ಕಿರುತೆರೆ ನಟಿ ಶ್ರುತಿಗೆ ಚಾಕು ಇರಿತ ಪ್ರಕರಣ ; ಮನೆಗೆ ಬಾರದೇ ಪಾರ್ಟಿ ಪಬ್ ಅಂತ ಸುತ್ತಾಡ್ತಿದ್ಲು ಎಂದ ಪತಿ
ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುವುದು ಸಹಜ. ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಇದೆ.
ಜೋಡಿಯ ನಡುವೆ ವಾದ ವಿವಾದಗಳಾಗಿ ರಾದ್ಧಾಂತವಾಗಿದ್ದು ಇದೆ. ಇದಕ್ಕೆ ಅಮೃತಧಾರೆಯಲ್ಲಿ ಅಭಿನಯಿಸಿದ್ದ ಶ್ರುತಿ ಅಲಿಯಾಸ್ ಮಂಜುಳಾ ಅವರ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ.

ಹೌದು, ಅನೇಕರಿಗೆ ಗೊತ್ತಿರುವಂತೆ.. ಈಗಾಗಲೇ ಸುದ್ದಿಯಾದಂತೆ.. ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದ್ದ ಶ್ರುತಿ ಅಲಿಯಾಸ್ ಮಂಜುಳಾ ಅವರ ಮೇಲೆ ಅವರ ಪತಿ ಪರಮೇಶ್ವರ ಅಮರೇಶ್ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. 20 ವರ್ಷ ಜೊತೆಯಲ್ಲಿ ಇದ್ದರು ಕೂಡ ಪತ್ನಿಯ ಶೀಲ ಶಂಕಿಸಿ ಚಾಕು ಇರಿದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸದ್ಯ ಶ್ರುತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರ ನಡುವೆ ಇದೀಗ ಪೊಲೀಸರ ವಿಚಾರಣೆ ವೇಳೆ ಅಮರೇಶ್ ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ, ಕೊಲೆ ಮಾಡಲು ಮುಂದಾಗಿದ್ದೇಕೆ ಎಂದು ಕಾರಣವನ್ನು ಕೂಡ ಹೇಳಿದ್ದಾರೆ ಎಂದು ಟಿವಿ9 ಕನ್ನಡ ಮತ್ತು ಪಬ್ಲಿಕ್ ಟಿವಿ ಸೇರಿದಂತೆ ಹಲವು ಮಾಧ್ಯಮಗಳು ವರದಿಯನ್ನು ಮಾಡಿವೆ. ಪತ್ನಿಯ ವಿರುದ್ದ ಪತಿ ಅಮರೇಶ್ ಹಲವು ಗಂಭೀರ ಆರೋಪಗಳನ್ನು ಕೂಡ ಮಾಡಿದ್ದಾರೆ ಎಂದು ಈ ವರದಿಗಳಲ್ಲಿ ಹೇಳಲಾಗಿದೆ.
ಆ ಪ್ರಕಾರ ನಾವು 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಅಮರೇಶ್ ಹೇಳಿದ್ದಾರೆ. ಶ್ರೀನಗರದಲ್ಲಿ ಪ್ಲಾಟ್ ಒಂದನ್ನು 27 ಲಕ್ಷ ರೂಪಾಯಿ ಕೊಟ್ಟು ಲೀಸ್ಗೆ ಹಾಕಿಕೊಂಡು ವಾಸ ಮಾಡ್ತಿದ್ವಿ ಎಂದು ಹೇಳಿರುವ ಶ್ರುತಿ ಅವರ ಪತಿ ಇಬ್ಬರು ಹೆಣ್ಣು ಮಕ್ಕಳಿಗೆ ಕೊನೆ ಪಕ್ಷ ತಾಯಿಯ ಪ್ರೀತಿಯನ್ನು ಕೂಡ ಅವಳು ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದಾರೆ. ಮನೆ ಜವಾಬ್ದಾರಿಯನ್ನೆಲ್ಲ ನಾನೇ ನೋಡಿಕೊಳ್ತಿದ್ದೆ ಅವಳು ಮಾತ್ರ ಶೂಟಿಂಗ್ ಅದು ಇದು ಎಂದು ನೆಪ ಹೇಳಿ ಸರಿಯಾಗಿ ಮನೆಗೆ ಬಾರದೇ ಪಾರ್ಟಿ ಪಬ್ ಅಂತ ಸುತ್ತಾಡ್ತಿದ್ಲು ಎಂದು ಕಿಡಿ ಕಾರಿದ್ದಾರೆ.
