BBK 12: ಬಿಗ್‌ಬಾಸ್ ಮನೆಗೆ 'ಕಾಂತಾರ- 1' ಸಿನಿಮಾ ನಟ ವೈಲ್ಡ್ ಕಾರ್ಡ್ ಎಂಟ್ರಿ ಫಿಕ್ಸ್?
ಬಿಗ್‌ಬಾಸ್ ಕನ್ನಡ ಸೀಸನ್ 12ರ ಮೊದಲ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಶೋ ಶುರುವಾದ 3ನೇ ವಾರದಲ್ಲೇ ಫಿನಾಲೆ ನಡೆಸಿ ಕೆಲ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಿ ಒಂದಷ್ಟು ಜನರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಕಳುಹಿಸುವ ಪ್ರಯತ್ನ ನಡೀತಿದೆ.
ಈಗಾಗಲೇ ಗ್ರ್ಯಾಂಡ್ ಫಿನಾಲೆ ಮೊದಲ ದಿನದ ಪ್ರೋಮೊ ಕೂಡ ಬಂದಿದೆ. ಮನೆ ಸೇರಿರುವ ದೆವ್ವವನ್ನು ಓಡಿಸಲು ಸುದೀಪ್ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ದೊಡ್ಮನೆಯಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಹಾಗೂ ಜಾಹ್ನವಿ ಕತ್ತಿ ಮಸೆಯುತ್ತಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಒಟ್ಟು 19 ಜನ ಸ್ಪರ್ಧಿಗಳು ಈ ಬಾರಿ ಮನೆ ಪ್ರವೇಶಿಸಿದ್ದರು. ಮೊದಲ ವಾರವೇ ಇಬ್ಬರು ಆರ್‌ಜೆ ಅಮಿತ್, ಬಾಡಿ ಬಿಲ್ಡರ್ ಕರಿಬಸಪ್ಪ ಎಲಿಮಿನೇಟ್ ಆಗಿದ್ದರು.

ಸದ್ಯ 17 ಮಂದಿ ಈಗ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಕೆಲವರು ಗ್ರ್ಯಾಂಡ್ ಫಿನಾಲೆಗೂ ಮುನ್ನ ಸೇಫ್ ಆಗಿ ಮುಂದೆ ಆಟ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ವಾರದ ಮಧ್ಯದಲ್ಲೇ ಸತೀಶ್ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ನಾಲ್ಕೈದು ಜನ ಹೊರ ಬರುವ ಸಾಧ್ಯತೆ ದಟ್ಟವಾಗಿದೆ. ಇನ್ನು ಯಾರೆಲ್ಲಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗಲು ನ್ಯೂಸ್ ಆಂಕರ್ ದಿವ್ಯಾ ವಸಂತ, ಕಿರುತೆರೆ ನಟಿ ಶ್ವೇತಾ ಪ್ರಸಾದ್, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುಧಾಕರ್ ಸೇರಿ ಸಾಕಷ್ಟು ಜನರ ಹೆಸರು ಕೇಳಿಬಂದಿತ್ತು. ಆದರೆ ಅವರ್ಯಾರು ಮನೆ ಒಳಗೆ ಹೋಗಲಿಲ್ಲ. ನಟಿ ಶ್ವೇತಾ ಪ್ರಸಾದ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ 'ಕಾಂತಾರ'-1 ಚಿತ್ರ ನಟ ಕೂಡ ಮನೆ ಒಳಗೆ ಹೋಗುವುದು ಖಚಿತ ಎನ್ನಲಾಗ್ತಿದೆ.

ಕಲರ್ಸ್ ಕನ್ನಡ 'ಕ್ವಾಟೆ ಕಿಚನ್' ಶೋ ವಿನ್ನರ್ ರಾಘವೇಂದ್ರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಹೋಗ್ತಾರೆ ಎನ್ನಲಾಗ್ತಿದೆ. 'ಕಾಂತಾರ- 1' ಚಿತ್ರದ ಖಡಕ್ ಪಾತ್ರದಲ್ಲಿ ಕೂಡ ರಘು ನಟಿಸಿದ್ದಾರೆ. ಅದಕ್ಕಾಗಿ ನಾಲ್ಕೈದು ಗಂಟೆ ಮೇಕಪ್ ಹಾಕಿಕೊಂಡು ಸಿದ್ಧತೆ ನಡೆಸಿದ್ದರು. ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಡಿ ಬಿಲ್ಡರ್, ಸೆಲೆಬ್ರೆಟಿ ಜಿಮ್ ಕೋಚ್ ಆಗಿರುವ ರಘು ಮಲಯಾಳಂನ 'ವೃಷಭ' ಚಿತ್ರದಲ್ಲಿ ಸಹ ನಟಿಸಿದ್ದಾರೆ.
ನಂದ ಕಿಶೋರ್ ನಿರ್ದೇಶನದ 'ವೃಷಭ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರದಲ್ಲಿ ಕೂಡ ರಘುಗೆ ಖಡಕ್ ಪಾತ್ರ ಸಿಕ್ಕಿದೆ. ಐದಾರು ಗಂಟೆ ಮೇಕಪ್ ಹಾಕಿಕೊಂಡು ವಿಚಿತ್ರ ಅವತಾರದಲ್ಲಿ ಅವರು ನಟಿಸಿದ್ದಾರೆ. ಆದರೆ ನನಗೆ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕೆ ಸಂಭಾವನೆ ಕೊಡಲಿಲ್ಲ ಎಂದು ರಘು ಇತ್ತೀಚೆಗೆ ಆರೋಪಿಸಿದ್ದರು. ಕಲರ್ಸ್ ಕನ್ನಡ ವಾಹಿನಿ ಕಾರ್ಯಕ್ರಮ, ಧಾರಾವಾಹಿ ಸ್ಪರ್ಧಿಗಳನ್ನು ಬಿಗ್‌ಬಾಸ್ ಮನೆಗೆ ಕಳುಹಿಸುವುದು ಹೆಚ್ಚು. ಹಾಗಾಗಿ ರಾಘವೇಂದ್ರ ಹೋಗುವುದು ಖಚಿತ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
ಹುರಿಗಟ್ಟಿದ ದೇಹ, ಖಡಕ್ ನೋಟದಿಂದ ರಾಘವೇಂದ್ರ ಗಮನ ಸೆಳೆಯುತ್ತಾರೆ. ಅವರು ಬಿಗ್‌ಬಾಸ್ ಮನೆಗೆ ಹೋದರೆ ಆಟದ ದಿಕ್ಕು ಬದಲಾಗುತ್ತದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ತೆಲುಗು ಬಿಗ್‌ಬಾಸ್ 9 ಶೋನಲ್ಲಿ ಕೂಡ ನಾಲ್ಕೈದು ಮಂದಿಯನ್ನು ಒಮ್ಮೆಲೆ ವೈಲ್ಡ್‌ಕಾರ್ಡ್ ಎಂಟ್ರಿ ಮೂಲಕ ಒಳಗೆ ಕಳುಹಿಸಿದ್ದಾರೆ. ಇದೇ ರೀತಿ ಈಗ ಕನ್ನಡದಲ್ಲಿ ಮಾಡಲಾಗ್ತಿದೆ.


Click it and Unblock the Notifications











