ಕನ್ನಡ ಬಿಗ್ ಬಾಸ್ 2ನೇ ದಿನ ಮಿಂಚಿದ ಮದ್ದಾನೆಗಳು
ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಎರಡನೇ ದಿನಕ್ಕೆ ಅಡಿಯಿಟ್ಟಿದೆ. ಎರಡನೇ ದಿನ ಬಹುತೇಕ ನೀರಸವಾಗಿತ್ತು. ಬಹುಶಃ ನರ್ಸ್ ಜಯಲಕ್ಷ್ಮಿ ಹಾಗೂ 'ಬೃಹತ್ ಬ್ರಹ್ಮಾಂಡ' ಸ್ವಾಮೀಜಿ ಇಲ್ಲದಿದ್ದರೆ 'ಬಿಗ್ ಬಾಸ್' ಕಥೆ ಹರೋಹರವಾಗುತ್ತಿತ್ತೇನೋ!
ಸ್ಪರ್ಧಿಗಳಿಗೆ ಬಿಗ್ ಬಾಸ್ ಎರಡನೇ ದಿನ ಒಂದು ಕೆಲಸ ಕೊಟ್ಟಿದ್ದಾನೆ. ಅದೇನೆಂದರೆ ಅವರು ಒದಗಿಸುವ ಸೌದೆ, ಎಣ್ಣೆ ಮುಂತಾದ ಪರಿಕರಗಳನ್ನು ಬಳಸಿಕೊಂಡು ಎರಡು ರಾತ್ರಿ ಒಂದು ಹಗಲು ಹೋಮಕುಂಡದಲ್ಲಿ ಬೆಂಕಿ ನಂದದಂತೆ ನೋಡಿಕೊಳ್ಳಬೇಕು.
ನರೇಂದ್ರ ಬಾಬು ಶರ್ಮಾ ಹಾಗೂ ನರ್ಸ್ ಜಯಲಕ್ಷ್ಮಿ ಅವರೇ ಹೋಮಕುಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಕೌಂಟ್ ಡೌನ್ ಶುರುವಾಗಿದೆ. ಎಂದಿನಂತೆ ಅನುಶ್ರೀ, ಅಪರ್ಣಾ ಗೆಲುವಾಗಿ ಕಂಡುಬಂದರೆ ನಿಖಿತಾ, ವಿಜಯ ರಾಘವೇಂದ್ರ, ಚಂದ್ರಿಕಾ, ಶ್ವೇತಾ, ಅರುಣ್ ತಮ್ಮ ಪಾಡಿಗೆ ತಾವಿದ್ದರು. ಮೊದಲ ದಿನದ ಮಸಲತ್ತುಗಳು.

ಸಂಜನಾ, ತಿಲಕ್ ನಡುವೆ ರಸಹೀನ ತಿಕ್ಕಾಟ
ಸಂಜನಾ ಮತ್ತು ತಿಲಕ್ ನಡುವೆ ಒಂದಷ್ಟು ರೋಚಕ ಸನ್ನಿವೇಶಗಳು ನಡೆದವು. ಸಂಜನಾ ಅವರಂತೂ ನಾನೇನು ನಿನ್ನ 'ಸವತಿ'ನಾ ಎಂದು ಕೇಳಿ ಒಂದಷ್ಟು ತಿಲಕ್ ರನ್ನು ಚೇಡಿಸಿದರಾದರೂ ಪ್ರಯೋಜನವಾಗಲಿಲ್ಲ. ಇನ್ನೇನು ನಿರೀಕ್ಷಿಸುತ್ತಿದ್ದ ವೀಕ್ಷಕರು ನಿರಾಸೆಗೊಂಡರು.

ಸೊಂಟ ಕುಣಿಸಲು ಹೋಗಿ ಸುಸ್ತಾದ ಜಯಲಕ್ಷ್ಮಿ
ಒಂದು ಹಂತದಲ್ಲಿ ನರ್ಸ್ ಜಯಲಕ್ಷ್ಮಿ ಅವರು ಕಡಾಯಿ ಪಾತ್ರಯಂತಹ ತಮ್ಮ ಸೊಂಟವನ್ನು ಕುಣಿಸಲು ಪ್ರಯತ್ನಿಸಿ ವಿಫಲರಾದರು. ಅವರ ಸೊಂಟ ಒಂಚೂರು ಬಾಗಲಿಲ್ಲ, ಬಳುಕಲಿಲ್ಲ ಕಡೆಗೆ ಶೇಕ್ ಸಹ ಆಗದೆ ಇದ್ದದ್ದು ಅಚ್ಚರಿ.

