ಇವ್ರು ಕನ್ನಡ ಕಿರುತೆರೆಯ ಏಕ್ತಾ ಕಪೂರ್; 2 ದಶಕದಲ್ಲಿ ನೀಡಿರುವ ಧಾರಾವಾಹಿಗಳೆಷ್ಟು?
ನಟಿ ನಿರ್ದೇಶಕಿ ಶೃತಿ ನಾಯ್ಡು ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಒಂದು ಪಕ್ಷ ಶೃತಿ ನಾಯ್ಡು ಗೊತ್ತಿಲ್ಲದಿದ್ದರೂ ಅವರು ನಿರ್ದೇಶಿಸಿದ ಧಾರಾವಾಹಿಗಳನ್ನಂತೂ ಕನ್ನಡ ಕಿರುತೆರೆ ಪ್ರೇಕ್ಷಕರು ಖಂಡಿತ ವೀಕ್ಷಿಸಿರುತ್ತಾರೆ. ಕಳೆದೆರಡು ದಶಕಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ, ನಿರ್ದೇಶಕಿ ಶೃತಿ ನಾಯ್ಡು ಬ್ಯಾಕ್ ಟು ಬ್ಯಾಕ್ ಭರ್ಜರಿ ಧಾರಾವಾಹಿಗಳನ್ನು ನೀಡಿರುವ ಹೆಗ್ಗಳಿಕೆ ಪಡೆದಿದ್ದಾರೆ.
ಇವರ ನಿರ್ದೇಶನದ 'ಚಿ. ಸೌ. ಸಾವಿತ್ರಿ' ಎಂಬ ಧಾರಾವಾಹಿ ಎಷ್ಟು ಫೇಮಸ್ ಆಗಿತ್ತು ಎಂದರೆ ಆ ಧಾರಾವಾಹಿಯ ನಾಯಕ ನಟಿ ಹಾಕಿಕೊಳ್ಳುತ್ತಿದ್ದ ಸೀರೆ 'ಸಾವಿತ್ರಿ ಸೀರೆ' ಎಂದೇ ಕರ್ನಾಟಕದಲ್ಲಿ ಟ್ರೆಂಡ್ ಆಗಿತ್ತು. ಇನ್ನು ಇವರದ್ದೇ 'ಶ್ರೀರಸ್ತು ಶುಭಮಸ್ತು' ಎಂಬ ಧಾರಾವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿಬಂದಿತ್ತು.

'ಪುನರ್ ವಿವಾಹ', 'ಅತಿ ಮಧುರ ಅನುರಾಗ', 'ಮಹಾನದಿ', 'ಬ್ರಹ್ಮಗಂಟು', 'ಯಾರೆ ನೀ ಮೋಹಿನಿ', 'ಸಂಜು ಮತ್ತು ನಾನು', 'ಅಮ್ನೋರು', 'ನಾಗಮಂಡಲ', 'ಏಟು ಎದುರೇಟು', 'ಮಮತೆಯ ಕರೆಯೋಲೆ', 'ರಾಜಕುಮಾರಿ' ಹೀಗೆ ಶ್ರುತಿ ನಾಯ್ಡು ಅವರ ನಿರ್ದೇಶನದಲ್ಲಿ ಪ್ರಸಾರಗೊಂಡ ಧಾರಾವಾಹಿಗಳ ಬಹುದೊಡ್ಡ ಲಿಸ್ಟ್ ಅನ್ನೇ ಹೊರ ತೆಗೆಯಬಹುದು.
ಇವರು ನಿರ್ದೇಶಿಸಿದ್ದ 'ದೇವಿ' ಮತ್ತು 'ಮಹಾದೇವಿ' ಧಾರಾವಾಹಿ ಅಂತೂ ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರೆಟ್ ಧಾರಾವಾಹಿ ಆಗಿತ್ತು ಎಂದರೆ ತಪ್ಪಾಗಲ್ಲ. ಅಂದ ಹಾಗೇ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ನಟಿ ಶೃತಿ ನಾಯ್ಡು ನಟ ಅನಂತನಾಗ್ ಅವರ ಗೆಳತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಶ್ರುತಿ ನಾಯ್ಡು ಕ್ರಮೇಣ ನಿರ್ದೇಶನಕ್ಕೆ ಹೆಚ್ಚಿನ ಒತ್ತುಕೊಟ್ಟರು. ಮೂಲತಃ ಮೈಸೂರಿನವರಾದ ಈಕೆ ನಿರ್ದೇಶಕಿಯಾಗಿ, ಸ್ಕ್ರಿಪ್ಟ್ ರೈಟರ್ ಆಗಿ, ನಿರ್ಮಾಪಕಿಯಾಗಿಯೂ ಕನ್ನಡ ಕಿರುತೆರೆಯಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ.
