'ಸ್ವಪ್ನ ಮಂಟಪ'ದಲ್ಲಿ 'ಕನ್ನಡತಿ' ಬ್ಯುಸಿ; ಮತ್ತೆ ಕಿರುತೆರೆಗೆ ಬರೋದಿಲ್ವಾ ರಂಜಿನಿ ರಾಘವನ್?
ನಟಿ ರಂಜಿನಿ ರಾಘವನ್ ಕಿರುತೆರೆ ಹಾಗೂ ಹಿರಿತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಿತವಿರುವ ಮುಖ. 'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ ಬೆಡಗಿ ರಂಜನಿ ರಾಘವನ್.
ಗೌರಿಯಾಗಿ ನಟಿಸಿ ಕನ್ನಡ ಕಿರುತೆರೆ ವೀಕ್ಷಕರ ಮನೆ ಮಗಳಾಗಿ ಮಿಂಚಿದ ರಂಜನಿ ರಾಘವನ್ ನಂತರ ಭುವನೇಶ್ವರಿಯಾಗಿ ನಟಿಸಿದ್ದರು. 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ನಟಿಸಿದ್ದ ಈಕೆ ಮತ್ತೊಮ್ಮೆ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದರು. ಜೊತೆಗೆ ಇವರ 'ಸಿರಿಗನ್ನಡಂ ಗೆಲ್ಗೆ' ಸೀರೀಸ್ ಬಹಳಷ್ಟು ಜನಪ್ರಿಯತೆ ಪಡೆದಿತ್ತು.

'ಕನ್ನಡತಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ರಂಜನಿ ರಾಘವನ್ ಇದೀಗ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಸದ್ಯ ಸಿನಿಮಾ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವ ಇವರು "ಒಬ್ಬ ಸಮರ್ಥ ನಿರ್ದೇಶಕ ಮಾತ್ರವಷ್ಟೇ ನಟರಿಂದ ನಿಜವಾದ ನಟನಾ ಶಕ್ತಿಯನ್ನು ಹೊರ ತೆಗೆಯಬಲ್ಲ. ಬದಲಾಗಿ ನಿರ್ದೇಶಕರಿಗೆ ಸರಿಯಾದ ಆತ್ಮ ವಿಶ್ವಾಸವಿಲ್ಲದಿದ್ದರೆ, ಆ ನಟನೆ ನೈಜವಾಗಿ ಕಾಣುವುದಿಲ್ಲ" ಎಂದು ನಿರ್ದೇಶನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ರಂಜಿನಿ ರಾಘವನ್ ಹೇಳಿಕೊಂಡಿದ್ದಾರೆ.
ಇದೀಗ ನಟಿ ರಂಜಿನಿ ರಾಘವನ್ 'ಸ್ವಪ್ನ ಮಂಟಪ' ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ನಟ ವಿಜಯ ರಾಘವೇಂದ್ರ ಅವರೊಂದಿಗೆ ಮತ್ತೊಮ್ಮೆ ನಟಿಸುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಅವರದ್ದೇ ಕಾದಂಬರಿ 'ಸ್ವಪ್ನ ಮಂಟಪ'ದ ಕಥ ಹಂದರವನ್ನು ಇಟ್ಟುಕೊಂಡಿದೆ.

ನಟನೆಯ ಹೊರತಾಗಿ ಡ್ಯಾನ್ಸ್ ಹಾಗೂ ಸಿಂಗಿಂಗ್ ನಲ್ಲೂ ಇರುವ ನಟಿ ರಂಜಿನಿ ರಾಘವನ್ ಒಂದು ರೀತಿಯಲ್ಲಿ ಆಲ್-ರೌಂಡರ್ ಎಂದರೆ ತಪ್ಪಾಗಲ್ಲ. ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಆಗಾಗ ತಮ್ಮ ಹಾಡುಗಳನ್ನು ಶೇರ್ ಮಾಡಿಕೊಳ್ಳುವ ನಟಿ ರಂಜಿನಿ ರಾಘವನ್ ಅವರು ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ಬೆಡಗಿ. ಈಗಾಗಲೇ ಅವರು ಬರೆದಿರುವ ಎರಡು ಪುಸ್ತಕಗಳು ಬಿಡುಗಡೆಯಾಗಿದ್ದು, ಓದುಗರ ಮೆಚ್ಚುಗೆಗೂ ಪಾತ್ರವಾಗಿದೆ.
ಇನ್ನು ಸಿನಿಮಾ ವಿಚಾರಗಳು ಬಂದರೆ 'ನೈಟ್ ಕರ್ಫ್ಯೂ', 'ಸತ್ಯಂ' ಸಿನಿಮಾಗಳಲ್ಲಿ ಈಕೆ ನಟಿಸಿದ್ದಾರೆ. ಇದರ ಜೊತೆಗೆ 'ಹಕೂನಾ ಮಟಾಟ' ಎನ್ನುವ ವೆಬ್ ಸಿರೀಸ್‌ನಲ್ಲಿಯೂ ಈಕೆ ಅಭಿನಯಿಸಿದ್ದಾರೆ. 'ಕನ್ನಡತಿ' ಧಾರಾವಾಹಿಯಲ್ಲಿ ಕೊನೆಯದಾಗಿ ನಟಿಸಿರುವ ಈಕೆ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ 'ಪುಟ್ಟ ಗೌರಿ ಮದುವೆ', 'ಕನ್ನಡತಿ'ಯಲ್ಲಿ ನಟಿಸಿದ ಈಕೆ ಮಲಯಾಳಂನ 'ಪೌರ್ಣಮಿ ತಿಂಗಳ್'ನಲ್ಲಿ ನಟಿಸಿದ್ದಾರೆ. ಇನ್ನು 'ಇಷ್ಟದೇವತೆ' ಧಾರಾವಾಹಿಗೆ ಸಂಭಾಷಣೆ ಬರೆದಿರುವ ಈಕೆ ಆ ಧಾರಾವಾಹಿಗೆ ಸಹ ನಿರ್ದೇಶಕರಾಗಿಯೂ ಕಾಣಿಸಿಕೊಂಡಿದ್ದಾರೆ.


Click it and Unblock the Notifications