ಮುಸಿಮುಸಿ ನಕ್ಕ ನರೇಂದ್ರ ಬಾಬು ಶರ್ಮಾ
ನರೇಂದ್ರ ಬಾಬು ಶರ್ಮಾ ಅವರಂತೂ ಇದೆಲ್ಲವನ್ನೂ ನೋಡುತ್ತಾ ಒಳಗೊಳಗೆ ಮುಸಿಮುಸಿ ನಗುತ್ತಿದ್ದರು. ಒಂದು ಸಂದರ್ಭದಲ್ಲಂತೂ ಜಯಲಕ್ಷ್ಮಿ ಅವರು ತಾವು ಕರ್ನಾಟಕದ ಮೊದಲ ಮಹಿಳಾ ಸಿಎಂ ಆಗಬೇಕು ಎಂಬ ತಮ್ಮ ಕನಸನ್ನು ಹೇಳಿಕೊಂಡರು.

ಜಯಲಕ್ಷ್ಮಿ ಮಹಿಳಾ ಸಿಎಂ ಆಗ್ತಾರಂತೆ!
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಸೀಟಿನ ಮೇಲೆ ಒಮ್ಮೆ ಕೂರಲೇಬೇಕು ಎಂದರು. ಇದಕ್ಕೆ ನಡುವೆ ಬಾಯಿ ಹಾಕಿದ ಶರ್ಮಾ, ಮೂರನೇ ಮಹಡಿನೇ ಯಾಕಾಗಬೇಕು ಗ್ರೌಂಡ್ ಫ್ಲೋರಲ್ಲೇ ಕೂರಿ ಎಂದರು.

ಪುಟಗೋಸಿ ವಾಸ್ತು ಸರಿಯಿಲ್ಲ ಎಂದ ಶರ್ಮಾ
ಮೂರನೇ ಫ್ಲೋರಲ್ಲಿ ಪುಟಗೋಸಿ ವಾಸ್ತು ಸರಿ ಇಲ್ಲ ಎಂದೂ ಹೇಳಿ ಜಯಲಕ್ಷ್ಮಿ ಅವರನ್ನು ಪಕಪಕ ನಗಿಸಿದರು. ಒಟ್ಟಿನಲ್ಲಿ ಎರಡು ಮದ್ದಾನೆಗಳ ಸರಸ ಸಂಭಾಷಣೆ ವೀಕ್ಷಕರಿಗೆ ಸಖತ್ ಮಜಾ ಕೊಟ್ಟಿದೆ.

ಅಯ್ಯೋ ಜಯಲಲಿತಾ ಕ್ಯಾಬರೆ ಡಾನ್ಸರ್ ಬಿಡ್ರಿ
ಇನ್ನೂ ಒಂದು ಹಂತದಲ್ಲಿ ನರೇಂದ್ರ ಬಾಬು ಶರ್ಮಾ ಅವರು ಜಯಲಲಿತಾ ಹಾಗೂ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಕ್ಯಾಬರೆ ಡಾನ್ಸರ್ ಗಳು ಎಂದು ಹೇಳಿದರು. ಅಯ್ಯೋ ಅವರು ಅಧಿಕಾರದಲ್ಲಿ ಇದ್ದಾಗಲೇ ಈ ಮಾತು ಅಂದಿದ್ದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.

ಟಾಯ್ಲೆಟ್ ಕ್ಲೀನ್ ಮಾಡಿದ ಅನುಶ್ರೀ
ಅನುಶ್ರೀ ಟಾಯ್ಲೆಟ್ ಸ್ವಚ್ಛಗೊಳಿಸಿದ್ದು, ಸ್ವಿಮ್ ಸೂಟಲ್ಲಿ ಚಂದ್ರಿಕಾ ಈಜಾಡಿದ್ದು, ಜಯಲಕ್ಷ್ಕಿ ಅವರನ್ನು ಅರುಣ್ ಸಾಗರ್ ಛೇಡಿಸಿದ್ದು ಎಂದಿನಂತೆ ಶರ್ಮಾ ನಾಲಿಗೆಗೆ ಫಿಲ್ಡರ್ ಇಲ್ಲದಂತೆ ಮಾತನಾಡಿದ್ದು ಎರಡನೇ ದಿನದ ಹೈಲೈಟ್ಸ್.


Click it and Unblock the Notifications