ಇನ್ನು ಹೊರಗಡೆ ಹೋದರೆ 15 ದಿನ ಆದರೂ ಕೂಡ ಮನೆಗೆ ಬರುತ್ತಿರಲಿಲ್ಲ ಎಂದು ಹೇಳಿರುವ ಅಮರೇಶ್, ಯಾರಿಗೂ ಹೇಳದೇ 15 ದಿನ ಪ್ರಯಾಗ್ ರಾಜ್ನಲ್ಲಿ ನಡೆದ ಕುಂಭಮೇಳಕ್ಕೆ ಅವಳು ಹೋಗಿದ್ದಳು ಎಂದು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಕೂಡ ಆಗಿತ್ತು ಎಂದು ಹೇಳಿದ್ದಾರೆ.

ಮುಂದುವರೆದು ಮನೆಗೆ ಬಾರದಿದ್ದಾಗ ಫೋನ್ ಮಾಡಿದರೆ ಧಮ್ಕಿ ಹಾಕುತ್ತಿದ್ದಳು ಎಂದು ಆರೋಪ ಮಾಡಿರುವ ಅಮರೇಶ್, 25 ಲಕ್ಷ ಹಣ ನೀಡಿ ಆಪಾರ್ಟ್‌ಮೆಂಟ್‌ನಲ್ಲಿ ಮನೆ ಭೋಗ್ಯಕ್ಕೆ ಹಾಕಿಕೊಂಡಿದ್ದೇ ಆದರೆ ಆ ಭೋಗ್ಯಕ್ಕಿದ್ದ ಮನೆಯನ್ನ ಖಾಲಿ ಮಾಡಿ ಹಣ ತೆಗೆದುಕೊಂಡು ಮನೆ ಬಿಡೋಣ ಅನ್ನೋದು ಅವಳ ಪ್ಲಾನ್ ಆಗಿತ್ತು ಎಂದು ಕೂಡ ಆರೋಪ ಮಾಡಿದ್ದಾರೆ.
ಹೀಗೆ ಅನೇಕ ಬಾರಿ ಜಗಳವಾಗಿ ದೂರವಾದ ನಂತರ, ಕಳೆದ ವಾರ ರಾಜಿ ಸಂಧಾನ ಇತ್ತು ಅದಾದ ನಂತರ ಕೂಡ ಆಕೆ ಬದಲಾಗಲಿಲ್ಲ ಎಂದು ಹೇಳಿರುವ ಅಮರೇಶ್ ಆಕೆಯನ್ನು ಕೊಲೆ ಮಾಡಿ ಇದಕ್ಕೆಲ್ಲ ಇತಿಶ್ರೀ ಹಾಡೋಣ ಅಂತಿದ್ದೆ. ಆದ್ರೆ ಕೊಲೆ ಮಾಡುವಾಗ ಕಾಲಿಗೆ ಬಿದ್ದು ಕ್ಷಮೆ ಕೇಳಿದಳು ಎಂದು ಹೇಳಿದ್ದಾರೆ. ನೀನು ಹೇಳಿದಂತೆಯೇ ನಾನು ಕೇಳುತ್ತೇನೆ, ಬದುಕುತ್ತೇನೆ, ಎಂದು ಕಾಲಿಗೆ ಬಿದ್ದಳು. ಹೆಂಡತಿ ಇನ್ಮೇಲಾದ್ರೂ ಬದಲಾಗ್ತಾಳೆ ಅಂತ ಕೊಲೆ ಮಾಡೋದನ್ನ ಬಿಟ್ಟು ಸುಮ್ಮನಾದೆ ಎಂದು ಪೊಲೀಸರ ಮುಂದೆ ಅಮರೇಶ್ ಹೇಳಿಕೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











