ತನಿಖಾ ವರದಿ ಭಾಗ - 02: ಡಿ.ಕೆ. ಶಿವಕುಮಾರ್ ಕಣ್ಣಿಗೆ ಬಿದ್ದರಾ ಟಿಆರ್‌ಪಿ ಕಳ್ಳರು?

By ಫಿಲ್ಮಿಬೀಟ್ ಡೆಸ್ಕ್

'ಟಿಆರ್‌ಪಿ ಕಳ್ಳರ ಬುಡಕ್ಕೆ ಬೆಂಕಿ...' ಎಂಬ ಶೀರ್ಷಿಕೆಯ ಈ ಹಿಂದಿನ ತನಿಖಾ ವರದಿಯಲ್ಲಿ ಟಿಆರ್‌ಪಿ ಕಳ್ಳರ ಮೈ ಚಳಿ ಬಿಡಿಸುವ ಕೆಲಸ ಆಗಿತ್ತು. ಕಿರುತೆರೆಯ ಸಾಕಷ್ಟು ನಿರ್ಮಾಪಕರು ಕಳ್ಳರ ಬಣ್ಣ ಬಯಲು ಮಾಡಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಕಿರುತೆರೆ ಲೋಕದಲ್ಲಿ ನಡೆಯುತ್ತಿರುವ ಟಿಆರ್‌ಪಿ ಕಳ್ಳಾಟ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಟಿಆರ್‌ಪಿ ಲೋಕದ ಕರಾಳ ದಾರಿಯ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ನಿಮ್ಮ ಮುಂದೆ ಬಯಲು ಮಾಡುತ್ತಿದ್ದೇವೆ.

Kannada Serial Producer Golmaal How TRP Cheating Happens in the Television Industry

ನಿರ್ಮಾಪಕ ಮತ್ತು ರೇಟಿಂಗ್ ನಿರ್ಮಾಪಕ

ಪ್ರಸ್ತುತ ಕನ್ನಡದ ಎರಡು ವಾಹಿನಿಗಳಲ್ಲಿ ನಿರ್ಮಾಪಕ ಮತ್ತು ರೇಟಿಂಗ್ ನಿರ್ಮಾಪಕ ಎಂಬ ಕಾನ್ಸೆಪ್ಟ್‌ನಲ್ಲಿ ಧಾರಾವಾಹಿಗಳು ಓಡುತ್ತಿವೆ. ಇದರಲ್ಲಿ ಮೂಲ ನಿರ್ಮಾಪಕರಿಗೆ, ಅಂದರೆ ವಾಹಿನಿಯ ಅಗ್ರಿಮೆಂಟ್‌ನಲ್ಲಿ ಹೆಸರಿರುವ ಮತ್ತು ವಾಹಿನಿಯ ಜೊತೆ ಪ್ರತಿದಿನ ಸಂಪರ್ಕದಲ್ಲಿ ಇರುವ ನಿರ್ಮಾಪಕರಿಗೆ ಟಿಆರ್‌ಪಿಯನ್ನು ಕಳ್ಳಾಟದ ಮೂಲಕ ಹೇಗೆ ತರುವುದು ಎಂದು ಗೊತ್ತಿರುವುದಿಲ್ಲ ಅಥವಾ ಕಳ್ಳಾಟದ ಸರ್ಕಲ್‌ನಲ್ಲಿ ಇವರಿಗೆ ಅಂತಹ ಕಾಂಟ್ಯಾಕ್ಟ್ ಇರುವುದಿಲ್ಲ. ಹೀಗಾಗಿ ಈ ಮೂಲ ನಿರ್ಮಾಪಕರು ರೇಟಿಂಗ್ ತರುವ ಕಳ್ಳರಿಗೆ ಡೀಲ್ ಕೊಟ್ಟು, ತಿಂಗಳಿಗೆ ಐದು ಲಕ್ಷ ಫಿಕ್ಸ್ ಮಾಡುತ್ತಾನೆ. ಹೀಗೆ ಹಣ ತೆಗೆದುಕೊಂಡು ಕೃತಕ ರೇಟಿಂಗ್ ತರಿಸಿಕೊಡುವ ಟಿ-ಗ್ಯಾಂಗ್ (T-Gang) ಕಳ್ಳರಿಗೆ ಕ್ರಮೇಣ, ನಾವೇ ಯಾಕೆ ಧಾರಾವಾಹಿಯ ನಿರ್ಮಾಣವನ್ನೂ ಮಾಡಬಾರದು ಅನ್ನಿಸಿದೆ. ಆಗ ಕಳ್ಳಾಟದ ದಾರಿ ಮತ್ತು ವಾಹಿನಿಯ ಸಂಪರ್ಕ ಎರಡೂ ಒಂದೇ ಕಡೆ ಇರುತ್ತದೆ. ಕೆಲ ವಾಹಿನಿಗಳಲ್ಲಿ ಈ ಎರಡೂ 'ಕಲೆ' ಗೊತ್ತಿದ್ದವರಿಗೇ ಮಾತ್ರ ನಿರ್ಮಾಣದ ಅವಕಾಶ ಸಿಗುತ್ತಿದೆ ಕೂಡಾ.

