ದಿಲೀಪ್ ರಾಜ್ ಅಗಲಿಕೆ ಬೆನ್ನಲ್ಲೇ ಸಂಭಾಷಣೆಗಾರ ಟಿ. ಜಿ. ನಂದೀಶ್ ಹೃದಯಾಘಾತದಿಂದ ವಿಧಿವಶ

ನಟ, ನಿರ್ಮಾಪಕ ದಿಲೀಪ್ ರಾಜ್ ಅಗಲಿಕೆಯ ನೋವು ಮಾಸುವ ಮುನ್ನ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡ ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆಗಾರರಾಗಿ ಗುರ್ತಿಸಿಕೊಂಡಿದ್ದ ಟಿ. ಜಿ ನಂದೀಶ್(37) ಇಂದು(ಮೇ 20) ನಿಧನರಾಗಿದ್ದಾರೆ. ಹೃದಯಾಘಾತದಿಂದ ಮಧ್ಯಾಹ್ನ ಕೊನೆಯುಸಿರೆಳೆದಿದ್ದು ಕುಟುಂಬಸ್ಥರು, ಆಪ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಸಾಹಿತ್ಯ ಹಾಗೂ ಸಿನಿಮಾ, ಕಿರುತೆರೆ ಬರವಣಿಗೆಯಲ್ಲಿ ಟಿ. ಜಿ ನಂದೀಶ್ ಬಹಳ ಆಸಕ್ತಿ ಹೊಂದಿದ್ದರು. ಕೆಲ ಸಿನಿಮಾಗಳಿಗೂ ಬರಹಗಾರರಾಗಿ ಕೆಲಸ ಮಾಡಿದ್ದರು. ತೀರ್ಥಹಳ್ಳಿ ನಂದೀಶ್ ಇತ್ತೀಚಿನ ವರ್ಷಗಳಲ್ಲಿ ತಮ್ಮ ಹುಟ್ಟೂರಿನಲ್ಲೇ ನೆಲೆಸಿದ್ದರು. ತಮ್ಮದೇ ತೋಟದಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಂದಲೇ ತಮ್ಮ ಸಿನಿಮಾ, ಕಿರುತೆರೆ ಬರವಣಿಗೆ ಮುಂದುವರೆಸಿದ್ದರು. ವಾರದ ಹಿಂದೆ ನಟ, ನಿರ್ಮಾಪಕ ದಿಲೀಪ್ ರಾಜ್ ಅಗಲಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದರು. ನಂದಿ ರೈಟ್ಸ್ ಹೆಸರಿನಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಬರಹಗಳ ಮೂಲಕ ಗಮನ ಸೆಳೆದಿದ್ದರು. ಅವರ ಬರವಣಿಗೆಗೆ ದೊಡ್ಡ ಅಭಿಮಾನಿ ಬಳಗವಿತ್ತು. ಕ್ರಿಕೆಟ್ ಬಗ್ಗೆ ಕೂಡ ಸೊಗಸಾಗಿ ಬರೆಯುತ್ತಿದ್ದರು.

Kannada Writer T G Nandish Passes Away of Heart Attack Days After Mourning Actor Dileep Raj

ನಂದೀಶ್ ಅಗಲಿಕೆಗೆ ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ನುಡಿನಮನ ಸಲ್ಲಿಸುತ್ತಿದ್ದಾರೆ. ಅವರ ಸಾವಿಗೆ ದಿಗ್ಭ್ರಾಂತಿ ವ್ಯಕ್ತಪಡಿಸುತ್ತಿದ್ದಾರೆ. ನಗರದ ಜಂಜಾಟ, ಒತ್ತಡದ ಬದುಕಿನಿಂದ ಕೆಲವರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎನ್ನುವ ಮಾತಿದೆ. ಆದರೆ ತೀರ್ಥಹಳ್ಳಿಯ ಅಚ್ಚ ಹಸುರಿನ ನಡುವೆ ಮಡದಿ, ಮಕ್ಕಳು, ಅಮ್ಮನ ಜೊತೆ ಹಾಯಾಗಿ ಜೀವನ ಸಾಗಿಸುತ್ತಿದ್ದ ನಂದೀಶ್ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಹೇಗೆ ಸಾಧ್ಯ ಎಂದು ಕೆಲವರು ನೋವು ತೋಡಿಕೊಂಡಿದ್ದಾರೆ. ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಾಗ ಗ್ಯಾಸ್ಟ್ರಿಕ್ ಎಂದು ತಲೆ ಕೆಡಿಸಿಕೊಂಡಿರಲಿಲ್ಲ. ಬಳಿಕ ಆಗಿದ್ದೇ ಬೇರೆ.

