ಕನ್ನಡದ ಹುಡುಗಿ ಶಿವಾನಿಗೆ ಸಿಗಲಿಲ್ಲ ಸರಿಗಮಪ ತಮಿಳು- 5 ವಿನ್ನರ್ ಪಟ್ಟ; ಅಭಿಮಾನಿಗಳಿಗೆ ನಿರಾಸೆ
ಚಿಕ್ಕಮಗಳೂರು ಮೂಲದ ಪ್ರತಿಭೆ ಶಿವಾನಿ ನವೀನ್ ಸರಿಗಮಪ ತಮಿಳು ಸೀಸನ್- 5 ಫೈನಾಲೆ ಹಂತಕ್ಕೆ ಏರಿದ್ದರು. ಕನ್ನಡದ ಹುಡುಗಿ ಟ್ರೋಫೀ ಗೆದ್ದು ಬರಲಿ ಎಂದು ಸಂಗೀತ ಪ್ರೇಮಿಗಳು ಹಾರೈಸಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಶಿವಾನಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಗಾಯಕಿ ಸುಸಂತಿಕಾ ಜಯಚಂದ್ರನ್ ಗೆಲುವಿನ ನಗೆ ಬೀರಿದ್ದಾರೆ.
ಗ್ರ್ಯಾಂಡ್ ಆಡಿಷನ್ ವೇಳೆ ಕನ್ನಡದ ಹಾಡು ಹಾಡಿ ಶಿವಾನಿ ಮೋಡಿ ಮಾಡಿದ್ದರು. 'ಸೋಜುಗದ ಸೂಜುಮಲ್ಲಿಗೆ' ಹಾಡಿನ ಗಾಯನದ ಮೂಲಕ ತಮಿಳು ಸಂಗೀತ ಪ್ರೇಮಿಗಳ ಮನಸೂರೆ ಮಾಡಿದ್ದರು. ಆಕೆಯ ಗಾಯನ ಕಂಡು ನಟ ಧನುಷ್ ಕೂಡ ಅವಕಾಶ ಕೊಡುವುದಾಗಿ ಹೇಳಿದ್ದರು. ಬಳಿಕ ಸಾಕಷ್ಟು ಅದ್ಭುತ ಪರ್ಫಾರ್ಮನ್ಸ್‌ಗಳ ಮೂಲಕ ಶಿವಾನಿ ತಮಿಳು ಸರಿಗಮಪ ಸೀಸನ್- 5 ಟೈಟಲ್ ಗೆಲ್ಲುವ ಭರವಸೆ ಮೂಡಿಸಿದ್ದರು. 5ನೇ ಫೈನಲಿಸ್ಟ್ ಆಗಿ ಅಂತಿಮ ಘಟ್ಟ ತಲುಪಿದ್ದರು. ಆದರೆ ವಿಜಯಮಾಲೆ ಸಿಗಲಿಲ್ಲ.

ನಿನ್ನೆ ಚೆನ್ನೈನಲ್ಲಿ ಸರಿಗಮಪ ತಮಿಳು ಸೀಸನ್- 5 ಫೈನಾಲೆ ನಡೀತು. ಶಿವಾನಿ ಪ್ರಬಲ ಪೈಪೋಟಿ ನೀಡಿದ್ದರು. 'ನಾನ್ ಕಡವುಳ್' ಚಿತ್ರದ 'ಓಂ ಶಿವೋಹಂ' ಹಾಗೂ 'I' ಚಿತ್ರದ 'ಐಲ್ಲಾ ಐಲ್ಲಾ' ಸೇರಿ ಎರಡ್ಮೂರು ಹಾಡುಗಳನ್ನು ಫಿನಾಲೆ ವೇದಿಕೆಯಲ್ಲಿ ಹಾಡಿದ್ದರು. ಹೈ ಪಿಚ್ ಇರುವ ಗೀತೆಗಳನ್ನು ಹಾಡುವ ಮೂಲಕ ಶಿವಾನಿ ಶೋನಲ್ಲಿ ಕಮಾಲ್ ಮಾಡುತ್ತಾ ಬಂದಿದ್ದರು. ಫಿನಾಲೆಗೂ ಅಂಥದ್ದೇ ಹಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದರು.
ಸರಿಗಮಪ ಲಿಟ್ಲ್ ಚಾಂಪ್ಸ್ ಕನ್ನಡ 19ರಲ್ಲಿ ಶಿವಾನಿ ನವೀನ್ ರನ್ನರ್ ಅಪ್ ಆಗಿದ್ದರು. ಇದೀಗ ಸರಿಗಮಪ ತಮಿಳು ಸೀನಿಯರ್ಸ್ ಸೀಸನ್-5ರಲ್ಲಿ ಭಾಗವಹಿಸಿದ್ದರು. ಗಾಯಕ ಸಪೇಸನ್ ಮೊದಲ ರನ್ನರ್ ಅಪ್ ಹಾಗೂ ಮತ್ತೊಬ್ಬ ಗಾಯಕ ಚಿನ್ನು ಸೆಂಥಮಿಲನ್ ಸೆಕೆಂಡ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಪವಿತ್ರಾ ಅವರಿಗೆ ಜನಮೆಚ್ಚಿದ ಗಾಯಕಿ ಪಟ್ಟ ಲಭಿಸಿದ್ದು 5 ಲಕ್ಷ ರೂ. ಬಹುಮಾನವಾಗಿ ಸಿಕ್ಕಿದೆ.