ಕಿರುತೆರೆ ಅಷ್ಟೇ ಅಲ್ಲದೆ 'ಪ್ರೀಮಿಯರ್ ಪದ್ಮಿನಿ' ಎಂಬ ಸಿನಿಮಾ ಮೂಲಕ ಸಿನಿಮಾ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡವರು ನಟಿ ಶೃತಿ ನಾಯ್ಡು. 2019 ರಲ್ಲಿ ರಿಲೀಸ್ ಆದ ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್, ಕಿರುತರೆ ನಟ ಪ್ರಮೋದ್, ಹಿರಿಯ ಕಲಾವಿದೆ ಸುಧಾರಾಣಿ ಹಾಗೂ ನಟಿ ಹಿತಾ ಚಂದ್ರಶೇಖರ್ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯಕ್ಕಂತೂ ಧಾರಾವಾಹಿ ನಿರ್ದೇಶನಕ್ಕಿಂತಲೂ ನಿರ್ಮಾಣದಲ್ಲೇ ಹೆಚ್ಚು ತೊಡಗಿಸಿಕೊಂಡಿರುವ ನಟಿ ನಿರ್ದೇಶಕಿ ಶೃತಿ ನಾಯ್ಡು ಅವರಿಗೆ ಕಾರ್‌ಗಳ ಬಗ್ಗೆ ಬಹಳಷ್ಟು ಕ್ರೇಜ್ ಇದೆಯಂತೆ. ಈಕೆ ಹತ್ತಿರ ಬಹಳಷ್ಟು ವಿಭಿನ್ನವಾದ ಕಾರ್‌ಗಳ ಕಲೆಕ್ಷನ್ ಇದ್ದು ಆಗಾಗ ಲಾಂಗ್ ಡ್ರೈವ್ ಹೋಗುವುದು ಇವರ ಇಷ್ಟದ ಹಾಬಿಯಂತೆ.
ನಟಿ ಶೃತಿ ನಾಯ್ಡು ಹಾಗೂ ನಟ ನಿರ್ದೇಶಕ ರಮೇಶ್ ಇಂದಿರಾ ಅವರ ಕಾಂಬಿನೇಷನ್‌ನಲ್ಲಿ ಕನ್ನಡ ಕಿರುತೆರೆ ಬಹಳಷ್ಟು ವಿಭಿನ್ನ ಧಾರಾವಾಹಿಗಳನ್ನು ಕಂಡಿದ್ದಂತೂ ಸತ್ಯ. ಸ್ವಂತ ಕಥೆಗಳೊಂದಿಗೆ ಹಲವಾರು ಹಿಂದಿ ಧಾರಾವಾಹಿಗಳನ್ನು ಬಹಳ ವಿಭಿನ್ನವಾಗಿ ಡಬ್ ಮಾಡಿರುವ ನಿರ್ದೇಶಕಿ ಶ್ರುತಿ ನಾಯ್ಡು ಅವರನ್ನು ಕನ್ನಡದ ಏಕ್ತಾ ಕಪೂರ್ ಎಂದರೆ ತಪ್ಪಾಗಲ್ಲ.
ಶೃತಿ ನಾಯ್ಡು ಅವರ ಧಾರಾವಾಹಿಗಳ ವಿಶೇಷವೆಂದರೆ ಯಾವ ಸಿನಿಮಾ ಸೆಟ್‌ಗಳಿಗೂ ಕಮ್ಮಿ ಇಲ್ಲದಂತೆ, ನೈಜ ಅಭಿನಯ, ವಿಭಿನ್ನ ತಾರಾಗಣ, ವಿಶೇಷ ಕಥೆಯೊಂದಿಗೆ ಐಷಾರಾಮಿ ಸೀರಿಯಲ್ ಸೆಟ್ ಹಾಕುತ್ತಾ ಪ್ರತಿ ಧಾರಾವಾಹಿಯಲ್ಲೂ ವಿಭಿನ್ನ ಟ್ರೆಂಡ್‌ಗಳನ್ನು ಕ್ರಿಯೇಟ್ ಮಾಡಿದ್ದರು.


Click it and Unblock the Notifications











