ಡಾಕ್ಟರ್ ಕರ್ಣನಾಗಿ ಕಿರುತೆರೆಗೆ ಮರಳಿದ ಕಿರಣ್ ರಾಜ್: ವೀಕ್ಷಕರಿಗೆ ಹೀರೋಯಿನ್‌ದೇ ಚಿಂತೆ
'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷ ಪಾತ್ರದಲ್ಲಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಕಿರಣ್ ರಾಜ್ ಇದೀಗ ಕರ್ಣನಾಗಿ ಬದಲಾಗಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಕಿರಣ್ ರಾಜ್ ಅವರು ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ.
ಶ್ರುತಿ ನಾಯ್ಡು ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಕರ್ಣ'ದಲ್ಲಿ ನಾಯಕ ಕರ್ಣನಾಗಿ ಅಭಿನಯಿಸಲಿದ್ದಾರೆ ಕಿರಣ್ ರಾಜ್. ಅಂದ ಹಾಗೇ ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಕಿರುತೆರೆಯಲ್ಲಿ ಕಿರಣ್ ರಾಜ್ ಕಾಣಿಸಿಕೊಳ್ಳಲಿದ್ದು, ಪ್ರೋಮೋದಲ್ಲಿ ಇವರನ್ನು ಕಂಡು ಕಿರುತೆರೆ ವೀಕ್ಷಕರು ಖುಷಿ ಪಟ್ಟಿದ್ದಾರೆ.

ಇನ್ನು ಜೀ ಕನ್ನಡ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ 'ಕರ್ಣ' ಧಾರಾವಾಹಿಯ ಪ್ರೋಮೋ ಹರಿದಾಡುತ್ತಿದ್ದು, ಎರಡು ಲಕ್ಷಕ್ಕೂ ಅಧಿಕ ಜನ ಇದನ್ನು ನೋಡಿದ್ದಾರೆ. ಮೂವತ್ತಾರು ಸಾವಿರ ಮಂದಿ ಈ ಪ್ರೋಮೋವನ್ನು ಶೇರ್ ಮಾಡಿದ್ದು ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿದೆ. "ದಯವಿಟ್ಟು ಈ ಕಥೆಗೆ ಹಿರೋಯಿನ್ ರಂಜಿನಿ ಅವರೇ ಆಗಿರ್ಲಿ", " ಹೀರೋಯಿನ್ ಯಾರು? ನಮ್ಮ ಭುವಿ ಮೇಡಂ ಆದ್ರೆ ಚೆನ್ನಾಗಿರುತ್ತೆ", "ಮೋಕ್ಷಿಯನ್ನು ಹೀರೋಯಿನ್ ಮಾಡ್ಕೊಳ್ಳಿ, ಪೇರ್ ಚೆನ್ನಾಗಿರುತ್ತೆ", "ಭವ್ಯಾ ಅವರನ್ನು ಹೀರೋಯಿನ್ ಆಗಿ ಮಾಡ್ಕೊಳ್ಳಿ" ಅನ್ನೋ ಕಮೆಂಟ್‌ಗಳ ಸುರಿಮಳೆಯೇ ಬಂದಿದೆ.
ಧಾರಾವಾಹಿಯ ಪ್ರೋಮೋ ಅದ್ಭುತವಾಗಿದ್ದು ಸೀರಿಯಲ್ ಪ್ರಿಯರ ಜೊತೆಗೆ ನೆಟ್ಟಿಗರ ಮನವನ್ನು ಸೆಳೆದಿದೆ. ನಾಯಕ ಕರ್ಣ ಬೆಳಗ್ಗೆ ಎದ್ದು ದೇವರಿಗೆ ಪೂಜೆ ಮಾಡಿ ಅಪ್ಪ ಅಮ್ಮನಿಗೆ ಕಾಫಿ ಕೊಡುತ್ತಾನೆ. ಅಪ್ಪ ಕಾಫಿ ಬೇಡ ಎನ್ನುತ್ತಾರೆ. ಅಮ್ಮ ನನಗೆ ಕೊಡು ಎನ್ನುತ್ತಾರೆ. ಅಪ್ಪನ ಕಾಲು ಹಿಡಿಯಲು ಬಂದಾಗ ಅಪ್ಪ ಕಾಲನ್ನು ಹಿಂತೆಗೆಯುತ್ತಾರೆ. ನಂತರ ಅತ್ತೆಗೆ ಜ್ಯೂಸ್ ಕೊಟ್ಟಾಗ ಆಕೆ ಸೀರೆಗೆ ಇಸ್ತ್ರಿ ಹಾಕಲು ಹೇಳುತ್ತಾಳೆ. ಅದನ್ನು ಮಾಡುತ್ತಾನೆ. ಅಜ್ಜಿಗೆ ಕನ್ನಡಕ ಕೊಡುವ ಆತ ಚಿಕ್ಕಮ್ಮನಿಗೆ ತುಂಡಾದ ಚಪ್ಪಲಿಯನ್ನು ಹೊಲಿಸಿ ತರಲು ಹೋಗುತ್ತಾನೆ. ಇದೆಲ್ಲವನ್ನು ಅಂದರೆ ಮನೆಯ ಕೆಲಸವನ್ನು ಲೀಲಾಜಾಲವಾಗಿ ಮಾಡುವ ಕರ್ಣ ವೃತ್ತಿಯಲ್ಲಿ ಗೈನಕಾಲಜಿಸ್ಟ್. ಡಾಕ್ಟರ್ ಕರ್ಣನಿಗೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಾಗ ಅವನು ಈ ಎಲ್ಲಾ ಕ್ರೆಡಿಟ್ ಅನ್ನು ಮನೆಯವರಿಗೆ ಕೊಡುತ್ತಾನೆ.
