'ದೊರೆಸಾನಿ'ಯಾಗಿ ರಿಜೆಕ್ಟ್ ಆದ ಭೂಮಿಕಾಗೆ ಒಲಿದ 'ಭಾಗ್ಯಲಕ್ಷ್ಮೀ'
ನಟಿಸಬೇಕು ಎಂದು ಹಲವರಿಗೆ ಆಸೆ ಇರುತ್ತದೆ. ಆದರೆ, ಕಲೆ ಎಲ್ಲರ ಕೈ ಹಿಡಿಯುವುದಿಲ್ಲ. ಕೆಲವರಿಗೆ ಆಕಸ್ಮಿಕವಾಗಿ ಅವಕಾಶಗಳು ಒದಗಿ ಬಂದರೆ ಮತ್ತೆ ಕೆಲವರು ಕಷ್ಟ ಪಡಬೇಕಾಗುತ್ತದೆ.
ಕಲಾವಿದರಾಗಿರುವ ಪ್ರತಿಯೊಬ್ಬರೂ ಜೀವನದ ಒಂದಲ್ಲ ಒಂದು ಹಂತದಲ್ಲಿ ಕಷ್ಟವನ್ನು ಪಟ್ಟಿರುತ್ತಾರೆ. ಕಲಾವಿದರಾಗಿ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅವರ ಅಭಿಮಾನವನ್ನು ಗಳಿಸಲು ಸಾಕಷ್ಟು ಪ್ರಯತ್ನಗಳನ್ನು ಪಟ್ಟಿರುತ್ತಾರೆ.
ನಟಿಯಾಗುವ ಆಸೆ ಹೊತ್ತವರು ಅದೆಷ್ಟೋ ಜನ ನಟನೆಯಿಂದ ದೂರವೇ ಉಳಿದಿರುತ್ತಾರೆ. ಆದರೆ, ಕೆಲವರಷ್ಟೇ ಆಸೆಯನ್ನು ಪೂರೈಸಿಕೊಳ್ಳುತ್ತಾರೆ. ಅದರಲ್ಲಿ ಒಬ್ಬರು ಭೂಮಿಕಾ ರಮೇಶ್.

ಮುಗ್ಧತೆಯಿಂದ ಜನರ ಮನ ಗೆದ್ದ ಲಕ್ಷ್ಮೀ
ಭೂಮಿಕಾ ರಮೇಶ್.. ಈ ಹೆಸರು ಇತ್ತೀಚೆಗೆ ಬಹಳಷ್ಟು ಬಾರಿ ಕೇಳುತ್ತಿರಬಹುದು. ಇದಕ್ಕೆ ಕಾರಣ ಭಾಗ್ಯ ಲಕ್ಷ್ಮೀ ಧಾರಾವಾಹಿ. ಹೌದು..ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮೀಯ ನಿಜವಾದ ಹೆಸರೇ ಭೂಮಿಕಾ ರಮೇಶ್. ಕಿರುತೆರೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬಹಳ ಮುಗ್ಧತೆಯಿಂದ ನಟಿಸುತ್ತಾ ಎಲ್ಲರ ಮನ ಗೆದ್ದಿದ್ದಾರೆ. ಇಷ್ಟಕ್ಕೂ ಇವರಿಗೆ ಕಿರುತೆರೆಯ ಪಯಣ ಹೊಸತೇನೂ ಅಲ್ಲ. ಬಾಲ ಪ್ರತಿಭೆ ಎಂದರೂ ತಪ್ಪಾಗೋದಿಲ್ಲ. 'ಸೈ ಅಂಟೆ ಸೈ' ಎಂಬ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ 'ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್' ವೇದಿಕೆಯಲ್ಲೂ ಹೆಜ್ಜೆ ಹಾಕಿದ್ದರು.

ಒಲಿದು ಬಂದ 'ಭಾಗ್ಯಲಕ್ಷ್ಮೀ'
ಕಿರುತೆರೆಯಲ್ಲಿ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ನಟನೆಯನ್ನು ಆರಂಭಿಸಿದ್ದಾರೆ. ನಟನೆ ಆರಂಭಿಸಿದ ಮೊದಲ ಧಾರಾವಾಹಿಯಲ್ಲೇ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಆದರೆ 'ಭಾಗ್ಯಲಕ್ಷ್ಮೀ' ಧಾರಾವಾಹಿಗೂ ಮುನ್ನವೇ 'ದೊರೆಸಾನಿ' ಎಂಬ ಧಾರಾವಾಹಿಯಲ್ಲಿ ನಟಿಸಲು ಭೂಮಿಕಾ ರಮೇಶ್ ಆಡಿಷನ್‌ಗೆ ಬಂದಿದ್ದರು. ಆದರೆ, ತುಂಬಾ ಚಿಕ್ಕ ಹುಡುಗಿ ಎಂಬ ಸಿಲ್ಲಿ ಕಾರಣದಿಂದ ರಿಜೆಕ್ಟ್ ಆಗಿದ್ದರು. ರಿಜೆಕ್ಟ್ ಆಗಿದ್ದು ಒಂದು ರೀತಿಯಲ್ಲೇ ಒಳ್ಳೆಯದೇ ಆಯಿತೇನೋ. 'ಭಾಗ್ಯಲಕ್ಷ್ಮೀ' ಧಾರಾವಾಹಿಗೆ ನೇರವಾಗಿ ಸೆಲೆಕ್ಟ್ ಆದರು. ಬಿಸಿಎ ಓದುತ್ತಿರುವ ಭೂಮಿಕಾ ರಮೇಶ್ 'ಡಿಸೆಂಬರ್ 24' ಎಂಬ ಸಿನಿಮಾಗೂ ಬಣ್ಣಹಚ್ಚಿದ್ದಾರೆ.

