ಬೇಗ ಮದ್ವೆ, ಮಕ್ಳು ಮಾಡ್ಕೊಬೇಕು; ಬ್ರೇಕ್ ತಗೊಬೇಕು ಅಂತ ಪ್ರೆಗ್ನೆನ್ಸಿ ತಡ ಮಾಡಿಬಿಟ್ಟೆ; ನೇಹಾ
ಇತ್ತೀಚಿನ ವರ್ಷಗಳಲ್ಲಿ ಉದ್ಯೋಗಕ್ಕಾಗಿ ತಾಯ್ತನವನ್ನು ಮುಂದೂಡುವುದು ಹೆಚ್ಚಾಗುತ್ತಿದೆ. ಕರಿಯರ್ ಮೊದ್ಲು, ಲೈಫ್ ಅಲ್ಲಿ ಸೆಟ್ಲ್ ಆಗಬೇಕು, ಆಮೇಲೆ ಮದುವೆ, ಬೇಕಿದ್ದರೆ ಮಗು ಎಂದು ಯೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬಣ್ಣದಲೋಕದಲ್ಲಿ ಇರುವವರು ಈ ಬಗ್ಗೆ ಬಹಳ ಆಲೋಚಿಸುತ್ತಾರೆ. ತಾಯಿ ಆಗಿಬಿಟ್ಟರೆ ಗ್ಲಾಮರ್ ಕಮ್ಮಿ ಆಗಿಬಿಡುತ್ತೆ ಎಂದು ಭಯಪಡುವವರು ಇದ್ದಾರೆ.
ವೃತ್ತಿ ಹಾಗೂ ತಾಯ್ತನ ಎಂದು ಬಂದಾಗ ವೃತ್ತಿಗೆ ಹೆಚ್ಚು ಜನ ಮೊದಲ ಆದ್ಯತೆ ಕೊಡುವ ಜಮಾನ ಇದು. ಮಕ್ಕಳನ್ನು ಸಾಕುವುದು ಕಷ್ಟ ಎಂದು ಭಾವಿಸುವವರು ನಮ್ಮ ನಡುವೆ ಇದ್ದಾರೆ. ಕನ್ನಡ ಕಿರುತೆರೆ ನಟಿ ನೇಹಾ ರಾಮಕೃಷ್ಣ ಒಂದೂವರೆ ವರ್ಷದ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ತಮ್ಮ ತಾಯ್ತನವನ್ನು ನೇಹಾ ಸಂಭ್ರಮಿಸುತ್ತಿದ್ದಾರೆ. ನಟನೆಯಿಂದ ಬ್ರೇಕ್ ಪಡೆಯಬೇಕು ಎನ್ನುವ ಕಾರಣಕ್ಕೆ ತಾವು ಪ್ರೆಗ್ನೆನ್ಸಿ ಮುಂದೂಡಿದ್ದಾಗಿ ಒಪ್ಪಿಕೊಂಡಿದ್ದಾರೆ. SumanTv Kannada ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

8 ವರ್ಷಗಳ ಹಿಂದೆ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಜೊತೆ ಹಸೆಮಣೆ ಏರಿದ್ದರು. 2024, ಅಕ್ಟೋಬರ್ 30ರಂದು ಹೆಣ್ಣು ಮಗುವಿಗೆ ದಂಪತಿ ಜನ್ಮ ನೀಡಿದ್ದರು. ಮಗಳಿಗೆ ಶಾರದಾ ಎಂದು ನಾಮಕರಣ ಮಾಡಿದ್ದಾರೆ. ಮಗಳಿಗೆ ಒಂದೂವರೆ ವರ್ಷ ಆಗಿದ್ದರೂ ಎದೆಹಾಲು ಉಣಿಸುವುದನ್ನು ನಿಲ್ಲಿಸಿಲ್ಲ ಎಂದು ನೇಹಾ ಹೇಳಿದ್ದಾರೆ. ನಾರ್ಮಲ್ ಡೆಲಿವರಿ ಆಗಬೇಕು ಎಂದು ವೈದ್ಯರು ಹೇಳಿದ್ದನ್ನೆಲ್ಲಾ ಪಾಲಿಸಿದ್ದೆ, ಕೊನೆಗೆ ನಾರ್ಮಲ್ ಡೆಲಿವರಿ ಆಯ್ತು ಎಂದು ವಿವರಿಸಿದ್ದಾರೆ.