ಈ ಹಿಂದಿನ ವರದಿಯಲ್ಲಿ ಕೋರಮಂಗಲ ಮತ್ತು ಟಿಆರ್‌ಪಿ ರಾಜು ಪ್ರಕರಣದ ಬಗ್ಗೆ ತಮಗೆ ತಿಳಿಸಿದ್ದೆವು. ಅಲ್ಲಿ ಕೋರಮಂಗಲದವರಿಗೆ ಕಳ್ಳಾಟದ ಸರ್ಕಲ್ ಗೊತ್ತಿರಲಿಲ್ಲ, ಹಾಗಾಗಿ ಅವರ ಧಾರಾವಾಹಿಯ ರೇಟಿಂಗ್ ಕೂಡಾ ವಾರದಿಂದ ವಾರಕ್ಕೆ ಕಡಿಮೆಯಾಗುತ್ತಿತ್ತು. ಆಗ ಅವರು ಟಿಆರ್‌ಪಿ ರಾಜುವಿನ ಬಳಿ ಬಂದು 'ನೋಡಪ್ಪಾ ಸ್ವಲ್ಪ..' ಅಂದಿದ್ದಾರೆ. ಆಗ ರೇಟಿಂಗ್ ಕಳ್ಳನಾಗಿ ಎಂಟ್ರಿ ಕೊಟ್ಟ ಟಿಆರ್‌ಪಿ ರಾಜು ನಂತರ ಕೋರಮಂಗಲದವರನ್ನು ಚಾನೆಲ್‌ಗೆ ಮಾತ್ರ ಮಾತನಾಡಲು ಬಿಟ್ಟು, ಹಿನ್ನೆಲೆಯಲ್ಲಿ ತಾನೇ ಮೂಲ ನಿರ್ಮಾಪಕನಾಗಿ ಕಂಟ್ರೋಲ್ ತೆಗೆದುಕೊಂಡುಬಿಟ್ಟಿದ್ದ. ಇದು ಗೊತ್ತಾದ ಮೇಲೆ ವಾಹಿನಿಯ ದೊಡ್ಡ ಹುದ್ದೆಯವರು ರಾಜನನ್ನು ಓಡಿಸಿ, ಕೋರಮಂಗಲದವರಿಂದ ಬೇರೆಯವರಿಗೆ ಧಾರಾವಾಹಿ ನಿರ್ಮಾಣವನ್ನು ವಹಿಸಿಕೊಡಬೇಕು ಎಂದು ಪ್ರಯತ್ನಪಟ್ಟಿದ್ದರು. ಆದರೆ, ಒಮ್ಮೆ ಟಿಆರ್‌ಪಿ ರಾಜು ಕಾಲಿಟ್ಟು ಹೋದ ಮೇಲೆ ಅಲ್ಲಿ ಮೀಟರ್ ಮುಟ್ಟಿ ರೇಟಿಂಗ್ ತರುವ ಮಾತಿರಲಿ, ಖಾಲಿ ಕ್ವಾರ್ಟರ್ ಬಾಟಲಿ ಕೂಡಾ ಗಿಟ್ಟುವುದಿಲ್ಲ ಎಂಬುದು ಇಡೀ ಕಿರುತೆರೆಗೆ ಗೊತ್ತಿರುವ ಸಂಗತಿ. ಹಾಗಾಗಿ ಯಾರೂ ಕೂಡಾ ಕೋರಮಂಗಲದಿಂದ ಧಾರಾವಾಹಿಯನ್ನು ವಹಿಸಿಕೊಳ್ಳಲು ಮುಂದೆ ಬಂದಿಲ್ಲ. ಬದಲಿಗೆ, ಡಿ.