ಚಿತ್ತಾರ ಮ್ಯಾಗಜೀನ್‌ನಲ್ಲಿ ಕೆಲ ವರ್ಷ ನಂದೀಶ್ ಕೆಲಸ ಮಾಡಿದ್ದರು. 'ಒಂದಂಕೆ ಕಾಡು' ಹಾಗೂ 'ದೂರದರ್ಶನ' ಸಿನಿಮಾಗಳಿಗೆ ಸಂಭಾಷಣೆ ಬರೆದು ಗೆದ್ದಿದ್ದರು. ಕೋವಿಡ್ ಬಳಿಕ ಹುಟ್ಟೂರಿಗೆ ತೆರಳಿದ್ದರು. ತಮ್ಮ ಮಡದಿಯನ್ನು ತೀರ್ಥಹಳ್ಳಿಯಲ್ಲೇ ಇರಲು ಒಪ್ಪಿಸಿದ್ದರು. ಇಂದು ಮಧ್ಯಾಹ್ನ ಹೃದಯಾಘಾತ ಸಂಭವಿಸಿ, ಬಳಿಕ ಚಿತಿಕ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ವಿಪರ್ಯಾಸ ಅಂದ್ರೆ, ಇಂದು ಬೆಳಗ್ಗೆ ಕೂಡ ಫೇಸ್‌ಬುಕ್‌ನಲ್ಲಿ ನಂದೀಶ್ ಪೋಸ್ಟ್ ಮಾಡಿದ್ದರು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಲವಲವಿಕೆಯಿಂದ ಇದ್ದವರು ಹೀಗೆ ದಿಢೀರನೆ ದೂರಾಗಿರುವುದು ಆಘಾತ ತಂದಿದೆ.

ಕುಟುಂಬ ಮೂಲಗಳ ಮಾಹಿತಿ ಪ್ರಕಾರ ನಾಳೆ (ಮೇ 21, ಗುರುವಾರ) ಮಧ್ಯಾಹ್ನ 12:30ಕ್ಕೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದಲ್ಲಿ ನಂದೀಶ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ. ಕುಟುಂಬಕ್ಕೆ ಆಧಾರವಾಗಿದ್ದ ನಂದೀಶ್ ಅಗಲಿಕೆ ಬರಿಸಲಾಗದ ನಷ್ಟ.

ದಿಲೀಪ್ ರಾಜ್ ಅಗಲಿಕೆ ಬಗ್ಗೆ ನಂದೀಶ್ ಫೇಸ್‌ಬುಕ್ ಪೋಸ್ಟ್ ವೈರಲ್ ಆಗ್ತಿದೆ. "ದಿಲೀಪ್ ರಾಜ್ ಅವರು ಇನ್ನಿಲ್ಲ ಅನ್ನೋ ಸುದ್ದಿ ಈ ಕ್ಷಣಕ್ಕೂ ಅರಗಿಸಿಕೊಳ್ಳಲಾಗದ ಸತ್ಯ. ಸದಾ ಕಲೆಗೆ‌‌ ಮಿಡಿಯುತ್ತಿದ್ದ ಆ ಕಲಾವಿದನಿಗೆ ಹೃದಯಾಘಾತವಾಯಿತು ಅನ್ನೋ ಸುದ್ದಿ ಸುಳ್ಳಾಗಬಾರದ ಅನ್ನಿಸುತ್ತಿದೆ" ಎಂದು ಪೋಸ್ಟ್ ಮಾಡಿದ್ದರು. ಧೃತಿ ಕ್ರಿಯೇಷನ್ಸ್ ಮೂಲಕ 'ಪಾರು' ಹಾಗೂ 'ರಾಧಾ ಕಲ್ಯಾಣ' ಧಾರಾವಾಹಿಗಳಿಗೆ ಕೆಲಸ ಮಾಡಿದ್ದಾಗಿ ತಿಳಿಸಿದ್ದರು.

ದಿಲೀಪ್ ಸರ್ ಅವರ ನೆರಳಂತೆ ಇದ್ದವರು ಅವರ ಮಡದಿ ವಿದ್ಯಾ ಮೇಡಂ. ಜೋಡೆತ್ತಿನಂತೆ ಬದುಕಿನ ಪಥವನ್ನು ಒಟ್ಟೊಟ್ಟಿಗೆ ಕಟ್ಟಿಕೊಂಡವರು. ಅವರಿಬ್ಬರೊಡನೆ ಕುಳಿತು ಹರಟಿದ್ದೇವೆ, ಜೊತೆಗೆ ಊಟ ಮಾಡಿದ್ದೇವೆ. ಈಗ ದಿಲೀಪ್ ರಾಜ್ ಅವರಿಲ್ಲ ಅನ್ನೋ ಸಂಕಟ. ಭಗವಂತ ವಿದ್ಯಾ ಮೇಡಂ ಅವರಿಗೆ, ಅವರ ಮಕ್ಕಳಿಗೆ ಈ ಸಂಕಟ ದಾಟುವ ಧೈರ್ಯ ನೀಡಲಿ ಎಂಬುದಷ್ಟೇ ಪ್ರಾರ್ಥನೆ ಎಂದು ಪೋಸ್ಟ್ ಮಾಡಿದ್ದರು. ಆದರೆ ಈಗ ಅದೇ ನಂದೀಶ್ ಕಾಲನ ಕರೆಗೆ ಓಗೊಟ್ಟು ಹೊರಟುಬಿಟ್ಟಿದ್ದಾರೆ.

Read more about: kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X