ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಶೋಭಾ ಶೆಟ್ಟಿಗೆ ರಾಷ್ಟ್ರೀಯ ಗೌರವಪ್ರಶಸ್ತಿ
ಕನ್ನಡ ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ನಾಯಕಿಯಾಗಿ ಭಡ್ತಿ ಪಡೆದವರು ಶೋಭಾ ಶೆಟ್ಟಿ. ಸಹಜ ನಟನೆಯ ಮೂಲಕ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿರುವ ಶೋಭಾ ಶೆಟ್ಟಿ ಅವರು ರಾಷ್ಟ್ರೀಯ ಗೌರವ ಪ್ರಶಸ್ತಿ ಒಂದನ್ನು ಸ್ವೀಕರಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ' ಯಲ್ಲಿ ನಾಯಕಿ ತಂಗಿ ತನು ಆಗಿ ನಟಿಸಿದ್ದ ಶೋಭಾ ಶೆಟ್ಟಿ ನಂತರದ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ ಮಿಂಚಿದ್ದೇ ಹೆಚ್ಚು. ಹೌದು, ತೆಲುಗು ಕಿರುತೆರೆಯಲ್ಲಿ ಬಹಳಷ್ಟು ಒಳ್ಳೆಯ ಅವಕಾಶಗಳು ಬಂದಿದ್ದರಿಂದ ಆ ಕಡೆಗೆ ಹೊರಟ ಶೋಭಾ ಶೆಟ್ಟಿ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.

ತೆಲುಗು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7'ರ ಸ್ಪರ್ಧಿಯಾಗಿಯೂ ಈಕೆ ಕಾಣಿಸಿಕೊಂಡರು. ಅಪ್ಪಟ ಕನ್ನಡದ ಕುವರಿ ಒಬ್ಬರು ಬೇರೆ ಭಾಷೆಯಲ್ಲಿ ಗುರುತಿಸಿಕೊಳ್ಳುವುದೇ ಒಂದು ಚಾಲೆಂಜಿಗ್ ವಿಷಯ. ಅದರಲ್ಲೂ ಅಲ್ಲಿಯ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿ ಆಗಿ ಹೋಗುವುದು ಸಣ್ಣ ಮಾತಲ್ಲ. ನಟಿ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ತೆಲುಗಿನಲ್ಲಿ ಬಹಳ ಅದ್ಭುತವಾಗಿ ಸ್ಪರ್ಧಿಸಿದ್ದು ಇತರೇ ಸ್ಪರ್ಧಿಗಳಿಗೆ ಟಫ್ ಫೈಟ್ ಅನ್ನು ಕೊಟ್ಟಿದ್ದರು.
ಬಿಗ್ ಬಾಸ್ ಮನೆಯಿಂದ 5ನೇ ವಾರವೇ ಶೋಭಾ ಶೆಟ್ಟಿ ಹೊರ ಬರುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರೂ ಸಹ ಈಕೆ ತನ್ನ ಸ್ಪೋರ್ಟ್ಸ್ ಮ್ಯಾನ್ ಸ್ಪಿರಿಟನ್ನು ಬಿಡದ ಕಾರಣ ಬಿಗ್ ಬಾಸ್ ಕೊನೆಯ ವಾರದವರೆಗೂ ಮನೆಯಲ್ಲಿ ಇದ್ದರು. ಈ ಮೂಲಕ ಟಾಪ್ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿ ಶೋಭಾ ಕಾಣಿಸಿಕೊಂಡಿದ್ದರು. ಫಿನಾಲೆಗೆ ಒಂದು ವಾರ ಇದೆ ಎನ್ನುವಾಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಇವರಿಗೆ ಹೊಸ ಸರ್ಪ್ರೈಸ್ ಕಾದಿತ್ತು ಎಂದು ಹೇಳಬಹುದು.
ಹೌದು, ಈಕೆ ನಟಿಸಿದ್ದ 'ಕಾರ್ತಿಕ ದೀಪ' ಎಂಬ ಧಾರಾವಾಹಿಯ ಮೋನಿತಾ ಎಂಬ ಪಾತ್ರಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ದೊರಕಿದೆ. ಈ ಧಾರಾವಾಹಿಯಲ್ಲಿ ಖಳನಾಯಕಿ ಮೋನಿತಾ ಆಗಿ ಕಾಣಿಸಿಕೊಂಡ ಇವರ ನಟನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಈಕೆಯ ಯಶಸ್ಸಿನತ್ತ ಒಂದು ಮೆಟ್ಟಿಲು ಹೆಚ್ಚಿಸಿದೆ ಎಂದು ಹೇಳಬಹುದು.

ಅಂದಹಾಗೆ ನಟಿ ಶೋಭಾ ಶೆಟ್ಟಿಯವರು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇದ್ದು, ಈ ಸಂಭ್ರಮದ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಅಭಿಮಾನಿಗಳು ಇವರಿಗೆ ಶುಭ ಕೋರಿ ಹಾರೈಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಕನ್ನಡದಿಂದ ತೆಲುಗಿಗೆ ಹೋಗಿ ಬಹಳಷ್ಟು ಹೆಸರು ಮಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ಈ ನಟಿಗೆ ಇನ್ನೂ ಬಹಳಷ್ಟು ಅವಕಾಶಗಳು ಮುಂದೆ ಖಂಡಿತ ಬರಲಿದ್ದು ನಾವೆಲ್ಲ ಕಾದು ನೋಡಬೇಕಿದೆ.


Click it and Unblock the Notifications











