ಕನ್ನಡದ ಈ ಗಾಯಕಿಗೆ ನಟನೆ 'ನಿಮಿತ್ತ ಮಾತ್ರ': ಯಾರಿವರು? ಇವರ ಹಿನ್ನೆಲೆಯೇನು?
ಹೌದು, ಕನ್ನಡದ ಗಾಯಕಿ, ಸರಿಗಮಪ ರಿಯಾಲಿಟಿ ಶೋವಿನ ಜ್ಯೂರಿಯಾಗಿರುವ ಸಂಗೀತಾ ರಾಜೀವ್ ಅವರು ತಮ್ಮ ಮೊಟ್ಟ ಮೊದಲ ಸಿನಿಮಾದಲ್ಲಿ ನಟಿಸಲಿದ್ದಾರೆ. ಅಂದ ಹಾಗೆ ಗಾಯಕರು ನಿಧಾನವಾಗಿ ನಟನೆ ಕಡೆಗೆ ಮುಖ ಮಾಡಿರುವುದು ಇದೇನು ಹೊಸದಲ್ಲ. ಈಗಾಗಲೇ ಕನ್ನಡ ಇಂಡಸ್ಟ್ರಿ ಕಂಡಿರುವ ಬಹಳಷ್ಟು ಮಹಾಗಾಯಕರು ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಹಲವಾರು ಉದಾಹರಣೆಗಳಿವೆ.
ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ, ರಾಜೇಶ್ ಕೃಷ್ಣನ್ ಅವರಿಂದ ಹಿಡಿದು ಇತ್ತೀಚಿನ ಯುವ ಗಾಯಕರಾದ ಸಂಚಿತ್ ಹೆಗಡೆ, ಐಶ್ವರ್ಯ ರಂಗರಾಜನ್ ಅವರು ನಟನೆಯಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ.

ಅದೇ ರೀತಿ ಇದೀಗ ಗಾಯಕಿ ಸಂಗೀತ ರಾಜೀವ್ ಅವರು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ನಿಮಿತ್ತ ಮಾತ್ರ' ಎಂಬ ಟೈಟಲ್‌ನ ಈ ಸಿನಿಮಾ ನಿರ್ದೇಶಕ ರೋಷನ್ ಡಿಸೋಜಾ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. 1970ರಲ್ಲಿ ನಡೆದ ಕಥೆಯನ್ನಾಧರಿಸಿದ ಈ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಗಾಯಕಿ ಸಂಗೀತಾ ರಾಜೀವ್ ತಮ್ಮ ಗಾಯನ ಹಾಗೂ ನಟನಾ ಜರ್ನಿಯ ಬಗ್ಗೆ ಮಾತನಾಡಿದ್ದಾರೆ.
ಗಾಯನದಲ್ಲಿ ಯಶಸ್ಸು ಕಂಡಂತೆ ನಟನೆಯಲ್ಲಿಯೂ ಕಾಣಬೇಕೆಂಬ ಆಸೆ ಇರುವುದು ಸಹಜ. ಆದರೆ ಹಾಗೆಯೇ ಆಗಬೇಕೆಂದೇನಿಲ್ಲ ಎಂಬುದನ್ನು ಸ್ಪಷ್ಟಿಕರಿಸಿರುವ ಈಕೆ ಯಾವುದಾದರೂ ಅದ್ಭುತ ಕಥೆಗಳು ಬಂದರೆ ಮಾತ್ರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಗಾಯಕರಿಗೆ ನಟನೆ ಕಷ್ಟದ ವಿಚಾರವಲ್ಲ ಏಕೆಂದರೆ ಭಾವನೆಗಳೊಂದಿಗೆ ಮಾತನಾಡುವುದು ಅವರಿಗೆ ಮೊದಲಿನಿಂದಲೂ ಬಂದಿರುತ್ತದೆ ಎಂಬ ಮಾತಿದೆ. ಅಂತೆಯೇ ಇದೀಗ ಗಾಯಕಿ ಸಂಗೀತಾ ರಾಜೀವ್ ಅವರ ಮೊದಲ ಸಿನಿಮಾ ಯಾವ ರೀತಿ ಮೂಡಿ ಬರುತ್ತದೆ ಎಂಬುದನ್ನು ನೋಡಲು ಗಾಯನ ಪ್ರಿಯರು ಹಾಗೂ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಗಾಯಕಿ ಸಂಗೀತಾ ರಾಜೀವ್ ಅವರಿಗೆ ಪೂರ್ಣಚಂದ್ರ ಮೈಸೂರು ಅವರು ಸಹನಟರಾಗಿ ಸ್ಕ್ರೀನ್ ಶೇರ್ ಮಾಡಲಿದ್ದು, ಒಂದು ಹಳೆಯ ಕಥೆಯನ್ನು ಹೇಳ ಹೊರಟರೂ ಪ್ರಸ್ತುತ ಕಾಲಕ್ಕೆ ತಕ್ಕದಾದಂತಹ ಕಥೆ ಇದಾಗಿದೆ ಎಂಬುದು ಸಂಗೀತಾ ರಾಜೀವ್ ಅವರ ಅಭಿಪ್ರಾಯ.
ಅಂದಹಾಗೆ ನಿಮಿತ್ತ ಮಾತ್ರ ಸಿನಿಮಾದ ಸ್ಕ್ರಿಪ್ಟನ್ನು ಓದಿ ಬಹಳ ಮೆಚ್ಚಿಕೊಂಡಿರುವ ಗಾಯಕಿ ಸಂಗೀತ ರಾಜೀವ್ ಇದನ್ನು ಕೈಗೆತ್ತಿಕೊಂಡರಂತೆ. ಆಕೆಗೆ ಒಳ್ಳೆಯ ಅಥವಾ ಕೆಟ್ಟ ನಟಿಯಾಗುವ ಯಾವುದೇ ಅಭಿಲಾಷೆ ಇಲ್ಲ. ಬದಲಾಗಿ ನಟನೆಯನ್ನು ಅಚ್ಚುಕಟ್ಟಾಗಿ ಮಾಡಿ ಒಳ್ಳೊಳ್ಳೆಯ ಅವಕಾಶಗಳು ಬಂದಾಗ ಗಾಯಕಿಯಾದಂತೆಯೇ ತನ್ನನ್ನು ತಾನು ಒಳ್ಳೆಯ ನಟಿಯಾಗಿಯೂ ಗುರುತಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇದೆ ಎಂದಿದ್ದಾರೆ.


Click it and Unblock the Notifications