ಐ.ಸಂತು ಮತ್ತು ಎಡಿಟರ್ ಕಿರಣ್ ಸೇರಿ ಕೋರಮಂಗಲಕ್ಕೆ ಹಣ ಇನ್ವೆಸ್ಟ್ ಮಾಡಿದ್ದಾರಂತೆ. ಬಳಿಕ ಇದೇ ಹಣವನ್ನು ರಾಜುಗೆ ಕೊಟ್ಟು 'ನೀನು ಹೊರಡಪ್ಪಾ..' ಅಂದಿದ್ದಾರೆ. ಆದರೆ ಆಟ ಅಷ್ಟಕ್ಕೆ ಮುಗಿಯಲಿಲ್ಲ, ಟಿಆರ್‌ಪಿ ರಾಜು 'ಅದು ಹೇಗೆ ರೇಟಿಂಗ್ ಬರುತ್ತೆ ನಾನು ನೋಡ್ತೀನಿ..' ಅಂತ ಅವಾಜ್ ಹಾಕಿದ್ದನಲ್ಲವೇ? ಅದರಂತೆ ಒಂದೇ ವಾರಕ್ಕೆ ಕೋರಮಂಗಲ ಧಾರಾವಾಹಿಯ ಟಿಆರ್‌ಪಿ 'ಡೈರಿ ಸರ್ಕಲ್' ತನಕ ಇಳಿದುಬಿಟ್ಟಿತ್ತು. ತಕ್ಷಣಕ್ಕೆ ಅಲರ್ಟ್ ಆದ ಇನ್ವೆಸ್ಟರ್ ಸಂತು ತಮ್ಮ ಹೋಟೆಲಿನ ಕಬಾಬ್ ಜೊತೆಗೆ ರಾಜು ಬಳಿ ಹೋಗಿ 'ನಿನಗೆ ತಿಂಗಳಿಗೆ ಏನು ಕೊಡಬೇಕೋ ಅದನ್ನು ಕೊಡುತ್ತೇವೆ. ದಯವಿಟ್ಟು ರೇಟಿಂಗ್ ಮಾತ್ರ ಮೊದಲಿನ ಹಾಗೆ ಇರಲಿ..' ಅಂದಿದ್ದಾರೆ. ಆಗ ರಾಜು 'ಕಬಾಬ್ ಸಾಕಾಗಲ್ಲ, ಜೊತೆಗೆ ನಲ್ಲಿ ಮೂಳೆ ಕೂಡಾ ಬೇಕು..' ಅಂದಿದ್ದಾನಂತೆ. ಪರಿಣಾಮ, ಅವರ ಟಿಆರ್‌ಪಿ ಈ ವಾರ ಮತ್ತೆ ಮೊದಲಿನ ಜಾಗಕ್ಕೆ ಬಂದು ಕುಳಿತಿದೆ.