ಆದರೆ, ಆಗ ಆತನ ತಂದೆ ತಿಪ್ಪೆಗುಂಡಿಯಲ್ಲಿ ಬಿದ್ದಿದ್ದ ಕರ್ಣನನ್ನು ನಾನು ಮನೆ ಮಗ ಅಂತ ಒಪ್ಪಿಕೊಳ್ಳಲ್ಲ ಎಂದು ತಂದೆ ಹೇಳುತ್ತಾರೆ. ಅವರು ಯಾಕೆ ಹೀಗೆ ಹೇಳಿದರು? ಅನಾಥ ಮಗು ಸಿಕ್ಕಿದ್ದು ಎಲ್ಲಿ? ಡಾಕ್ಟರ್ ಆಗಿದ್ದು ಹೇಗೆ? ಎಂಬೆಲ್ಲಾ ವೀಕ್ಷಕರ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬೇಕಿದೆ. ಕಿರಣ್ ರಾಜ್ ಹೊರತುಪಡಿಸಿ ತಾರಾಗಣದಲ್ಲಿ ಹಿರಿಯ ನಟಿ ಆಶಾರಾಣಿ, ಸುಂದರ್ ವೀಣಾ, ವೀಣಾ ರಾವ್, ನಾಗಭರಣ, ಸಿಮ್ರನ್ ಮುಂತಾದವರಿದ್ದಾರೆ.
'ಕನ್ನಡತಿ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದ ಕಿರಣ್ ರಾಜ್ ನಂತರ ಧಾರಾವಾಹಿಗಳಿಂದ ದೂರವಿದ್ದರು. ಮುಂದೆ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡ ಇವರು 'ಭರ್ಜರಿ ಗಂಡು', 'ರಾನಿ', 'ಮೇಘ' ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾದಲ್ಲಿಯೂ ನಟನಾ ಛಾಪನ್ನು ಪಸರಿಸಿದರು. ಕಿರುತೆರೆಯ ಮೂಲಕ ನಟನಾ ಲೋಕದ ನಂಟು ಬೆಳೆಸಿಕೊಂಡು ಮುಂದೆ ಸಿನಿಮಾದಲ್ಲಿಯೂ ಮೋಡಿ ಮಾಡಿದ ಕಿರಣ್ ರಾಜ್ ಅವರ ಕಿರುತೆರೆ ಪಯಣ ಶುರುವಾಗಿದ್ದು 'ದೇವತೆ' ಧಾರಾವಾಹಿಯ ಮೂಲಕ.
ನಟನೆಯ ಮೂಲಕ ಸದ್ದು ಮಾಡಿರುವ ಕಿರಣ್ ರಾಜ್‌ಗೆ ಮೊದಲಿನಿಂದಲೂ ನಟನೆಗಿಂತಲೂ ನಿರ್ದೇಶನದತ್ತ ವಿಶೇಷ ಆಸಕ್ತಿ. ಅದೇ ಕಾರಣದಿಂದ ಮುಂಬೈಗೆ ಹೋದ ಕಿರಣ್ ರಾಜ್ ಅಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಕಲಿತರು. ಜೊತೆಗೆ ಅಲ್ಲೇ ಸಿಕ್ಕ ಸಣ್ಣ ಅವಕಾಶಗಳ ಸದುಪಯೋಗ ಮಾಡಿಕೊಂಡ ಅವರು ಜೀ ಟಿವಿ, ಸ್ಟಾರ್ ಪ್ಲಸ್, ಬಿಂದಾಸ್, ಜೀ ಕೆಫೆ ಹೀಗೆ ಹಿಂದಿ ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲೈಫ್ ಸೂಪರ್ ಗುರು' ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡ ಕಿರಣ್ ರಾಜ್ ನಂತರ ಬದಲಾದುದು ನಕುಲ್ ಆಗಿ. 'ಕಿನ್ನರಿ' ಧಾರಾವಾಹಿಯಲ್ಲಿ ನಾಯಕ ನಕುಲ್ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಕಿರಣ್ ರಾಜ್ ಮುಂದೆ ಹಾರಿದ್ದು ಸಿನಿಮಾಗೆ. 'ಮಾರ್ಚ್ 22' ಸಿನಿಮಾದಲ್ಲಿ ನಟಿಸಿರುವ ಕಿರಣ್ ರಾಜ್ ಮುಂದೆ 'ಅಸತೋಮ ಸದ್ಗಮಯ' ಸಿನಿಮಾಗಳಲ್ಲಿ ನಟಿಸಿದರು. ನಂತರ ಹರ್ಷ ಆಗಿ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಆದ ಕಿರಣ್ ರಾಜ್ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.


Click it and Unblock the Notifications











