'ಕನ್ನಡದ ಕೋಟ್ಯಧಿಪತಿ' ತಂಡದ ಈ ನಡೆ ನಿಜಕ್ಕೂ ಮನ ಮುಟ್ಟುವಂಥದ್ದು.!
ಕಷ್ಟ ಅಂದ್ರೆ ಈಗಿನ ಕಾಲದಲ್ಲಿ ಯಾರು ಸಹಾಯ ಮಾಡ್ತಾರೆ ಹೇಳಿ.? ಎಲ್ಲರಿಗೂ ಅವರವರ ಕಷ್ಟಗಳೇ ದೊಡ್ಡದು ಎನ್ನುವ ಈ ಯುಗದಲ್ಲಿ ಇನ್ನೊಬರಿಗೆ ಸಹಾಯ ಮಾಡುವ ಮನಃಸ್ಥಿತಿ ಹೊಂದಿರುವವರು, ಸಹಾಯ ಹಸ್ತ ಚಾಚುವವರು ತೀರಾ ಅಪರೂಪ. ಅಂತಹ ಅಪರೂಪದ ಘಟನೆಗೆ 'ಕನ್ನಡದ ಕೋಟ್ಯಧಿಪತಿ' ವೇದಿಕೆ ಸಾಕ್ಷಿ ಆಗಿದೆ.
ಹೌದು, 'ಕನ್ನಡದ ಕೋಟ್ಯಧಿಪತಿ-4' ಮುಗಿಯುವ ಹಂತ ತಲುಪಿದೆ. ಈ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವೀಕೆಂಡ್ ನಲ್ಲಿ ಒಂದು ಮನಮುಟ್ಟುವ ಕಾರ್ಯ ನಡೆಯಿತು.
ಇತ್ತೀಚೆಗಷ್ಟೇ 'ಕನ್ನಡದ ಕೋಟ್ಯಧಿಪತಿ' ಹಾಟ್ ಸೀಟ್ ಮೇಲೆ ಮೈಸೂರು ಮೂಲದ ಟೀಚರ್ ರಮ್ಯಾ ಎನ್ನುವವರು ಕೂತಿದ್ದರು. ಆಕೆಗೆ ಮೂರು ಲಕ್ಷ ರೂಪಾಯಿಯಷ್ಟು ಸಾಲ ಇದೆ. ಅವರ ಪತಿಗೆ ಕಿವಿ ಕೇಳಲ್ಲ, ಮಾತು ಬರಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ರಮ್ಯಾ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಗೆದ್ದದ್ದು 160,000 ರೂಪಾಯಿ.

320,000 ರೂಪಾಯಿಯ ಪ್ರಶ್ನೆ ನೋಡಿ ಆಟ ಕ್ವಿಟ್ ಮಾಡಿದ್ದ ರಮ್ಯಾ ಅವರ ಕಷ್ಟಕ್ಕೆ ಸ್ಪಂದಿಸಲು ಇಡೀ 'ಕನ್ನಡದ ಕೋಟ್ಯಧಿಪತಿ' ತಂಡ ಕೈಜೋಡಿಸಿದೆ. 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಕೆಲಸ ಮಾಡುವ ತಂತ್ರಜ್ಞರೆಲ್ಲಾ ತಮಗೆ ಸಿಗುವ ಸಂಬಳದಲ್ಲಿ ರಮ್ಯಾ ಅವರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ.
ಹಾಗೆ ತಂತ್ರಜ್ಞರಿಂದೆಲ್ಲಾ ಒಟ್ಟಾಗಿ ಸೇರಿಸಿದ ಮೊತ್ತ 160,000 ರೂಪಾಯಿ. ಈ ಚೆಕ್ ನ ರಮ್ಯಾ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೀಡಿದರು. ಆಗ ರಮ್ಯಾ ಅವರ ಹೃದಯ ತುಂಬಿ ಬಂತು. ತಮ್ಮ ಕಷ್ಟಕ್ಕೆ ಸ್ಪಂದಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನ ರಮ್ಯಾ ಅರ್ಪಿಸಿದರು.
ಒಂದು ಶೋ ಅಂದ್ಮೇಲೆ ಅಲ್ಲಿ ನೂರಾರು ಜನ ಬರ್ತಾರೆ. ತಮ್ಮ ಕಷ್ಟಗಳನ್ನ ಹೇಳಿಕೊಳ್ಳುತ್ತಾರೆ. ಕೇವಲ ಟಿ.ಆರ್.ಪಿಗಾಗಿ ಜನರ ಕಷ್ಟವನ್ನು ತೋರಿಸದೆ, ತಮ್ಮ ಕೈಲಾದ ಸಹಾಯವನ್ನೂ ಮಾಡಿರುವ 'ಕನ್ನಡದ ಕೋಟ್ಯಧಿಪತಿ' ತಂಡದ ಈ ನಡೆ ನಿಜಕ್ಕೂ ಮೆಚ್ಚುವಂಥದ್ದು ಅಲ್ವೇ.?
{ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್}


Click it and Unblock the Notifications