ಎಷ್ಟು ಧಾರಾವಾಹಿಗಳ ಮೇಲೆ ಹದ್ದಿನ ಕಣ್ಣು?

ಕನ್ನಡದ ಎರಡು ವಾಹಿನಿಗಳಲ್ಲಿ ಹೀಗೆ ಕಳ್ಳಾಟದ ಜೊತೆಗೆ ರೇಟಿಂಗ್ ನಿರ್ಮಾಪಕ ಮತ್ತು ಮೂಲ ನಿರ್ಮಾಪಕ ಎಂಬ ಕಾನ್ಸೆಪ್ಟ್ ವರ್ಕ್ ಆಗುತ್ತಿದೆ. ಸಿಂಪಲ್ ಆಗಿ ಸಿನಿಮಾ ಮಾಡಿಕೊಂಡಿದ್ದ ನಿರ್ದೇಶಕರ ಧಾರಾವಾಹಿ, ಗಂಡ - ಹೆಂಡತಿ ಧಾರಾವಾಹಿ ನಿರ್ಮಾಣದಲ್ಲಿ ಸಾಲಮಾಡಿಕೊಂಡು ಊರು ಬಿಟ್ಟಿದ್ದರಿಂದ ಆಕಸ್ಮಿಕವಾಗಿ ಲಕ್ಷ್ಮಿ ಕೃಪೆಯಿಂದ ಮೈನ್‍ಸ್ಟ್ರೀಮ್ ನಿರ್ಮಾಪಕನಾದ ನಾರಿ ಕುಮಾರನ ಧಾರಾವಾಹಿ ಹಾಗೂ ಕಿರುತೆರೆಯ ಹಿರಿಯ ನಟರೊಬ್ಬರು ನಿರ್ಮಾಣ ಮಾಡುತ್ತಿರುವ ಧಾರಾವಾಹಿ (ಇನ್ನಷ್ಟು ಹೆಸರುಗಳಿವೆ ಅದನ್ನು ಮುಂದೆ ಸಾಕ್ಷಿ ಸಮೇತ ಬಯಲು ಮಾಡುತ್ತೇವೆ) ಹೀಗೆ ಒಂದಷ್ಟು ಧಾರಾವಾಹಿಗಳ ಮೇಲೆ ದೊಡ್ಡ ಮಟ್ಟದಲ್ಲಿ ಕಳ್ಳಾಟದ ಆರೋಪಗಳು ಕೇಳಿಬರುತ್ತಿವೆ. ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ, ಈ ಧಾರಾವಾಹಿಗಳ ಮೇಲೆ ಬಾರ್ಕ್ (BARC) ಸಂಸ್ಥೆ ದೊಡ್ಡ ಮಟ್ಟದಲ್ಲಿ ಹದ್ದಿನ ಕಣ್ಣು ಇಟ್ಟಿದೆಯಂತೆ. ಇನ್ನು ಹಳೆಯ ವಾಹಿನಿಯೊಂದರಲ್ಲಿ ಟಿಆರ್‌ಪಿ ರಾಜುವಿನ ಧಾರಾವಾಹಿಗೆ ಗೇಟ್‌ಪಾಸ್ ಕೊಟ್ಟಿದ್ದರಿಂದ, ಅದರ ಟಿಆರ್‌ಪಿ 'ಸೇವಂತಿ' ತೆಗೆದುಕೊಳ್ಳಲೂ ಆಗದಷ್ಟು ಕಡಿಮೆಯಾಗಿದೆ. ಆದರೆ, ಆತನಿಗೆ ಇನ್ನೊಂದು ಧಾರಾವಾಹಿಯ ನಿರ್ಮಾಣವನ್ನು ರೇಟಿಂಗ್ ನಿರ್ಮಾಪಕ ಎಂದು ಪರಿಗಣಿಸಿ ನೀಡಿದ್ದಾರಂತೆ. ಹಾಗಾಗಿ ಕಳ್ಳಾಟದ ರಾಜಾ ಸರಿಗಮಪಾ ಎಂದು ಗುನುಗುತ್ತಿದ್ದಾನಂತೆ. ಈ ವಾಹಿನಿಯ ಮುಖ್ಯಸ್ಥರು ಹಾಗೆಲ್ಲ ಕಳ್ಳರನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಅಂದುಕೊಂಡಿತ್ತು ಕಿರುತೆರೆ, ಆದರೆ ಸೆಕೆಂಡ್ ಫ್ಲೋರ್ ಪಾಲಿಟಿಕ್ಸ್ ಇವರನ್ನು ಕೂಡಾ ಮೆತ್ತಗಾಗಿಸಿದೆಯೇ? ಹಾಗೊಂದು ಅನುಮಾನ ಕಿರುತೆರೆಯಲ್ಲಿ ಓಡಾಡುತ್ತಿದೆ.

