Actress Ramola:'ಕನ್ನಡತಿ' ಬಳಿಕ ವೆಡ್ಡಿಂಗ್ ಪ್ಲಾನರ್ ಆಗಿ ಎಂಟ್ರಿ ಕೊಟ್ಟ ನಟಿ ರಮೋಲಾ.. ಏನಿವರ ಕಥೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಕನ್ನಡತಿ' ವಿಭಿನ್ನ ಕಥೆಯ ಮೂಲಕ ಸೀರಿಯಲ್ ವೀಕ್ಷಕರ ಮನ ಸೆಳೆದಿತ್ತು. 'ಕನ್ನಡತಿ' ಧಾರಾವಾಹಿಯಲ್ಲಿ ಖಳನಾಯಕಿ ಸಾನಿಯಾ ಆಗಿ ಅಭಿನಯಿಸಿದ್ದ ರಮೋಲಾ ಮೊದಲ ಧಾರಾವಾಹಿಯಲ್ಲಿಯೇ ನೆಗೆಟಿವ್ ಪಾತ್ರದ ಮೂಲಕ ಮೋಡಿ ಮಾಡಿದ ಬೆಡಗಿ. ತದ ನಂತರ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದ ಈ ನಟಿ ನಂತರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
'ರಿಚ್ಚಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡ ರಮೋಲಾ ಅಲ್ಲಿ ಕೊಂಚ ಕಿರಿಕ್ ಮಾಡಿಕೊಂಡಿದ್ದು ಕೂಡಾ ಸುದ್ದಿಯಾಗಿತ್ತಂತೆ. ರಮೋಲಾ ಸರಿಯಾಗಿ ಡೇಟ್ಸ್ ನೀಡುತ್ತಿಲ್ಲ ಎಂದು ಚಿತ್ರತಂಡ ರಮೋಲಾ ವಿರುದ್ಧ ಆರೋಪವನ್ನು ಕೂಡಾ ಮಾಡಿತ್ತಂತೆ. ತದ ನಂತರ ಬೇರೆ ಸಿನಿಮಾದಲ್ಲಿ ಕಾಣಿಸಿಕೊಂಡಿರದ ರಮೋಲಾ ಮತ್ತೆ ಮುಖ ಮಾಡಿದ್ದು ಕಿರುತೆರೆಯತ್ತ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ರಮೋಲಾ. ಆಸ್ತಿ, ಅಂತಸ್ತಿನ ಆಸೆಗಾಗಿ ನಾಯಕ ಗೌತಮ್ ದಿವಾನ್ ಅವರನ್ನು ಮದುವೆಯಾಗುವ ಹುಡುಗಿ ರಶ್ಮಿಕಾನಾಗಿ ನಟಿಸಿದ್ದರು. ಅದು ಕೇವಲ ಒಂದೆರಡು ದಿನದ ಸಂಚಿಕೆಯಾಗಿದ್ದರೂ ಆಕೆಯ ಕಂಬ್ಯಾಕ್ ವೀಕ್ಷಕರಿಗೆ ಖುಷಿ ನೀಡಿತ್ತು.
ಹೀಗಿರುವಾಗ ಈಕೆ ಇದೀಗ ಮತ್ತೆ ತವರುಮನೆಗೆ ಮರಳಿ ಬಂದಿದ್ದಾರೆ. ಅರ್ಥಾತ್ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಯೊಂದರಲ್ಲಿ ರಮೋಲಾ ಬಣ್ಣ ಹಚ್ಚುತ್ತಿದ್ದಾರೆ . ಸ್ವಪ್ನ ಕೃಷ್ಣ ನಿರ್ದೇಶನದಡಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ಸಾರಾ ಆಗಿ ರಮೋಲಾ ನಟಿಸಲಿದ್ದಾರೆ.
ಧಾರಾವಾಹಿಯ ಆರಂಭದಲ್ಲಿ ದೀಪಿಕಾ ದಾಸ್ ವೆಡ್ಡಿಂಗ್ ಪ್ಲಾನರ್ ಸಮಿರಾ ಆಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ತಂಗಿ ಸಾರಾ ಆಗಿ ರಮೋಲಾ ತೆರೆಯ ಮೇಲೆ ಮೋಡಿ ಮಾಡಲಿದ್ದಾರೆ. ನೆಗೆಟಿವ್ ಶೇಡ್ ಇರುವ ಪಾತ್ರ ಇದಾಗಿದ್ದು ಮಗದೊಮ್ಮೆ ವಿಲನ್ ಆಗಿ ಕಿರುಪರದೆಯ ಮೇಲೆ ಅಬ್ಬರಿಸಲು ತಯಾರಾಗಿದ್ದಾರೆ ರಮೋಲಾ.

ಅಂದ ಹಾಗೇ ದೀಪಿಕಾ ದಾಸ್ ಅವರಂತೆ ರಮೋಲಾ ಕೇವಲ ಅತಿಥಿ ಪಾತ್ರವಾಗಿ ಕೆಲವು ಸಂಚಿಕೆಗಳಲ್ಲಷ್ಟೇ ಕಾಣಿಸಿಕೊಳ್ಳಲಿದ್ದಾರಾ ಅಥವಾ ಧಾರಾವಾಹಿ ಉದ್ದಕ್ಕೂ ರಮೋಲಾ ಅವರ ಪಾತ್ರ ಇರಲಿದೆಯಾ ಎಂಬುದು ಮಾತ್ರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ಸದ್ಯಕ್ಕಂತೂ ತಮ್ಮ ನೆಚ್ಚಿನ ನಟಿಯನ್ನು ಟಿವಿಯ ಮೇಲೆ ನೋಡಿ ಕಣ್ತುಂಬಿಸಿಕೊಳ್ಳುವ ಭಾಗ್ಯ ಕಿರುತೆರೆ ವೀಕ್ಷಕರಿಗೆ ಒಲಿದಿದೆ.


Click it and Unblock the Notifications