ಶಿವಾನಿ ಗೆಲ್ಲಬೇಕು ಎಂದು ಕನ್ನಡಿಗರು ಹಾರೈಸಿದ್ದರು. ಫಿನಾಲೆ ತಲುಪಿದ ಬಳಿಕ ಶಿವಾನಿ ಉಡುಪಿಗೆ ಬಂದು ಪಂಜುರ್ಲಿ, ಗುಳಿಗ ದೈವಗಳಿಗೆ ಪೂಜೆ ಸಲ್ಲಿಸಿದ್ದರು. ಗುರು ಹಿರಿಯರ ಆಶೀರ್ವಾದ ಪಡೆದಿದ್ದರು. ತಾವು ಉಡುಪಿಯಲ್ಲೇ ಸಂಗೀತದ ಪಯಣ ಆರಂಭಿಸಿದ್ದಾಗಿ ಹೇಳಿದ್ದರು. ಶಿವಾನಿ ಅವರ ತಂದೆ ಆರ್ಕೇಸ್ಟ್ರಾ ಹಾಡುಗಾರರು. ತಾಯಿ ಕೂಡ ಕಲಾವಿದೆ. ಹಾಗಾಗಿ ಚಿಕ್ಕಂದಿನಿಂದಲೇ ಶಿವಾನಿ ಸಂಗೀತ ಅಭ್ಯಾಸ ಮಾಡಿದ್ದರು. ಉಡುಪಿಯಲ್ಲಿ ಆರ್ಕೇಸ್ಟ್ರಾಗಳಲ್ಲಿ ತಂದೆ ಜೊತೆ ಹಾಡುತ್ತಾ ಬರ್ತಿದ್ದಾರೆ. ಈಗಾಗಲೇ ಕನ್ನಡದ ಸರಿಗಮಪ ಶೋನಲ್ಲಿ ರನ್ನರ್ ಅಪ್ ಆಗಿರುವ ಶಿವಾನಿಗೆ ಸರಿಗಮಪ ತಮಿಳು ಸೀಸನ್-5 ಟ್ರೋಫಿ ಸಿಗಬಾರದು ಎಂದು ಕೆಲವರು ಕಾಮೆಂಟ್ ಮಾಡುತ್ತಲೇ ಇದ್ದರು.
ತಮಿಳು ವೇದಿಕೆಯಲ್ಲಿ ಕನ್ನಡದ ಗಾಯಕಿ ಕ್ರೇಜ್ ಹೇಗಿತ್ತು ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಶಿವಾನಿ ಪರ್ಫಾರ್ಮೆನ್ಸ್ ವೀಡಿಯೋಗಳೆಲ್ಲಾ ವೈರಲ್ ಆಗಿತ್ತು. ತಮಿಳರು ಕೂಡ ಆಕೆಯ ಗಾಯನಕ್ಕೆ ಮನಸೋತಿದ್ದರು. ಎರಡ್ಮೂರು ಬಾರಿ ವೇದಿಕೆಯಲ್ಲಿ 'ಸೋಜುಗದ ಸೂಜು ಮಲ್ಲಿಗೆ' ಹಾಡು ಹಾಡುವಂತೆ ಮನವಿ ಮಾಡಿದ್ದಾರೆ. ಪ್ರತಿಬಾರಿ ತಮ್ಮ ಗಾಯನದಿಂದ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದರು.
ನಟಿ, ಗಾಯಕಿ ಆಂಡ್ರಿಯಾ ಜೆರೆಮಿಯಾ ಸೆಮಿಫೈನಲ್ ವೇದಿಕೆಗೆ ಅತಿಥಿಯಾಗಿ ಬಂದಿದ್ದರು. ಶಿವಾನಿ ಗಾಯನಕ್ಕೆ ಫಿದಾ ಆಗಿದ್ದರು. ಆಕೆ ಜೊತೆ ಆಲ್ಬಮ್ ಮಾಡುವ ಭರವಸೆ ನೀಡಿದ್ದಾರೆ. ಸರಿಗಮಪ ಗಾಯಕರ ಜೊತೆ ವಿದೇಶಗಳಲ್ಲಿ ಮ್ಯೂಸಿಕ್ ಕನ್ಸರ್ಟ್ ಮಾಡುವುದಾಗಿ ಜೀ ತಮಿಳು ವಾಹಿನಿ ಘೋಷಿಸಿದೆ. ಶಿವಾನಿ ಕೂಡ ತಂಡದ ಜೊತೆ ಸುತ್ತಾಡಲಿದ್ದಾರೆ. ಆ ಮೂಲಕ ತಮ್ಮ ಪ್ರತಿಭೆಯನ್ನು ಬೇರೆ ಬೇರೆ ದೇಶಗಳಲ್ಲಿ ಪ್ರದರ್ಶಿಸಲಿದ್ದಾರೆ.


Click it and Unblock the Notifications