Kannada Serial Producer Golmaal How TRP Cheating Happens in the Television Industry

ಮಾಳವಿಕಾ ಅವಿನಾಶ್ ಕೊಟ್ಟ ಏಟು

ಕರ್ನಾಟಕದಲ್ಲಿ ಮೊಟ್ಟಮೊದಲು ಟಿಆರ್‌ಪಿ ಕಳ್ಳಾಟದ ಬಗ್ಗೆ ಸದ್ದಾಗಿದ್ದು 2014ರಲ್ಲಿ. ಆಗ ಟ್ಯಾಮ್ (TAM) ಎಂಬ ಸಂಸ್ಥೆ ರೇಟಿಂಗ್ ಏಜೆನ್ಸಿಯಾಗಿ ವಾಹಿನಿಗಳಿಗೆ ಟಿಆರ್‌ಪಿ ಕಳಿಸುವ ಕೆಲಸ ಮಾಡುತ್ತಿತ್ತು. ಬೆಂಗಳೂರಿನಲ್ಲಿ ನಡೆದ ಇದರ ಕಾನ್ಫರೆನ್ಸ್ ಒಂದರಲ್ಲಿ ನಟಿ ಮಾಳವಿಕಾ ಅವಿನಾಶ್ ಇದರ ಮುಖ್ಯಸ್ಥರನ್ನು ಯಾವ ಪರಿ ಬೆಂಡೆತ್ತಿದ್ದರು ಅಂದರೆ, ಟ್ಯಾಮ್ ಸಂಸ್ಥೆ ಹಳೆಯ ವಾಹಿನಿಯೊಂದರ ಎರಡು ಧಾರಾವಾಹಿಯ ಟಿಆರ್‌ಪಿಯನ್ನು ಸತತ ಎರಡು ವಾರಗಳ ಕಾಲ ತಡೆಹಿಡಿದಿತ್ತು. ಇಡೀ ದೇಶದಲ್ಲಿ ಕಳ್ಳಾಟದ ಕಾರಣಕ್ಕೆ ಧಾರಾವಾಹಿಗಳ ಟಿಆರ್‌ಪಿಯನ್ನು ತಡೆಹಿಡಿದ ಮೊದಲ ಪ್ರಕರಣ ಅದಾಗಿತ್ತು. ನಂತರ ಪೊಲೀಸರ ತನಕ ಹೋದ ಪ್ರಕರಣ ಅಂದರೆ, 2018ರಲ್ಲಿ ಟಿಆರ್‌ಪಿ ರಾಜುವನ್ನು ಬಂಧಿಸಿದ್ದು. ಬಾರ್ಕ್ ಸಂಸ್ಥೆಯ ಪಾಲುದಾರ ಮಹೇಶ್ ಎಂಬುವವರು ನೀಡಿದ ದೂರಿನ ಮೇಲೆ ಟಿಆರ್‌ಪಿ ರಾಜು, ಸುರೇಶ್, ಜೇಮ್ತಿ, ಸುಭಾಷ್ ಹಾಗೂ ಮಧು ಎಂಬಾತನನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದರು. ಇದಾದ ಮೇಲೆ ಟಿಆರ್‌ಪಿ ರಾಜುವಿಗೆ ಯಾವ ವಾಹಿನಿಯೂ ಧಾರಾವಾಹಿ ನಿರ್ಮಾಣದ ಅವಕಾಶ ನೀಡಬಾರದು ಎಂದು ಬಾರ್ಕ್ ಸಂಸ್ಥೆ ವಾಹಿನಿಗಳಿಗೆ ತಿಳಿಸಿತ್ತು. ಆಗ ಟಿಆರ್‌ಪಿ ರಾಜು ಹಿತ್ತಲಿನಿಂದ ಬಂದಿದ್ದು ರೇಟಿಂಗ್ ನಿರ್ಮಾಪಕ ಎಂಬ ಪ್ಲೇ ಕಾರ್ಡ್‌ನೊಂದಿಗೆ. ಧಾರಾವಾಹಿಯ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ನಿರ್ಮಾಣಕ್ಕೆ ರೀ-ಎಂಟ್ರಿ ಕೊಟ್ಟ ಟಿಆರ್‌ಪಿ ರಾಜು ಹಳೆಯ ಚಾಳಿ ಮುಂದುವರೆಸಿದ್ದಾನೆ. ಅಂದರೆ, ವಾಹಿನಿ ನೇರವಾಗಿ ಇವನಿಗೆ ನಿರ್ಮಾಣದ ಅವಕಾಶ ಕೊಟ್ಟಿಲ್ಲ. ಬದಲಿಗೆ, ಬೇರೆಯವರ ನಿರ್ಮಾಣದ ಧಾರಾವಾಹಿಗೆ ಮೂಲ ನಿರ್ಮಾಪಕರೊಂದಿಗೆ ಡೀಲ್ ಮಾಡಿಕೊಂಡು ಎಂಟ್ರಿ ಕೊಟ್ಟಿದ್ದಾನೆ. ಆದರೆ ಬಾರ್ಕ್ ಈ ಸಲ ದೊಡ್ಡ ಮಟ್ಟದಲ್ಲಿ ಆಂತರಿಕ ತನಿಖೆ ಮಾಡುತ್ತಿರುವ ವಿಚಾರ ಈ ಕಳ್ಳನಿಗೆ ಇನ್ನೂ ಗೊತ್ತಾಗಿಲ್ಲ.