ಮದುವೆಗೂ ಮುನ್ನ ಬೇರೆಯವರ ಮಕ್ಕಳು ಅಳುವುದು ನೋಡಿದಾಗ ನನ್ನಿಂದ ಇದು ಸಾಧ್ಯವಿಲ್ಲ. ಮಕ್ಕಳು ಬೇಡಪ್ಪಾ ಎಂದೇ ಕೆಲವರು ಭಾವಿಸುತ್ತಾರೆ. ನಾನು ಕೂಡ ಅದೇ ರೀತಿ ಅಂದುಕೊಂಡಿದ್ದೆ ಎಂದು ನೇಹಾ ಹೇಳಿದ್ದಾರೆ. ಯಾಕೆ ಇವರಿಗೆಲ್ಲಾ ಮಕ್ಕಳು, ಈ ಸಮಸ್ಯೆ ಯಾಕೆ ಅಂತ ಭಾವಿಸಿದ್ದೆ.. ಬಟ್ ಐಯಾಮ್ ಸ್ವಾರಿ.. ಅದೆಲ್ಲಾ ಒಂದು ಕಡೆ ಆದ್ರೆ, ಖುಷಿ ಕೊಡುವ ಸಂಗತಿ ಸಾಕಷ್ಟಿದೆ. ಅದನ್ನು ವರ್ಣಿಸಲು ಸಾಧ್ಯವಿಲ್ಲ. ಅದನ್ನು ಅನುಭವಿಸಿದರೆ ಅರ್ಥವಾಗುತ್ತದೆ. ಮತ್ತೊಂದು ಮಗು ಯಾವಾಗ? ಎನ್ನುವ ಪ್ರಶ್ನೆಗೆ ಖಂಡಿತ ಆ ಬಗ್ಗೆ ಯೋಚಿಸಬೇಕಿದೆ ಎಂದು ನೇಹಾ ವಿವರಿಸಿದ್ದಾರೆ.
ಎಜುಕೇಷನ್ ಬಹಳ ಕಾಸ್ಟ್ಲಿ ಆಗಿಬಿಟ್ಟಿದೆ. ದೊಡ್ಡ ಹೈಫೈ ಸ್ಕೂಲ್‌ಗೆ ಸೇರಿಸುವ ಆಲೋಚನೆ ಇಲ್ಲ. ಪ್ರತಿ ವರ್ಷ ಶಾಲೆ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಹೇಗೆ ಎಂದು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ನೀನು ಇದು ನೋಡ್ಕೊ, ನಾನು ಇದು ನೋಡ್ಕೊ ಅಂತ ಚಂದನ್‌ಗೆ ಹೇಳಿಬಿಟ್ಟಿದ್ದೀನಿ ಎಂದು ನೇಹಾ ತಿಳಿಸಿದ್ದಾರೆ. ಮಗಳನ್ನು ಊರೂರು ಸುತ್ತಿಸುವ ಆಸೆಯಿದೆ. ಚೆನ್ನಾಗಿ ಓದುವುದರ ಜೊತೆಗೆ ಮಗಳು ಬೇರೆ ಬೇರೆ ಊರು, ದೇಶ ಸುತ್ತಿ ಸಾಕಷ್ಟು ಕಲಿಯಬೇಕು ಎಂದು ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ಹೇಳ್ತಿದ್ರು. ಬೇಗ ಮದುವೆ ಆಗಿ ಮಕ್ಕಳು ಮಾಡಿಕೊಂಡು