ಅಕ್ಕ-ತಂಗಿ ಬೇರೆಯಾದರೇ..?
ಇನ್ನು 'ಭಾಗ್ಯಲಕ್ಷ್ಮೀ' ಧಾರಾವಾಹಿ ಇಷ್ಟು ದಿನ ಒಂದೇ ಧಾರಾವಾಹಿ ಆಗಿತ್ತು. ಆದರೆ ಇನ್ನು ಮುಂದೆ ಇದು ಎರಡು ಧಾರಾವಾಹಿಯಾಗಿ ಬೇರ್ಪಡುತ್ತಿದೆ. ನಾಳೆಯಿಂದ ಲಕ್ಷ್ಮೀ ಹಾಗೂ ಭಾಗ್ಯ ಇಬ್ಬರ ಕಥೆಯೂ ಬೇರೆ ಬೇರೆಯಾಗಿ ಪ್ರಸಾರವಾಗುತ್ತಿದೆ. ಅಕ್ಕಮ್ಮ ಭಾಗ್ಯಳ ಕಥೆ ಸಂಜೆ 7 ಗಂಟೆಗೆ ಪ್ರಸಾರವಾದರೆ, ಸಹೋದರಿ ಲಕ್ಷ್ಮೀ ಕಥೆ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಇದು ಧಾರಾವಾಹಿಯ ಇತಿಹಾಸದಲ್ಲೇ ಮೊದಲಾಗಿದ್ದು, ಪ್ರೇಕ್ಷಕರು ಒಂದೇ ಕಥೆಯ ಎರಡು ಧಾರಾವಾಹಿಯನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಗೊಂದಲದ ಸ್ಥಿತಿಯಲ್ಲಿ ಲಕ್ಷ್ಮೀ
'ಭಾಗ್ಯಲಕ್ಷ್ಮೀ' ಧಾರಾವಾಹಿ ಸದ್ಯ ಭಾರೀ ಕುತೂಹಲವನ್ನು ಮೂಡಿಸಿದೆ. ವೈಷ್ಣವ್ ಹಾಗೂ ಲಕ್ಷ್ಮೀಯ ಮದುವೆಯ ಹಂತ ಹತ್ತಿರವಾದಷ್ಟೂ ವೀಕ್ಷಕರ ಕುತೂಹಲ ಹೆಚ್ಚಾಗಿದೆ. 'ಭಾಗ್ಯ ಲಕ್ಷ್ಮಿ' ಸದ್ಯ ರೋಚಕ ಹಂತ ತಲುಪಿದೆ. ವೈಷ್ಣವ್ ಮತ್ತು ಲಕ್ಷ್ಮಿ ಮದುವೆ ಎಲ್ಲಾ ಸಿದ್ಧತೆಗಳು ನಡೆದಿವೆ. ಆದರೆ, ವೈಷ್ಣವ್‌ಗೆ ಈ ಮದುವೆ ಇಷ್ಟವಿಲ್ಲ. ಹೇಗಾದರೂ ಈ ಮದುವೆಯನ್ನು ನಿಲ್ಲಿಸಿ, ಕೀರ್ತಿಯನ್ನು ಮದುವೆಯಾಗಬೇಕು ಎಂಬುದು ಆತನ ಆಸೆ. ವೈಷ್ಣವ್ ತಾಯಿ ಕಾವೇರಿಗೆ ಲಕ್ಷ್ಮಿಯೇ ತನ್ನ ಸೊಸೆಯಾಗಬೇಕು ಎನ್ನುವ ಹಠ. ಆದರೆ, ಈ ಬಗ್ಗೆ ಭಾಗ್ಯಳಿಗೆ ಅರಿವೇ ಇಲ್ಲ. ಸದ್ಯ ಎಲ್ಲರೂ ಮದುವೆ ಮಂಟಪಕ್ಕೆ ಬಂದಿದೆ. ಸದ್ಯ ಅಕ್ಕಮ್ಮನ ಬದುಕು, ವೈಷ್ಣವ್ ಪ್ರೀತಿ ಇದೆರಡರ ಮಧ್ಯೆದಲ್ಲಿ ಸಿಲುಕಿರುವ ಲಕ್ಷ್ಮೀಯ ಸ್ಥಿತಿ ಯಾರಿಗೂ ಹೇಳಲಾಗದು.


Click it and Unblock the Notifications