ವಿಡಿಯೋ ಇದೆಯಾ?

ಈ ನಡುವೆ ಕಳೆದ ಎರಡು ವಾರದಿಂದ ಕಳ್ಳಾಟದ ವಿಡಿಯೋ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕಿರುತೆರೆಯಲ್ಲಿ ನಡೆಯುತ್ತಿದೆ. ಮೂಲಗಳ ಪ್ರಕಾರ, ಟಿಆರ್‌ಪಿ ರಾಜು ತನ್ನ ಹಾಗೆಯೇ ಕಳ್ಳಾಟ ಮಾಡುತ್ತಿರುವ ಇನ್ನೊಂದು ರೇಟಿಂಗ್ ನಿರ್ಮಾಪಕರ ವಿಡಿಯೋ ಮಾಡಿಕೊಂಡಿದ್ದಾನಂತೆ. ಮೊದಲು ರಾಜುವಿನ ಬಳಿ ಕಳ್ಳಾಟ ಮಾಡಿಸುತ್ತಿದ್ದ ಈ ನಿರ್ಮಾಪಕರು ನಂತರ ಇವನಿಂದ ದೂರವಾಗಿ ಅವರೇ ನೇರವಾಗಿ ಕಳ್ಳಾಟದ ದಾರಿ ಕಂಡುಕೊಂಡಿದ್ದರಂತೆ. ಈ ಕೋಪಕ್ಕೆ ರಾಜು, ಬಾರ್ಕ್ ಮೀಟರ್ ಹಾಕಿರುವ ಮನೆಯೊಂದರಲ್ಲಿ 'ನಮ್ಮ ಧಾರಾವಾಹಿಯನ್ನು ಮಾತ್ರ ನೋಡಿ..' ಎಂದು ಮಾತನಾಡುವ ವಿಡಿಯೋ ಮಾಡಿಕೊಂಡಿದ್ದಾನಂತೆ. ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ, ನಾನು ಮಾತ್ರ ಕಳ್ಳ ಅಲ್ಲ, ಅವರೂ ಇದ್ದಾರೆ ಎಂದು ತೋರಿಸಲು ಈ ರೀತಿ ಮಾಡಿದ್ದಾನೆ ಎನ್ನಲಾಗುತ್ತಿದೆ. ಈ ವಿಡಿಯೋದ ವಿಚಾರ ಸಿಸಿಬಿ ತನಕ ಹೋಗಿದ್ದು, ಅವರು ಕೂಡಾ ಒಂದು ಸುತ್ತು ವಿಚಾರಿಸಿದ್ದಾರೆ ಎನ್ನಲಾಗುತ್ತಿದೆ. ರಾಜುವಿನ ಮೊಬೈಲ್ ರಿಟ್ರೀವ್ ಹಾಕಿದರೆ ಅಥವಾ ಮನೆ ಹುಡುಕಿದರೆ (ಆತನದ್ದು ಎರಡು ಮನೆ ಇದೆ) ಅದು ಸಿಗಬಹುದೇನೋ?