ಮತ್ತೆ ನಾರ್ಮಲ್ ಲೈಫ್‌ಗೆ ವಾಪಸ್ ಬರಬೇಕು, ಬ್ಯಾಕ್ ಟು ಶೇಪ್, ಬ್ಯಾಕ್ ಟು ವರ್ಕ್ ಅಂತ. ಅದು ಬಹಳ ನಿಜ. ಈಗಿನ ಜನರೇಷನ್ ಸ್ಪರ್ಧೆಗೆ ಬಿದ್ದು ವೈಯಕ್ತಿಕ ಜೀವನ ಮರೆತುಬಿಟ್ಟಿದ್ದೇವೆ. ಸಾಧನೆ ಮಾಡಬೇಕು ನಿಜ. ಆದರೆ ವೈಯಕ್ತಿಕ ಜೀವನ ಕೂಡ ಮುಖ್ಯ. ನಾನು ಕೆಲಸದಿಂದ ಬ್ರೇಕ್ ತೆಗೆದುಕೊಂಡಿಲ್ಲ. 8-9ನೇ ತಿಂಗಳು ಗರ್ಭಿಣಿ ಆಗಿದ್ದಾಗಲೂ ಕೆಲಸ ಮಾಡ್ತಿದ್ದೆ. ಮಗಳಿಗೆ 10 ತಿಂಗಳು ತುಂಬಿದ ಬಳಿಕ ಮತ್ತೆ ಕೆಲಸ ಮಾಡಲು ಆರಂಭಿಸಿದೆ ಎಂದಿದ್ದಾರೆ. ಡೆಲಿವರಿ ಆಗಿ 3 ತಿಂಗಳು ಓಕೆ. ಬಳಿಕ ದಪ್ಪ ಆಗಿಬಿಟ್ಟೆ. ಯಾಕೆ ಅಂತ ಗೊತ್ತಾಗಲಿಲ್ಲ. ಕೆಲವರು ನನ್ನ ಗುರ್ತಿಸುತ್ತಿರಲಿಲ್ಲ ಎಂದು ನೇಹಾ ವಿವರಿಸಿದ್ದಾರೆ.
ಮಕ್ಕಳು ಮೊದಲ 4 ವರ್ಷ ಮಾತ್ರ ಅಪ್ಪ, ಅಮ್ಮನಿಗೆ ಬಹಳ ಡಿಪೆಂಡ್ ಆಗಿರುತ್ತಾರೆ. ಬಳಿಕ ನಿಧಾನವಾಗಿ ಶಾಲೆ, ಸ್ನೇಹಿತರು ಅಂತ ಅವರ ಪ್ರಪಂಚ ದೊಡ್ಡದಾಗುತ್ತಾ ಹೋಗುತ್ತೆ. ಎಲ್ಲದಕ್ಕೂ ನಾವೇ ಬೇಕು ಅನ್ನಲ್ಲ. ನಟನೆಯಿಂದ ಬ್ರೇಕ್ ತಗೊಬೇಕು ಎನ್ನುವ ಕಾರಣಕ್ಕೆ ನಾನು ಪ್ರಗ್ನೆನ್ಸಿ ತಡ ಮಾಡ್ಕೊಂಡುಬಿಟ್ಟೆ. ಇವತ್ತಿಗೆ ಆ ರೀತಿ ಮಾಡಬಾರದಿತ್ತು. ಸ್ವಲ್ಪ ಬೇಗ ಮಾಡ್ಕೊಬೇಕಿತ್ತು ಅನ್ಸುತ್ತೆ. 30 ವರ್ಷಕ್ಕಿಂತ ಮುಂಚೆ ಮಗು ಮಾಡಿಕೊಂಡ್ರೆ ಒಳ್ಳೆದು ಅಂತಾರೆ. ಅದು ನಿಜ. 35ರ ನಂತರ ಕೊಂಚ ಸಮಸ್ಯೆ ಆಗುತ್ತದೆ ಎಂದು ನೇಹಾ ಹೇಳಿದ್ದಾರೆ.


Click it and Unblock the Notifications