ ಎಂದು ಫೋನ್ ಕಟ್ ಮಾಡುತ್ತಾಳೆ.
ತಾಂಡವ್ ಬಳಿ ತಗಲಾಕಿಕೊಂಡ ಪೂಜಾ-ಕಿಶನ್
ಪೂಜಾ ಮನೆಗೆ ಹೋಗುವ ದಾರಿಯಲ್ಲಿ ಮತ್ತೆ ಎದುರಾಗುವ ಕಿಶನ್ ನಾನು ನಿನ್ನ ಜೊತೆ ಮಾತನಾಡಬೇಕೆಂದು ಹೇಳುತ್ತಾನೆ. ಇದೇ ಸಮಯದಲ್ಲಿ ಬರುವ ತಾಂಡವ್, ಪೂಜಾಳನ್ನು ನೋಡಿ ಅಲ್ಲಿಯೇ ನಿಂತುಕೊಂಡು ಏನಾಗುತ್ತಿದೆ ಎಂದು ನೋಡುತ್ತಾನೆ. ಒಳ್ಳೆ ಟೈಮ್‌ನಲ್ಲಿ ಸಿಕ್ಕಿಕೊಂಡಳು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ.
ಕಿಶನ್ ಮತ್ತು ಪೂಜಾ ಆ ನಂತರ ಪಾರ್ಕ್ ಗೆ ತೆರಳುತ್ತಾರೆ. ಅಲ್ಲಿ ಪೂಜಾಗೆ ಮದುವೆಯಾಗುವಂತೆ ಕಿಶನ್ ದುಂಬಾಲು ಬೀಳುತ್ತಾನೆ. ಇವರ ಈ ಸಂಭಾಷಣೆಯಿಂದ ಕಿರಿಕಿರಿಗೊಳಗಾಗುವ ಪಾರ್ಕ್‌ನಲ್ಲಿದ್ದ ಹಿರಿಯರು ನೀವು ಇಬ್ಬರು ಪ್ರೀತಿಸುತ್ತಿದ್ದೀರಾ, ನಿಮಗೆಲ್ಲ ಮದುವೆ ಮಾಡಿಸಿ ಸರಿಯಾದ ಬುದ್ದಿ ಕಲಿಸಬೇಕು ಎಂದು ಹೇಳುತ್ತಾರೆ. ದೂರದಿಂದಲೇ ತಾಂಡವ್ ಇದೆಲ್ಲವನ್ನು ಗಮನಿಸುತ್ತಾನೆ.
ಸದ್ಯ ಕಿಶನ್ ಮತ್ತು ಪೂಜಾ ಮದುವೆಯನ್ನ ಪಾರ್ಕ್‌ನ ಹಿರಿಯರೆಲ್ಲ ಸೇರಿ ಅಲ್ಲಿಯೇ ಮಾಡಿಸುತ್ತಾರಾ ಅಥವಾ ಇದೇ ವಿಚಾರವನ್ನು ಉಪಯೋಗಿಸಿಕೊಂಡು ತಾಂಡವ್ ಮತ್ತೊಮ್ಮೆ ಭಾಗ್ಯ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕುತ್ತಾನಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