ಡಿ.ಕೆ. ಶಿವಕುಮಾರ್ ಎಂಟ್ರಿ?

ಈ ನಡುವೆ ಬಿಜೆಪಿಯ ನಾಯಕರೊಬ್ಬರು ಕಳ್ಳಾಟ ನಡೆಯುತ್ತಿರುವ ಧಾರಾವಾಹಿಯೊಂದಕ್ಕೆ ಹಣ ಹಾಕಿದ್ದಾರೆ ಎಂಬ ವಿಚಾರ ಕೂಡಾ ಸದ್ದು ಮಾಡುತ್ತಿದೆ. ಈ ಸಂಗತಿ ಡಿ.ಕೆ. ಶಿವಕುಮಾರ್ ಅವರ ತನಕ ಹೋಗಿದೆ ಎನ್ನಲಾಗುತ್ತಿದೆ. ಮನರಂಜನಾ ವಾಹಿನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರನ್ನು ಡಿ.ಕೆ. ಶಿವಕುಮಾರ್ ಅವರ ಪಿ.ಎ. ಕರೆಸಿಕೊಂಡು ಟಿಆರ್‌ಪಿ ಕಳ್ಳಾಟ, ಧಾರಾವಾಹಿ ನಿರ್ಮಾಣದ ವಿಧಾನ ಹಾಗೂ ರಾಜಕೀಯ ನಾಯಕರು ಹಣ ಹಾಕಿರುವ ಬಗ್ಗೆ ಮಾಹಿತಿ ಪಡೆದು, ಸಿಸಿಬಿಯವರಿಗೂ ಈ ವಿಚಾರವನ್ನು ದಾಟಿಸಿದ್ದಾರಂತೆ. ಒಂದು ವೇಳೆ ಈ ಸಂಗತಿಯನ್ನು ಡಿ.ಕೆ. ಶಿವಕುಮಾರ್ ಸಿರಿಯಸ್ಸಾಗಿ ತೆಗೆದುಕೊಂಡು ಸಿಸಿಬಿಯವರಿಗೆ 'ಮುಂದುವರೆಯಿರಿ..' ಅಂದರೆ, ಕನ್ನಡ ಕಿರುತೆರೆ ಟಿಆರ್‌ಪಿ ಕಳ್ಳಾಟದಲ್ಲಿ ಇಡೀ ದೇಶ ತಿರುಗಿ ನೋಡುವ ಹಾಗೆ ಸದ್ದು ಮಾಡುವುದಂತೂ ಸತ್ಯ. ವಾಹಿನಿಯವರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ನಟ್ಟು ಬೋಲ್ಟ್‌ನ ಜೊತೆಗೆ ಬಾರ್ಕ್ ಮೀಟರಿನ ಸ್ಕ್ರೂ ಕೂಡಾ ಬಿಚ್ಚಿ, ಧಾರಾವಾಹಿ ವಿಭಾಗದ ಸುಳ್ಳಿಯನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಿದರೂ ಆಶ್ಚರ್ಯವಿಲ್ಲ. ಸದ್ಯಕ್ಕೆ ಕರ್ನಾಟಕದ ರಾಜಕೀಯದಲ್ಲೇ ಒಂದಷ್ಟು ಗೊಂದಲದ ಪರಿಸ್ಥಿತಿ ಇರುವುದರಿಂದ ಅದನ್ನು ಮುಗಿಸಿ, ಶೀಘ್ರದಲ್ಲೇ ಟಿಆರ್ ಪಿ ಕಳ್ಳರ ಬುಡಕ್ಕೆ ಬಸಿ ಮುಟ್ಟಿಸಬಹುದು ಡಿ.ಕೆ ಶಿವಕುಮಾರ್.

More from Filmibeat

English summary
Kannada Serial Producer Golmaal: How TRP Cheating Happens in the Television Industry;
Read more about: trp kannada serial scam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X